ಕೇಪ್ ಟೌನ್: ಏಕದಿನ ಸರಣಿಯಲ್ಲಿ ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಇಂದಿನ ಅಂತಿಮ ಪಂದ್ಯದಲ್ಲಾದರೂ ಸಮಾಧಾನಕರ ಗೆಲುವು ಪಡೆಯಲು ಸಿದ್ದತೆ ನಡೆಸಿದೆ. ಪಾರ್ಲ್ ಮೈದಾನದಲ್ಲಿ ಕೈಕೊಟ್ಟ ಅದೃಷ್ಟ ಕೇಪ್ ಟೌನ್ ನಲ್ಲಿ ಕೈಹಿಡಿಯುತ್ತಾ ಎಂದು ಕಾದು ನೋಡಬೇಕಾಗಿದೆ.
ಇಲ್ಲಿನ ನ್ಯೂಲ್ಯಾಂಡ್ಸ್ ನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕೆ.ಎಲ್ ರಾಹುಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.
ಭಾರತ ತಂಡ ಇಂದಿನ ಪಂದ್ಯಕ್ಕೆ ನಾಲ್ಕು ಬದಲಾವಣೆ ಮಾಡಿಕೊಂಡಿದೆ. ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಮತ್ತು ವೆಂಕಟೇಶ್ ಅಯ್ಯರ್ ಬದಲಿಗೆ ಸೂರ್ಯ ಕುಮಾರ್, ಜಯಂತ್ ಯಾದವ್, ಪ್ರಸಿದ್ ಕೃಷ್ಣ ಮತ್ತು ದೀಪಕ್ ಚಾಹರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸರಣಿಯಲ್ಲಿ ಕೆ.ಎಲ್ ರಾಹುಲ್ ನಾಯಕತ್ವ ವಹಿಸಿದ ಮೂರೂ ಪಂದ್ಯಗಳಲ್ಲಿ ಭಾರತ ಪರಾಭವಗೊಂಡಿದೆ. ಹೀಗಾಗಿ ಯಶಸ್ಸಿಗಾಗಿ ಇರುವುದು ಒಂದೇ ಅವಕಾಶ. ಇದರಲ್ಲಿ ಗೆದ್ದರೆ ರಾಹುಲ್ ಜತೆಗೆ ಭಾರತ ತಂಡದ ಪ್ರತಿಷ್ಠೆಯೂ ಒಂದು ಮಟ್ಟದಲ್ಲಿ ಉಳಿದಂತಾಗುತ್ತದೆ.
ಆದರೆ ದಕ್ಷಿಣ ಆಫ್ರಿಕಾ ಎಂದಿನಂತೆ ನಿಶ್ಚಿಂತೆಯಲ್ಲಿದೆ. ಸೆಂಚುರಿಯನ್ ಟೆಸ್ಟ್ ಪಂದ್ಯ ಸೋತ ಬಳಿಕ ಎಚ್ಚೆತ್ತುಕೊಂಡು ಹೋರಾಟ ಸಂಘಟಿಸಿದ ಆತಿಥೇಯರ ಆಟ ನಿಜಕ್ಕೂ ನಮ್ಮವರಿಗೊಂದು ಪಾಠವಾಗಬೇಕಿತ್ತು. ಆದರೆ ಹಾಗಾಗಲಿಲ್ಲ.
ತಂಡಗಳು
ಭಾರತ: ಕೆ.ಎಲ್. ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ಪ್ರಸಿದ್ ಕೃಷ್ಣ, ದೀಪಕ್ ಚಾಹರ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಜಾನೆಮನ್ ಮಲಾನ್, ಟೆಂಬ ಬವುಮ (ನಾಯಕ), ಐಡನ್ ಮಾರ್ಕ್‌ರಮ್, ರಸ್ಸಿ ವಾನ್ ಡರ್ ಡುಸೆನ್, ಡೇವಿಡ್ ಮಿಲ್ಲರ್, ಆ್ಯಂಡಿಲ್ ಫೆಲುಕ್ವಾಯೊ, ಕೇಶವ್ ಮಹಾರಾಜ್, ಡ್ವೇನ್ ಪ್ರಿಟೋರಿಯಸ್, ಮಾರ್ಕೊ ಜಾನ್ಸೆನ್, ಸಿಸಾಂಡ ಮಗಾಲ.