ಬೀದರ: ಕೌಶಲತೆಗೆ ಬೆಲೆ ಕೊಟ್ಟಾಗ ಆರ್ಥಿಕ ಸದೃಢತೆ ಸಾಧಿಸಬಹುದು. ಹೊಸ ತಂತ್ರಜ್ಞಾನ ಕಲಿಯುವಿಕೆಗೆ ಕುಶಲಕರ್ಮಿಗಳು ಸಮಯ ನೀಡಿ ಕಾರ್ಯ ಮಾಡಿದಾಗ ತರಬೇತಿಯಿಂದ ವರ್ತನೆಯಲ್ಲಿ ಪರಿವರ್ತನೆ ಕಾಣಲು ಸಾಧ್ಯ ಎಂದು ಸಿಪಿಐ ವಿಜಯಕುಮಾರ ಬಾವಗಿ ನುಡಿದರು.
ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನಡೆದ ತರಬೇತಿದಾರರಿಗೆ ಸಂವಹನ ತರಬೇತಿ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದ ಸಾಯುವವರೆಗೆ ಕಲಿಯುವಿಕೆ ನಿರಂತರವಾಗಿರಬೇಕು. ದಿನನಿತ್ಯ ಹೊಸ ಆವಿಷ್ಕಾರ, ತಂತ್ರಜ್ಞಾನ ಕೌಶಲ ಹೊರಹೊಮ್ಮುತ್ತಿದ್ದು, ಕೈಗಾರಿಕೆಗಳು ಸಹಿತ ಅಭಿವೃದ್ಧಿಗೊಂಡಿವೆ. ಬೆನ್ನೆಲುಬುಗಳಾದ ತಾವು ತರಬೇತಿಯ ಲಾಭ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಿಗೆ ನೌಕರಿಗಳ ಕೊರತೆ ಇಲ್ಲ, ತಾವು ಕೇವಲ ಕೋರ್ಸ್‌ಗೆ ಸೀಮಿತವಾಗಿ ಓದಿದದೆ ಅದರ ಒಳಾರ್ಥ ಅರಿತು ಕೆಲಸ ಕಲಿತು ನಾಲ್ಕಾರು ಜನರಿಗೆ ಉದ್ಯೋಗ ಕೊಟ್ಟು ತಾವೊಬ್ಬ ಉದ್ಯೋಗಪತಿ ಆಗಬೇಕೆಂದರು.
ಬೆಂಗಳೂರು ಉನ್ನತಿ ಎಂಟರ್ ಪ್ರೈಸಸ್‌ನ ಆನಂದಕುಮಾರ ಮಾತನಾಡಿ, ಭವಿಷ್ಯದ ಬಗ್ಗೆ ವಿಚಾರ ಮಾಡಿ ವರ್ತಮಾನದಲ್ಲಿ ಕ್ರಿಯಾಶೀಲ ಕೆಲಸ ಮಾಡುವ ಶಕ್ತಿ ನಮಗೆ ಇದೆ. ತಮ್ಮ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿ ಸನ್ನದ್ದುಗೊಳಿಸಿ ಕೈಗಾರಿಕೆಗೆ ಕಳಿಸುವ ದಿಶೆಯಲ್ಲಿ ಶ್ರಮಿಸುತ್ತಿದ್ದೇವೆ. ತಮ್ಮಲ್ಲಿ ಆರು ವರ್ಷಗಳಿಂದ ತರಬೇತಿದಾರರಿಗೆ ಉಚಿತ ಶಿಕ್ಷಣ ಕಲಿಸಿ ಆತ್ಮವಿಶ್ವಾಸ ಹಿಚ್ಚೆಸುವುದೆ ನಮ್ಮ ಗುರಿ. ತಮ್ಮಲ್ಲಿ ಮೂರು ತಿಂಗಳನಿಂದ 120 ತರಬೇತಿದಾರರು ಸಂವಹನ ತರಬೇತಿ ಕಲಿತು ಮಾನಸಿಕವಾಗಿ ಸದೃಢಗೊಂಡಿದ್ದು, ಸಂಸ್ಥೆಯ ಕಾರ್ಯ ನೆಮ್ಮದಿ ತಂದಿದೆ ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ, ನಮ್ಮಲ್ಲಿ ವೈವಿಧ್ಯಮಯ ತರಬೇತಿ, ವಿವಿಧ ಕೌಶಲತೆ, ತರಬೇತಿದಾರರಿಗೆ ಸಮಗ್ರವಾಗಿ ಮುನ್ನಡೆಯಲು ಸಹಕರಿಸುವುದೇ ನಮ್ಮ ಕೆಲಸ. ಇಲ್ಲಿ ಕಲಿತ ತರಬೇತಿದಾರರು ಅಂಕಪಟ್ಟಿ ಪಡೆಯುವುದರ ಜೊತೆಗೆ ಉದ್ಯೋಗ ಪತ್ರ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದ್ದು, ತಾವು ಸಹಕರಿಸಿ ಎಂದು ಮನವಿ ಮಾಡಿದರು.
ತರಬೇತಿ ಪಡೆದ ಆನಂದ, ಸಾಯಿಕುಮಾರ, ಗುರುಪ್ರಸಾದ, ಆದರ್ಶ, ಶಿವಶರಣಪ್ಪ ಮಾತನಾಡಿ, ನಮಗೆ ಕಬ್ಬಿಣ ಕಡಲೆಯಾಗಿದ್ದ ಇಂಗ್ಲಿಷ್ ನೆಲೆಗಡಲೆ ಮಾಡಿ, ಸಂದರ್ಶನಕ್ಕೆ ಯಾವ ಮಾನದಂಡ ಎಂಬ ಜ್ಞಾನದ ಅರಿವು ಮೂಡಿಸಿದ್ದಾರೆ. ನಮಗೆ ಕೌಶಲ ಜೊತೆಗೆ ಜೀವನದಲ್ಲಿ ಹೇಗೆ ಬಾಳಬೇಕೆಂದು ಎಳೆ ಎಳೆಯಾಗಿ ತಿಳಿಸಲಾಗಿದೆ ಎಂದು ತಿಳಿಸಿದರು.