Advertisement

ಎಲ್‌ಇಡಿ ಬೀದಿ ದೀಪ ಅಳವಡಿಸಲು ನೂರೆಂಟು ವಿಘ್ನ

11:27 AM Apr 25, 2022 | Team Udayavani |

ಮಹಾನಗರ: ಕಳೆದ ವರ್ಷ ಡಿಸೆಂಬರ್‌ ಅಂತ್ಯದೊಳಗೆ ಶೇ. 100ರಷ್ಟು ಪೂರ್ಣಗೊಳ್ಳಬೇಕಾಗಿದ್ದ ಸಿಟಿಗೆ ಎಲ್‌ಇಡಿ ಬಲ್ಬ್ ಅಳವಡಿಸುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದ್ದು, ಇನ್ನೂ ಶೇ. 10ರಷ್ಟೂ ಪೂರ್ಣಗೊಂಡಿಲ್ಲ.

Advertisement

ಟೆಂಡರ್‌ ವಹಿಸಿಕೊಂಡ ಸಂಸ್ಥೆಯು ಹಣಕಾಸಿನ ಸಮಸ್ಯೆಯಿಂದಾಗಿ ಸದ್ಯ ಎಲ್‌ಇಡಿ ಅಳವಡಿಕೆ ಕಾಮಗಾರಿಯನ್ನೇ ನಿಲ್ಲಿಸಿದೆ. ಪರಿಣಾಮ, ಕಾಮಗಾರಿ ಆರಂಭಕ್ಕೆ ಪಾಲಿಕೆ ಈಗಾಗಲೇ ಸಂಬಂಧಿತ ಸಂಸ್ಥೆಗೆ ಹಲವು ಬಾರಿ ಸೂಚನೆ ನೀಡಿದರೂ ಕಾಮಗಾರಿ ಆರಂಭಿಸುವ ಮುನ್ಸೂಚನೆ ಸಿಗುತ್ತಿಲ್ಲ. ಹಣಕಾಸು ಹೊಂದಿಸಲು ಇದೀಗ ಟೆಂಡರ್‌ ಸಂಸ್ಥೆಯು ಬೇರೊಂದು ಸಂಸ್ಥೆಯ ಜತೆ ಒಡಂಬಡಿಕೆಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಇನ್ನೇನು ಒಂದು ವಾರದೊಳಗೆ ಸಭೆ ನಡೆಸಿ ಈ ಪ್ರಕ್ರಿಯೆ ಅಂತಿಮಗೊಳಿಸಲು ಪಾಲಿಕೆ ನಿರ್ಧರಿಸಿದೆ.

ನಗರದ 60 ವಾರ್ಡ್‌ಗಳ ಬೀದಿ ದೀಪಗಳನ್ನು ಎಲ್‌ಇಡಿ ಬೀದಿದೀಪವಾಗಿ ಪರಿವರ್ತನೆ ಮಾಡಲು 60 ಕೋ. ರೂ. ವೆಚ್ಚದಲ್ಲಿ ಈ ಹಿಂದೆಯೇ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ವಹಿಸಿದ ಸಂಸ್ಥೆ ಏಳು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು.

ಅದಕ್ಕೆಂದು ಏಳು ವರ್ಷಗಳವರೆಗೆ ಪಾಲಿಕೆಯಿಂದ ತಿಂಗಳಿಗೆ ಸುಮಾರು 80 ಲಕ್ಷ ರೂ. ಇಎಂಐ ಸಂದಾಯವಾಗಲಿದೆ. 60 ವಾರ್ಡ್‌ಗಳಲ್ಲಿ ಸುಮಾರು 66,000 ಎಲ್‌ಇಡಿ ಬೀದಿ ದೀಪ ಅಳವಡಿಸಲು ಈಗಾಗಲೇ ಕಾಮಗಾರಿ ಆರಂಭವಾಗಿದೆ. ಈ ಪೈಕಿ ಆಯ್ದ ವಾರ್ಡ್‌ಗಳಲ್ಲಿ ಸುಮಾರು 12,600 ಎಲ್‌ಇಡಿ ಬೀದಿ ದೀಪ ಅಳವಡಿಕೆ ಈಗಾಗಲೇ ಪೂರ್ಣಗೊಂಡಿದೆ.

1.5 ಕೋ.ರೂ. ವಿದ್ಯುತ್‌ ಬಿಲ್‌

Advertisement

ಈಗಿರುವ ಬೀದಿ ದೀಪಗಳಿಂದ ಮಹಾ ನಗರ ಪಾಲಿಕೆಗೆ ತಿಂಗಳಿಗೆ ಸುಮಾರು 1.5 ಕೋ.ರೂ.ಗಳಷ್ಟು ವಿದ್ಯುತ್‌ ಬಿಲ್‌ ಬರುತ್ತಿದೆ. ತಿಂಗಳಿಗೆ ಸುಮಾರು 40 ಲಕ್ಷ ರೂ.ನಷ್ಟು ನಿರ್ವಹಣೆ ಖರ್ಚು ತಗಲುತ್ತದೆ. ಸದ್ಯ ಬೀದಿದೀಪಗಳೆಲ್ಲ ಎಲ್‌ಇಡಿ ಯಾಗಿ ಬದಲಾದರೆ ಸುಮಾರು 50 ರಿಂದ 60 ಲಕ್ಷ ರೂ. ನಷ್ಟು ವಿದ್ಯುತ್‌ ಬಿಲ್‌ ಬರ ಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಸುಮಾರು 70ರಿಂದ 80 ಲಕ್ಷ ರೂ. ಉಳಿತಾಯವಾಗಲಿದೆ. ಆದರೆ ಈ ಪ್ರಕ್ರಿಯೆಗೆ ಸದ್ಯ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.

ನಿರ್ವಹಣೆಯೂ ಕಷ್ಟ

ಮಂಗಳೂರಿನ ಉತ್ತರ ವಿಧಾನಸಭೆ ಕ್ಷೇತ್ರದ ಸುಮಾರು 8 ವಾರ್ಡ್‌ ಗಳ ಬಹುತೇಕ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ. ಕ್ರಾಂಪ್ಟನ್‌ ಸಂಸ್ಥೆಯಿಂದ ಖರೀದಿ ಮಾಡಿದ ಈ ಬಲ್ಬ್ ಅಳವಡಿಸುವ ಪ್ರಕ್ರಿಯೆಯನ್ನು ಅನ್ನಪೂರ್ಣಾ ಎಂಬ ಸಂಸ್ಥೆ ವಹಿಸಿಕೊಂಡಿದೆ. ಈಗಾಗಲೇ ಅಳವಡಿಸಿದ ಬಲ್ಬ್ ಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಬರತೊಡಗಿದೆ.

ಪಾಲಿಕೆ ಅಧಿಕಾರಿಯೊಬ್ಬರು ಸುದಿನಕ್ಕೆ ಮಾಹಿತಿ ನೀಡಿ, ಸುರತ್ಕಲ್‌ ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ಶೇ. 90ರಷ್ಟು ಎಲ್‌ಇಡಿ ಬೀದಿ ದೀಪ ಅಳವಡಿಕೆ ಪೂರ್ಣಗೊಂಡಿದೆ. ಆ ವ್ಯಾಪ್ತಿಯಲ್ಲಿ ಈ ಹಿಂದೆ ಸುಮಾರು 12 ಲಕ್ಷ ರೂ. ವಿದ್ಯುತ್‌ ಬಿಲ್‌ ಬರುತ್ತಿತ್ತು. ಸದ್ಯ ಸುಮಾರು 7.5 ಲಕ್ಷ ರೂ.ಗೆ ಇಳಿಕೆಯಾಗಿದೆ. ಇದೀಗ ಬೀದಿ ದೀಪ ಅಳವಡಿಕೆಗೆ ಚುರುಕು ಸಿಗಬೇಕಾಗಿದೆ’ ಎನ್ನುತ್ತಾರೆ.

ಸದ್ಯದಲ್ಲೇ ಸಭೆ

ಸಿಟಿ ವ್ಯಾಪ್ತಿ ಎಲ್‌ಇಡಿ ಬಲ್ಬ್ ಅಳವಡಿಕೆ ಸದ್ಯ ಸ್ವಲ್ಪ ಹಿನ್ನಡೆ ಉಂಟಾಗಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಟೆಂಡರ್‌ ವಹಿಸಿಕೊಂಡ ಸಂಸ್ಥೆ ಟೆಂಡರ್‌ ಪೂರ್ಣ ಅವಧಿಯ ವಿಸ್ತರಣೆಗೆ (ಇಒಟಿ) ಕೇಳಿದ್ದಾರೆ. ಬಳಿಕ ಅವರ ಆಧಾರದಲ್ಲಿ ಬೇರೊಂದು ಸಂಸ್ಥೆಯೊಂದಿಗೆ ಕೂಡಿ ಒಡಂಬಡಿಕೆ ಮಾಡಿ ಹಣಕಾಸು ಹೊಂದಿಸಲು ತೀರ್ಮಾನ ಮಾಡಿದ್ದಾರೆ. ಆದರೆ, ಈ ಪ್ರಕ್ರಿಯೆಗೆ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಈ ಎಲ್ಲ ವಿಚಾರಕ್ಕೆ ಸಂಬಂಧಿಸಿ ಸದ್ಯದಲ್ಲೇ ವಿಶೇಷ ಸಭೆ ನಡೆಸಲಾಗುವುದು. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next