Advertisement

Find On Investigation: ವಾಲ್ಮೀಕಿ ಹಗರಣ ಸೂತ್ರಧಾರ ಮಾಜಿ ಸಚಿವ ಬಿ.ನಾಗೇಂದ್ರ: ಇ.ಡಿ.

04:03 AM Oct 10, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋ. ರೂ. ಅವ್ಯವಹಾರದ ಮಾಸ್ಟರ್‌ ಮೈಂಡ್‌ ಮಾಜಿ ಸಚಿವ ಬಿ.ನಾಗೇಂದ್ರ ಆಗಿದ್ದಾರೆ. 2024ರ ಬಳ್ಳಾರಿ ಲೋಕಸಭೆ ಚುನಾವಣೆಯ ಅಭ್ಯರ್ಥಿ ಬೆಂಬಲಿಸಲು ನಿಗಮದ 20.19 ಕೋ. ರೂ. ವಿನಿಯೋಗಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

Advertisement

ಇದು ಬುಧವಾರ ಜಾರಿ ನಿರ್ದೇಶನಾಲಯವು (ಇ.ಡಿ.) ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಪ್ರಾಸಿಕ್ಯೂಷನ್‌ಗೆ ಸಲ್ಲಿಸಿದ ದೂರು. ನ್ಯಾಯಾಲಯವು ಈ ದೂರನ್ನು ವಿಚಾರಣೆಗೆ ಒಳಪಡಿಸಿದೆ. ಈ ಮಧ್ಯೆ ತನಿಖೆಯ ಪ್ರಮುಖ ಅಂಶಗಳ ಮಾಹಿತಿಗಳನ್ನು ಒಳಗೊಂಡ ಪತ್ರಿಕಾ ಪ್ರಕಟ ನೆಯನ್ನು ಇ.ಡಿ. ಬಿಡುಗಡೆ ಮಾಡಿದೆ.

ಶಾಸಕ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರು ಪ್ರಮುಖ ಆರೋಪಿ ಮತ್ತು ಹಗರಣದ ಮಾಸ್ಟರ್‌ಮೈಂಡ್‌ ಆಗಿದ್ದಾರೆ. ನಾಗೇಂದ್ರರ ಪ್ರಮುಖ ಸಹಚರರಾದ ಸತ್ಯನಾರಾಯಣ ವರ್ಮ, ಏಟಕರಿ ಸತ್ಯನಾರಾಯಣ, ಜೆ.ಜಿ. ಪದ್ಮನಾಭ, ನಾಗೇಶ್ವರ್‌ ರಾವ್‌, ನೆಕ್ಕೆಂಟಿ ನಾಗರಾಜ್‌ ಹಾಗೂ ವಿಜಯ್‌ ಕುಮಾರ್‌ ಗೌಡ ಸಹಿತ 24 ಮಂದಿ ಹಗರಣದಲ್ಲಿ ಸಹಕರಿಸಿದ್ದಾರೆ ಎಂದು ಇ.ಡಿ. ದೃಢಪಡಿಸಿದೆ.

ಶೆಲ್‌ ಘಟಕಗಳ ಮೂಲಕ ಅಕ್ರಮ ವರ್ಗಾವಣೆ
ಕರ್ನಾಟಕ ಪೊಲೀಸ್‌ ಮತ್ತು ಸಿಬಿಐ ದಾಖಲಿಸಿದ ಎಫ್ಐಆರ್‌ಗಳ ಆಧಾರದ ಮೇಲೆ ಇ.ಡಿ. ತನಿಖೆ ಪ್ರಾರಂಭಿಸಿದೆ. ನಿಗಮದ ಖಾತೆಗಳಿಂದ ಸುಮಾರು 89.62 ಕೋ.ರೂ.ಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ನಕಲಿ ಖಾತೆಗಳಿಗೆ ಹಾಕಲಾಗಿದೆ. ಅನಂತರ ಶೆಲ್‌ ಘಟಕಗಳ ಮೂಲಕ ಅಕ್ರಮವಾಗಿ ಇದನ್ನು ವರ್ಗಾಯಿಸಲಾಗಿದೆ. ಮೇ 2024ರಲ್ಲಿ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಹಗರಣ ಬೆಳಕಿಗೆ ಬಂದಿತ್ತು.

ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ 187 ಕೋ. ರೂ. ಠೇವಣಿ
ಬಿ.ನಾಗೇಂದ್ರ ಅವರ ಪ್ರಭಾವದಿಂದ ನಿಗಮದ ಖಾತೆಯನ್ನು ಯಾವುದೇ ಸೂಕ್ತ ಅನುಮತಿಯಿಲ್ಲದೆ ಎಂ.ಜಿ. ರಸ್ತೆ ಶಾಖೆಗೆ ವರ್ಗಾಯಿಸಿರುವುದು ಇ.ಡಿ. ತನಿಖೆಯಿಂದ ತಿಳಿದುಬಂದಿದೆ. ರಾಜ್ಯ ಖಜಾನೆಯಲ್ಲಿದ್ದ ಗಂಗಾ ಕಲ್ಯಾಣ ಯೋಜನೆಯ 43.33 ಕೋ. ರೂ. ಸಹಿತ 187 ಕೋಟಿ ರೂ.ಗಳ ನ್ನು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸದೆ ಹಾಗೂ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ. ಈ ಹಣವನ್ನು ಬಳಿಕ ಅನೇಕ ಶೆಲ್‌ ಖಾತೆಗಳ (ನಕಲಿ ಖಾತೆ) ಮೂಲಕ ನಗದು ರೂಪದಲ್ಲಿ ಪರಿವರ್ತಿಸಲಾಗಿದೆ.

Advertisement

ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬೆಂಬಲಕ್ಕೆ ನಿಗಮದ ಹಣ
ಹಗರಣದಲ್ಲಿ ಪಡೆದ ಹಣದ ಪೈಕಿ 20.19 ಕೋ. ರೂ.ಗಳನ್ನು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಬೆಂಬಲಿಸಲು ಹಾಗೂ ಬಿ.ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕೆ ಬಳಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ವೆಚ್ಚಗಳ ಪುರಾವೆಗಳ ಪರಿಶೀಲನೆಯಲ್ಲಿ ಈ ಅಂಶ ಪತ್ತೆಯಾಗಿದೆ. ಹಣಕಾಸಿನ ವಿಶ್ಲೇಷಣೆ ಮತ್ತು ಕೆಲವು ಹೇಳಿಕೆಗಳಿಂದ ಈ ಕೃತ್ಯ ದೃಢೀಕರಿಸಲ್ಪಟ್ಟಿವೆ. ನಾಗೇಂದ್ರ ಸೂಚನೆ ಮೇರೆಗೆ ನಗದು ನಿರ್ವಹಿಸುತ್ತಿದ್ದ ವಿಜಯ್‌ ಕುಮಾರ್‌ ಗೌಡ ಮೊಬೈಲ್‌ ಫೋನ್‌ನಿಂದ ಚುನಾವಣ ವೆಚ್ಚದ ವಿವರಗಳನ್ನು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಪ್ರಕಟನೆಯಲ್ಲಿ ಇ.ಡಿ. ತಿಳಿಸಿದೆ.

ತನಿಖಾ ವರದಿಯಲ್ಲೇನಿದೆ?
* ಬಳ್ಳಾರಿ ಚುನಾವಣೆಯಲ್ಲಿ ನಿಗಮದ 20.19 ಕೋ. ರೂ. ವಿನಿಯೋಗ.
* 89.62 ಕೋ.ರೂ. ಆಂಧ್ರಪ್ರದೇಶ, ತೆಲಂಗಾಣದ ನಕಲಿ ಖಾತೆಗಳಿಗೆ ಜಮೆ.
* ಗಂಗಾ ಕಲ್ಯಾಣ ಯೋಜನೆಯ 43.33 ಕೋ. ರೂ. ಸಹಿತ 187 ಕೋ. ರೂ.ಗಳನ್ನು ಎಂ.ಜಿ. ರಸ್ತೆ ಶಾಖೆಗೆ ವರ್ಗ
* ನಾಗೇಂದ್ರ ಆಪ್ತ ವಿಜಯ್‌ ಕುಮಾರ್‌ ಗೌಡ ಮೊಬೈಲಿಂದ ಚುನಾವಣೆ ವೆಚ್ಚದ ವಿವರ ಪತ್ತೆ
* ಮೊಬೈಲ್‌ ನಾಶಪಡಿಸಿ ಹಗರಣದ ಕುರಿತು ಬಾಯಿಬಿಡದಂತೆ ನಾಗೇಂದ್ರ ಸೂಚನೆ

ಮೊಬೈಲ್‌ ನಾಶಪಡಿಸಿ ತನಿಖೆಗೆ ಅಡ್ಡಿ: ಇ.ಡಿ.
ಹಗರಣ ಬೆಳಕಿಗೆ ಬಂದ ಬಳಿಕ ರಾಜೀನಾಮೆ ನೀಡಿದ್ದ ಬಿ.ನಾಗೇಂದ್ರ ಮೊಬೈಲ್‌ ಫೋನ್‌ಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಾರೆ. ಜತೆಗೆ ಇತರರಿಗೆ ಪ್ರಕರಣದ ಕುರಿತು ಯಾರೊಂದಿಗೂ ಮಾಹಿತಿ ಹಂಚಿಕೊಳ್ಳದೆ ಮೌನವಾಗಿರಲು ಸೂಚಿಸಿದ್ದಾರೆ. ತನಿಖೆ ವೇಳೆ ನಾಗೇಂದ್ರ ಮತ್ತು ಇತರ ಐವರು ಪ್ರಮುಖ ಆರೋಪಿಗಳನ್ನು ಇ.ಡಿ. ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next