Advertisement
ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಶುಕ್ರವಾರ ಈ ಎರಡೂ ತಾಲೂಕುಗಳನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರು ಎರಡೂ ತಾಲೂಕುಗಳ ಮಿನಿ ವಿಧಾನಸೌಧ ಕಟ್ಟಡಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.
ಕೇವಲ ಪಹಣಿ ಪತ್ರ, ಮ್ಯುಟೇಶನ್ ಎಂಟ್ರಿ, ಅಫಿದವಿತ್ ಇವಿಷ್ಟೇ ದಾಖಲೆಗಳಿದ್ದು ಭೂಪರಿವರ್ತನೆ ಸಾಧ್ಯವಾಗುವಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಕಂದಾಯ ಇಲಾಖೆ ಇರಿಸಿದೆ. ಇಲಾಖೆಯಲ್ಲಿರುವ ಸಿಬಂದಿ ಕೊರತೆ ನಿವಾರಿಸಲು 109 ತಹಶೀಲ್ದಾರರು, 800 ಸರ್ವೇಯರ್‌ಗಳ ನೇಮಕಾತಿ ನಡೆಯಲಿದೆ. ಗ್ರಾಮಕರಣಿಕರು, ಪ್ರಥಮ, ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆಗಳನ್ನು ತುಂಬುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಸಚಿವ ದೇಶಪಾಂಡೆ ಮೂಡುಬಿದಿರೆ ತಾಲೂಕು ಉದ್ಘಾಟನೆಯ ಸಂದರ್ಭದಲ್ಲಿ ಪ್ರಕಟಿಸಿದರು.
Related Articles
Advertisement
ಮಿನಿ ವಿಧಾನಸೌಧಕ್ಕೆ10 ಕೋ.ರೂ.
ಕಡಬದಲ್ಲಿ, ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಫಲಕ ಅನಾವರಣ ನಡೆಸುವ ಮೂಲಕ ಸಚಿವ ದೇಶಪಾಂಡೆ ಅವರು ತಾಲೂಕನ್ನು ಉದ್ಘಾಟಿಸಿದರು. 10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನಡೆಸಿದರು. ಬಳಿಕ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ಹೊಸಮಠ ಮತ್ತು ಬಿಳಿನೆಲೆ-ನೆಟ್ಟಣ ನಡುವೆ ನಿರ್ಮಾಣಗೊಂಡಿರುವ ನೂತನ ಸೇತುವೆಗಳನ್ನೂ ಉದ್ಘಾಟಿಸಲಾಯಿತು. ಆರಂಭಿಕ ಹಂತವಾಗಿ ತಾಲೂಕಿಗೆ 2 ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಬರಲು ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಸರಕಾರ ಬದ್ಧವಾಗಿದೆ. ಸ್ಥಳೀಯ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಚಟುವಟಿಕೆಗಳನ್ನು ಮಾಡಲಾಗುವುದು ಎಂದರು.