ಬೆಂಗಳೂರು: ಮುಂದಿನ ಆರ್ಥಿಕ ವರ್ಷದಲ್ಲಿ ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತ-ಹಂತವಾಗಿ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಾಲ್ಕೂ ಪ್ರಮುಖ ನೀರಾವರಿ ನಿಗಮಗಳ ನಿರ್ದೇಶಕರ ಮಂಡಳಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಮಂಡಳಿ ಮುಂದೆ ಬಂದ ಹಣಕಾಸಿನ ಪ್ರಸ್ತಾವನೆಗಳನ್ನು ಸದ್ಯಕ್ಕೆ ಬಾಕಿ ಇಟ್ಟು, ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲವೇ ಕಾಮಗಾರಿಗಳ ಟೆಂಡರ್‌ಗಳನ್ನು ಆಹ್ವಾನಿಸಲು ಅನುಮೋದನೆ ನೀಡಿದ್ದಾರೆ.
ಮೇಕೆದಾಟು, ಎತ್ತಿನಹೊಳೆ, ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಸೇರಿದಂತೆ ಬಹುತೇಕ ನೀರಾವರಿ ಯೋಜನೆಗಳ ಸಾಧ್ಯಾ-ಸಾಧ್ಯತೆ ಕುರಿತು ಚರ್ಚೆ ನಡೆದಿದ್ದು, ಕೇಂದ್ರ ಸರಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕಿರುವ ಯೋಜನೆಗಳಿಗೆ ಸಂಬಂಧಿಸಿದ ವಿಸ್ತೃತ ಸಮಾಲೋಚನೆ ನಡೆದಿದೆ.
ಹಲವು ಸಮಯದಿಂದ ಬಾಕಿಯಾಗಿರುವ ಹಾಗೂ ಯಾವುದೇ ಅಡೆತಡೆಯಿಲ್ಲದ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದು, ಹೊಸ ಕಾಮಗಾರಿಗಳನ್ನು ಸದ್ಯಕ್ಕೆ ಮುಂದೂಡಿ ಎಂದು ಸೂಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ತೊಡಗಿಸಬೇಕಿರುವುದರಿಂದ ಹೊಸ ಕಾಮಗಾರಿಗಳ ಪ್ರಸ್ತಾವನೆಯನ್ನು ಸದ್ಯಕ್ಕೆ ಮಂಡಿಸದಂತೆ ನಿರ್ದೇಶಕರ ಮಂಡಳಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಬಹುಕಾಲದಿಂದ ಬಾಕಿ ಇದ್ದ ಕಾಮಗಾರಿಗಳ ಟೆಂಡರ್ ಕರೆಯಲು ಅನುಮೋದನೆ ನೀಡುತ್ತೇವೆ ಎಂದರು.
ಈ ಸರಕಾರ ರಚನೆಯಾದ ಬಳಿಕ ಕೃಷ್ಣಾ ಭಾಗ್ಯ ಜಲ ನಿಗಮದ ಮೊದಲ ಸಭೆ ಆಗಿದ್ದರಿಂದ ಚರ್ಚೆಗಷ್ಟೆ ಸಭೆ ಸೀಮಿತವಾಗಿತ್ತು. ಇನ್ನುಳಿದಂತೆ ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲನಿಗಮಗಳ ಹಳೆಯ ಕಾಮಗಾರಿಗಳ ಬಾಕಿ ಬಿಲ್, ಬಾಕಿ ಕಾಮಗಾರಿಗಳಿಗೆ ಅನುಮೋದನೆ ಮತ್ತು ಕೆಲ ಕಾಮಗಾರಿಗಳ ಟೆಂಡರ್‌ಗಳ ಅನುಮೊದನೆಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಆದರೆ, ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತ-ಹಂತವಾಗಿ ಅನುಮೋದನೆಗಳನ್ನು ಕೊಡಲು ಕ್ರಮ ವಹಿಸುವುದಾಗಿ ಸಿಎಂ ಭರವಸೆ ನೀಡಿರುವುದರಿಂದ ಅಧಿಕಾರಿಗಳೂ ಹೊಸ ಪ್ರಸ್ತಾವನೆ ಸಲ್ಲಿಸುವ ಬದಲು, ಆದ್ಯತೆ ಮೇರೆಗೆ ಹಿಂದಿನ ಕಾಮಗಾರಿಗಳ ಬಾಕಿ ಬಿಲ್ ಮತ್ತು ಹಳೆಯ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳುವ ಪ್ರಸ್ತಾವನೆಯನ್ನಷ್ಟೇ ಸಿದ್ಧಪಡಿಸಲು ಮನಸ್ಸು ಮಾಡಿದ್ದಾರೆ.