Advertisement

ಇ-ಫೈಲಿಂಗ್ ಪೋರ್ಟಲ್ ತಾಂತ್ರಿಕ ದೋಷ : ಇನ್ಫೋಸಿಸ್ ಸಿಇಒ ಪರೇಖ್ ಗೆ ಹಣಕಾಸು ಇಲಾಖೆ ಸಮನ್ಸ್

06:51 PM Aug 22, 2021 | Team Udayavani |

ನವದೆಹಲಿ: ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭವಾಗಿ ಎರಡೂವರೆ ತಿಂಗಳು ಕಳೆದ ನಂತರವೂ ವೆಬ್ ಸೈಟ್ ನ ಕಾರ್ಯನಿರ್ವಹಣೆಯಲ್ಲಿ ತಾಂತ್ರಿಕ ದೋಷಗಳು ಮುಂದುವರೆದಿರುವ ಹಿನ್ನೆಲೆ ಇನ್ಫೋಸಿಸ್ ವಿರುದ್ಧ ಕೇಂದ್ರ ಹಣಕಾಸು ಇಲಾಖೆ ಸಮನ್ಸ್ ನೀಡಿದೆ.

Advertisement

ಇನ್ಫೋಸಿಸ್ ಹೊಸ ಪೋರ್ಟಲ್ ವಿನ್ಯಾಸಗೊಳಿಸಿದ್ದು, ಇದು ಜೂನ್ 7 ರಿಂದ ಸೇವೆ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಿಂದ ಹಲವಾರು ತಾಂತ್ರಿಕ ಸಮಸ್ಯೆಗಳಿರುವುದು ಕಂಡು ಬಂದಿದೆ. ಈ ವಿಚಾರವಾಗಿ ಬಳಕೆದಾರರು ಆಗಾಗ್ಗೆ ಸೈಟ್ನ ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡುವುದಲ್ಲದೆ ಹಣಕಾಸು ಸಚಿವರನ್ನು ಟ್ಯಾಗ್ ಮಾಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಣಕಾಸು ಇಲಾಖೆ, ವೆಬ್ ಸೈಟ್ ನಲ್ಲಿನ ತಾಂತ್ರಿಕ ದೋಷಗಳನ್ನು ಇನ್ನೂ ಏಕೆ ಸರಿಪಡಿಸಲಾಗಿಲ್ಲ ಎಂಬುದರ ಬಗ್ಗೆ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಣೆ ನೀಡುವಂತೆ ಇನ್ಫೋಸಿಸ್ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪರೇಖ್ ಗೆ ಸಮನ್ಸ್ ನೀಡಲಾಗಿದೆ.

ಈ ಬಗ್ಗೆ ಹಣಕಾಸು ಸಚಿವಾಲಯ ಭಾನುವಾರು ಟ್ವೀಟ್ ಮಾಡಿದ್ದು, ಆಗಸ್ಟ್ 21 ರಂದು ವೆಬ್ ಸೈಟ್ ಕಾರ್ಯನಿರ್ವಹಣೆ ಸ್ಥಗಿತದ ನಂತರ ಪರೇಖ್ ಅವರಿಗೆ ಸಮನ್ಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಹಳೆಯ ವೆಬ್ ಸೈಟ್ ಸ್ಥಗಿತಗೊಂಡ ನಂತರ ಜೂನ್ 7, 2021 ರಂದು ಇ- ಫೈಲಿಂಗ್ ವೆಬ್ ಸೈಟ್ ಔಪಚಾರಿಕವಾಗಿ  ಚಾಲನೆಗೊಂಡಿತ್ತು. ತೆರಿಗೆದಾರರಿಗೆ ಅನುಕೂಲ, ಆಧುನಿಕ ಹಾಗೂ ತಡೆರಹಿತ ಸೇವೆಯಂತಹ ಅನುಭವವನ್ನು ಹೊಸ ಇ- ಫಿಲ್ಲಿಂಗ್ ಪೋರ್ಟಲ್ ನೀಡಬೇಕಿತ್ತು. ಆದರೆ, ಆ ವೆಬ್ ಸೈಟ್ ಚಾಲನೆಗೊಂಡಾಗಿನಿಂದಲೂ ಅನೇಕ ತೊಂದರೆಗಳನ್ನು ತೆರಿಗೆದಾರರು ಎದುರಿಸುತ್ತಿದ್ದಾರೆ.

ವೆಬ್ ಸೈಟ್ ತುಂಬಾ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರೊಫೈಲ್ ಅಪ್ ಡೇಟಿಂಗ್, ಪಾಸ್ ವರ್ಡ್ಸ್ ಬದಲಾವಣೆಗೂ ತುಂಬಾ ಸಮಯ ತೆಗೆದುಕೊಳ್ಳಲಿದೆ ಎಂದು ಬಳಕೆದಾರರು ದೂರಿದ್ದರು. ಅದರಲ್ಲಿ ಟಿಡಿಎಸ್ ರಿಟರ್ನ್ಸ್ ಫೈಲ್ ಮಾಡಲು ಆಗುತ್ತಿಲ್ಲ, ‘ಪಾರ್ಗಟ್ ಪಾಸ್ ವರ್ಡ್ ‘ ಆಪ್ಸನ್ ಕೆಲಸ ಮಾಡುತ್ತಿಲ್ಲ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದರು.

Advertisement

ರಿಟರ್ನ್ಸ್ ಫೈಲಿಂಗ್ ಗೆ ಕೊನೆಯ ದಿನವನ್ನು ಸೆಪ್ಟೆಂಬರ್ 30 ನೇ ತಾರೀಖಿನವರೆಗೂ ಸರ್ಕಾರ ವಿಸ್ತರಿಸಿದ್ದರೂ ವೆಬ್ ಸೈಟ್ ಇತ್ತೀಚಿಗೆ  ವಿಳಂಬ ಶುಲ್ಕವನ್ನು ಪ್ರಾರಂಭಿಸಿತ್ತು.  ಪೋರ್ಟಲ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹಣಕಾಸು ಸಚಿವರು ಜೂನ್ ತಿಂಗಳಲ್ಲಿ ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವಿಚಾರದ ಬಗ್ಗೆ ಗಮನ ಹರಿಸಲು ಏಳು ಸದಸ್ಯರನ್ನೊಳಗೊಂಡ ಕಾರ್ಯಪಡೆ ರಚನೆಗೆ ಐಸಿಎಐಗೆ ಹಣಕಾಸು ಸಚಿವಾಲಯ ಹೇಳಿತ್ತು.

ಹೊಸ ವೆಬ್ ಸೈಟ್ ನಲ್ಲಿನ ತಾಂತ್ರಿಕ ತೊಂದರೆ ಸರಿಯಾಗುವವರೆಗೂ ಹಳೆಯ ವೆಬ್ ಸೈಟ್ ಲಭ್ಯವಾಗುವಂತೆ ಮಾಡಬೇಕೆಂದು ಸಲಹೆ ನೀಡಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದಾಗ್ಯೂ, ಅಪ್ ಡೇಟ್  ಐಟಿ ರಿಟರ್ನ್ಸ್ ಫಾರಂನಲ್ಲಿರುವ ಅನೇಕ ಹೊಸ ಅಂಶಗಳು ಹಳೆಯ ವೆಬ್ ಸೈಟ್ ನಲ್ಲಿ ಇಲ್ಲ. ಇನ್ಫೋಸಿಸ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹೊಸ- ಇ- ಫೈಲಿಂಗ್ ಪೋರ್ಟಲ್ ತಾಂತ್ರಿಕ ದೋಷ ಪರಿಹಾರದ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next