ವಿಜಯಪುರ: ಕೃಷ್ಣಾ ನದಿ ತೀರದಲ್ಲಿರುವ ಮುದ್ದೇಬಿಹಾಳ ತಾಲೂಕಿನ ಹಡಗಲಿ ಗ್ರಾಮದಲ್ಲಿ ಸಂಶೋಧಕ ಡಾ| ಎ.ಎಲ್. ನಾಗೂರ ಮತ್ತೂಂದು ದಾನ ಶಾಸನ ಸಂಶೋಧಿಸಿದ್ದಾರೆ. ಹಡಗಲಿ ಗ್ರಾಮದ ಈಶ್ವರ ದೇವಾಲಯದ ಗರ್ಭಗೃಹದ ಬಲಗಡೆಯ ಪ್ರವೇಶದ್ವಾರದ ಕಂಬದಲ್ಲಿರುವ ಈ ಶಾಸನ ದಾನ ಶಾಸನವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ತ್ರಿಕೂಟ ಹೊಂದಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗದ ಹೊರತಾಗಿ ಉಳಿದ ದ್ವಿಕೂಟಗಳಲ್ಲಿ ಯಾವ ವಿಗ್ರಹಗಳಿಲ್ಲ. ಗರ್ಭಗೃಹದ ಎದುರು ಮಾತ್ರ ತೃಟಿತ ಗಣೇಶನ ಶಿಲ್ಪವಿದೆ.
ಸಭಾಮಂಟಪ ಬಿದ್ದು ಹೋಗಿದ್ದು, ಉಳಿದ ಕೂಟದ ದೇಗುಲದ ಮೇಲಿನ ಕಲ್ಲುಗಳೂ ಕೂಡ ಬಿದ್ದುಹೋಗಿವೆ. ಗರ್ಭಗೃಹದ
ಕಂಬದಲ್ಲಿರುವ ಶಾಸನದಲ್ಲಿ ಎಡ ಭಾಗದ ಮೇಲು ತುದಿಯಲ್ಲಿ ಚಂದ್ರ, ಬಲ ಭಾಗದ ಮೇಲು ತುದಿಯಲ್ಲಿ ಸೂರ್ಯನ ಚಿತ್ರವಿದೆ.
ಕೆಳಭಾಗದ ಎಡ ಮೂಲೆಯಲ್ಲಿ ಈಶ್ವರಲಿಂಗ, ಎದುರು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವ ಭಾರಹೊತ್ತ ಕುದುರೆ, ಅದರ ಮರಿಯನ್ನು ಚಿತ್ರಿಸಲಾಗಿದೆ. ಇವುಗಳ ಹಿಂದೆ ಕೇತ ಮಾದರಿಯ ವಸ್ತು ಕಂಡು ಬರುತ್ತದೆ. ಇದರ ಕೆಳಭಾಗದಲ್ಲಿ ಅಲಂಕೃತ ಗೋವು ಚಿತ್ರಿತವಾಗಿದ್ದು, ಕೊಂಬು, ಕೊರಳಾಲಂಕೃತ ಗೋವಿದು. ಈ ಗೋವು ಪೂರ್ವಾಭಿಮುಖವಾಗಿ ಚಲನ ಶೀಲಗತಿಯಲ್ಲಿದೆ. ಕೆಳಭಾಗದಲ್ಲಿ ಸ್ವಸ್ತಿಕ, ಶ್ರೀ ಮತ್ತು ಓಂ ಎಂಬ ಪದಗಳು ಮಾತ್ರ ಕಂಡು ಬರುತ್ತವೆ. ಉಳಿದ ಎಲ್ಲ ಸಾಲುಗಳು ಲುಪ್ತವಾಗಿವೆ.
ದೇವಾಲಯಕ್ಕೆ ಬಳಸಿದ ಕಲ್ಲುಗಳು, ಶೈಲಿ, ಪ್ರಕಾರ ಮತ್ತು ಶಾಸನದಲ್ಲಿನ ಚಿತ್ರಗಳನ್ನು ಗಮನಿಸಿದಾಗ ಸ್ಥಳೀಯ ವರ್ತಕರ ಸಮೂಹವೊಂದು ಗ್ರಾಮದ ಈಶ್ವರ ದೇಗುಲದ ಧೂಪ ದೀಪಾರತಿಗಾಗಿ ಕಲ್ಯಾಣ ಚಾಲುಕ್ಯರ ಕಾಲದ ರಚಿಸಿರುವ ದಾನ ನೀಡಿರುವ ಸಾಧ್ಯತೆಯನ್ನು ಡಾ| ನಾಗೂರ ವಿಶ್ಲೇಷಿಸಿದ್ದಾರೆ.