ಮೆಲ್ಬೋರ್ನ್: ವೆಸ್ಟ್ ಇಂಡೀಸ್ ಸರಣಿಯ ಬಳಿಕ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಆಸೀಸ್ ನಾಯಕ ಆ್ಯರೋನ್ ಫಿಂಚ್ ಹೊರಬಿದ್ದಿದ್ದಾರೆ.
ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಫಿಂಚ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಅಲಭ್ಯರಾಗಿದ್ದರು. ಫಿಂಚ್ ಬದಲು ವಿಕೆಟ್ ಕೀಪರ್ ಬ್ಯಾಟ್ಸಮನ್ ಅಲೆಕ್ಸ್ ಕ್ಯಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ 34ರ ಹರೆಯದ ಫಿಂಚ್ ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಮೊದಲು ಆ್ಯರೋನ್ ಫಿಂಚ್ ಚೇತರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೇರಿ ಕೋಮ್
ಗಾಯಗೊಂಡಿರುವ ಫಿಂಚ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸರಣಿಯ ಮಧ್ಯೆ ಮನೆಗೆ ತೆರಳಲು ಬೇಸರವಾಗುತ್ತಿದೆ. ಆದರೆ ಇದು ಸರಿಯಾದ ನಿರ್ಧಾರವಾಗಿದೆ ಎಂದು ಫಿಂಚ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶದಲ್ಲಿ ಐದು ಟಿ20 ಪಂದ್ಯಗಳ ಸರಣಿ ಆಡಲಿದೆ. ಆಗಸ್ಟ್ 3ರಿಂದ ಆರಂಭವಾಗಲಿರುವ ಸರಣಿಯ ಎಲ್ಲಾ ಪಂದ್ಯಗಳು ಢಾಕಾದಲ್ಲಿ ನಡೆಯಲಿದೆ.