Advertisement

ಕೊನೆಗೂ ಹೊಸಮಠ ಮುಳುಗು ಸೇತುವೆಯಿಂದ ಸಿಗಲಿದೆ ಮುಕ್ತಿ

04:21 PM Jan 28, 2018 | Team Udayavani |

ಕಡಬ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮೂಲಕ ತಾ| ಕೇಂದ್ರವಾಗಿರುವ ಕಡಬವನ್ನು ಮಳೆಗಾಲದಲ್ಲಿ ಸಂಪರ್ಕಿಸಲು ಪ್ರಮುಖ ತೊಡಕಾಗಿರುವ ಹೊಸಮಠದ ಮುಳುಗು ಸೇತುವೆಯಿಂದ ಜನರಿಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಹೊಸಮಠ ಮುಳುಗು ಸೇತುವೆಯ ಪಕ್ಕ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದೆ. ಸಂಪರ್ಕ ರಸ್ತೆಯ ಭೂ ಸ್ವಾಧೀನ ಪ್ರಕ್ರಿಯೆಗಳು ಮುಗಿದಿದ್ದು, ಗುಂಡ್ಯ ಹೊಳೆಗೆ ನಿರ್ಮಾಣಗೊಂಡಿರುವ ನೂತನ ಸರ್ವಋತು ಸೇತುವೆ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

Advertisement

ಮಳೆಗಾಲದಲ್ಲಿ ಗಂಟೆಗಟ್ಟಲೆ ನೆರೆ ನೀರಿನಲ್ಲಿ ಮುಳುಗಡೆಯಾಗಿ ರಸ್ತೆ ಸಂಪರ್ಕವನ್ನು ಕಡಿದುಹಾಕುವ ಹೊಸಮಠ ಸೇತುವೆಗೆ ಬಲಿಯಾದ ಜೀವಗಳು ಹಲವು. ಸುಮಾರು 52 ವರ್ಷಗಳ ಹಿಂದೆ ನೆರೆನೀರಿನಲ್ಲಿ ಮುಳುಗಿದ್ದ ಸೇತುವೆಯನ್ನು ದಾಟುತ್ತಿದ್ದ ಖಾಸಗಿ ಬಸ್ಸೊಂದು ಮುಳುಗಿ ಓರ್ವ ಪ್ರಯಾಣಿಕ ನೀರುಪಾಲಾಗಿದ್ದ. ಹಲವು ವರ್ಷಗಳ ಅನಂತರ ತಮಿಳುನಾಡಿನ ಪ್ರವಾಸಿ ಯುವಕರಿಬ್ಬರು ನೆರೆನೀರಿನಲ್ಲಿ ಕೊಚ್ಚಿಹೋಗಿದ್ದರು. ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿಯೊಂದು ಮುಳುಗಿ ಕೃಷಿಕರೊಬ್ಬರು ಜೀವ ಕಳೆದುಕೊಂಡಿದ್ದರು. 2006ರ ಮಳೆಗಾಲದಲ್ಲಿ ಸಿಮೆಂಟ್‌ ಸಾಗಾಟದ ಲಾರಿಯೊಂದು ನೀರುಪಾಲಾದ ಸಂದರ್ಭ ಲಾರಿಯಲ್ಲಿದ್ದ 4 ಮಂದಿ ಯುವಕರು ಜಲ ಸಮಾಧಿಯಾದ ನೆನಪು ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ.

7 ಕೋ. 50 ಲ. ರೂ. ಅನುದಾನ
ಹೊಸಮಠದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ 7 ಕೋಟಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಕರ್ನಾಟಕ ರಸ್ತೆ
ಅಭಿವೃದ್ಧಿ ನಿಗಮದಡಿಯಲ್ಲಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ನಡೆಯುತ್ತಿದೆ. ಈಗ ಇರುವ ಸೇತುವೆಗಿಂತ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 125 ಮೀ. ಉದ್ದ ಹಾಗೂ 12 ಮೀ. ಅಗಲದಲ್ಲಿ ತಡೆಬೇಲಿಯನ್ನೊಳಗೊಂಡ 6 ಪಿಲ್ಲರ್‌ಗಳ ಸುಂದರ ಸೇತುವೆ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ತೆರೆದು ಕೊಳ್ಳಲಿದೆ. ಪ್ರಸ್ತುತ ಇರುವ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ.

ತೊಡಕು ಇತ್ಯರ್ಥ
ಖಾಸಗಿಯವರಿಂದ ಭೂ ಸ್ವಾಧೀನ ನಡೆಸುವ ಪ್ರಕ್ರಿಯೆ ಪೂರ್ತಿಯಾಗದ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಭೂ ಸ್ವಾಧೀನದ ನಡಾವಳಿ ನಡೆದು ತೊಡಕುಗಳು ಇತ್ಯರ್ಥಗೊಂಡಿವೆ. ಈಗಾಗಲೇ ಸರಕಾರಿ ಜಮೀನಿನಲ್ಲಿ ಹಾದುಹೋಗುವ ಸಂಪರ್ಕ ರಸ್ತೆಯ ಕಾಮಗಾರಿ ನಡೆದಿದ್ದು, ಇನ್ನುಳಿದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡು ಸೇತುವೆ ಉದ್ಘಾಟನೆಗೊಳ್ಳಲಿದೆ.
ಜಾನ್‌ಪ್ರಕಾಶ್‌ ರೋಡ್ರಿಗಸ್‌,
  ಕಡಬ ತಹಶೀಲ್ದಾರ್ 

ನಾಗರಾಜ್‌ ಎನ್‌. ಕೆ. ಕಡಬ

Advertisement
Advertisement

Udayavani is now on Telegram. Click here to join our channel and stay updated with the latest news.

Next