ತೇರದಾಳ: ಈ ಭಾಗದ ರೈತರ ಬಹುದಿನಗಳ ಬೇಡಿಕೆ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅನುಮೋದನೆ ನೀಡುವ ಮೂಲಕ ರೈತರ ಮೊಗದಲ್ಲಿ ಸಂತಸದ ನಗೆ ಮೂಡುವಂತೆ ಮಾಡಿತ್ತು. ಈ ಯೋಜನೆಯ ಮುಂದುವರಿದ ಭಾಗವಾಗಿ ಮೊದಲ ಹಂತದ ಸ್ಕೀಂ ಒನ್ 266 ಕೋಟಿ ರೂ. ಮೊತ್ತದ ಕಾಮಗಾರಿಗೆ ನೀರಾವರಿ ಇಲಾಖೆ ಟೆಂಡರ್ ಕರೆದಿದ್ದು, ಶೀಘ್ರದಲ್ಲಿ ಕಾಮಗಾರಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಇದರಿಂದ ರೈತರಲ್ಲಿ ಹೊಸ ಆಶಾಭಾವ ಮೂಡಿದಂತಾಗಿದೆ.
ಸಸಾಲಟ್ಟಿ ಏತ ನೀರಾವರಿಗೆ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಎಂದು ನಾಮಕರಣ ಮಾಡಲಾಗಿದ್ದು, ತೇರದಾಳ, ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕಿನ ಅಂದಾಜು 36 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ, ರೈತರ ಭೂಮಿಗೆ ನೀರು ಹರಿಯಲಿದೆ. ತಾಲೂಕಿನ ಹಳಿಂಗಳಿ ಗ್ರಾಮದಲ್ಲಿರುವ ಜಿಲ್ಲೆಯ ಜೀವನಾಡಿ ಕೃಷ್ಣಾ ನದಿಯ ಮುಖಾಂತರ 12 ಕಿ.ಮೀ. ಲಿಫ್ಟ್ ಮೂಲಕ ಮಳೆಗಾಲದಲ್ಲಿ(ಮುಂಗಾರು) ಹರಿಯುವ ನೀರನ್ನು ಮಾತ್ರ ಎತ್ತುವ ಯೋಜನೆ ಇದಾಗಿದೆ.
ಈಗಾಗಲೇ ಹಳಿಂಗಳಿ ಗ್ರಾಮದಲ್ಲಿ ಜಾಕವೇಲ್ ನಿರ್ಮಾಣಕ್ಕೆ ಹಾಗೂ 110 ಕೆವಿ ವಿದ್ಯುತ್ ಘಟಕ ನಿರ್ಮಾಣಕ್ಕೆ ಬೇಕಾಗುವ ಅಂದಾಜು ನಾಲ್ಕು ಎಕರೆ ಭೂಮಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಗುರುತಿಸಿದ್ದಾರೆ. ಈಗಾಗಲೇ ಹಿರಣ್ಯಕೇಶಿ ನದಿಯಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ ಈ ನೀರು ರೈತರಿಗೆ ಸಾಕಾಗುತ್ತಿಲ್ಲ. ಕಾರಣ ಇನ್ನೂ ಹೆಚ್ಚುವರಿಯಾಗಿ 80 ಟಿಎಂಸಿಯಷ್ಟು ನೀರು ಬೇಕು.
ಆದರೆ, ಹಿಡಕಲ್ ಜಲಾಶಯ ಕೇವಲ 52 ಟಿಎಂಸಿ ಮಾತ್ರ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಹಿರಣ್ಯಕೇಶಿ ನದಿ ಮೇಲೆ ಅವಲಂಬಿತಗೊಂಡಿರುವ ಹಿಡಕಲ್ ಜಲಾಶಯದ ಪ್ರದೇಶಗಳಲ್ಲಿನ ರೈತರ ಜಮೀನುಗಳಿಗೆ ಮುಂಗಾರಿಗೆ ನೀರು ಸಾಕಾಗುತ್ತಿಲ್ಲ. ಇದರಿಂದ ನೀರಾವರಿ ತಜ್ಞ ರಾಮಪ್ರಸಾದ ಎಂಬುವವರು ಸರಕಾರಕ್ಕೆ ವರದಿ ಸಲ್ಲಿಸಿ ಕೃಷ್ಣಾ ನದಿಯಿಂದ ಮುಂಗಾರು ಸಂದರ್ಭದಲ್ಲಿ ಹರಿಯುವ ನೀರನ್ನು ಎತ್ತುವ ಮೂಲಕ ಯೋಜನೆ ರೂಪಿಸಿ ನೀರು ನೀಡಬಹುದು ಎಂದು ವರದಿಯಲ್ಲಿ ತಿಳಿಸಿದ್ದರು.
ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ನನ್ನ ಕನಸಾಗಿತ್ತು. ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಇದರಿಂದಾಗಿ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ. ಮೊದಲ ಹಂತದ ಕಾಮಗಾರಿಗೆ ಟೆಂಡರ್ ಆಗಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಎರಡೂ ಹಂತದ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು.
–ಸಿದ್ದು ಸವದಿ, ತೇರದಾಳ ಶಾಸಕ