ಮುಂಬಯಿ, ಜೂ. 2: ಹಿಂದಿನ ಸೆಮಿಸ್ಟರ್‌ಗಳಲ್ಲಿನ ಸಾಧನೆಯ ಆಧಾರದ ಮೇಲೆ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ ಒಂದು ದಿನದ ನಂತರ ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.
ಇದು ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕೆಲವರಿಗೆ ಖಚಿತವಿಲ್ಲವಾದರೂ, ಕಾಲೇಜುಗಳು ಸಹ ಮುಂಬರುವ ವಾರಗಳಲ್ಲಿ ಈ ನಿರ್ಧಾರವನ್ನು ಹೇಗೆ ಅನ್ವಯಿಸುತ್ತವೆ ಎಂಬ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಈ ನಿರ್ಧಾರವು ಹಿಂದಿನ ಸೆಮಿಸ್ಟರ್‌ಗಳ ಪತ್ರಿಕೆಗಳ ಬ್ಯಾಕ್‌ಲಾಗ್ ಹೊಂದಿರುವ ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ಸರಕಾರ ಅಥವಾ ವಿಶ್ವವಿದ್ಯಾನಿಲಯವು ಸ್ಪಷ್ಟಪಡಿಸುವ ಅಗತ್ಯವಿದೆ. ಈ ನಿರ್ಧಾರವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆಯೆ ಎಂದು ನಮಗೆ ಖಚಿತವಿಲ್ಲ ಎಂದು ದಕ್ಷಿಣ ಮುಂಬಯಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.
ಕೆಲವೆಡೆ ಈಗಾಗಲೇ ಅಂತಿಮ ಸೆಮಿಸ್ಟರ್‌ನ ಎರಡು ಅಥವಾ ಹೆಚ್ಚಿನ ಪತ್ರಿಕೆಗಳಿಗೆ ಪರೀಕ್ಷೆ ನಡೆದಿವೆ. ಕಾಲೇಜು ನಮಗೆ ಹೇಗೆ ಗ್ರೇಡ್ ನೀಡುತ್ತವೆ ಎಂಬುವುದು ನಮಗೆ ಆತಂಕ ತಂದಿದೆ. ಪರೀಕ್ಷೆಗಳ ಸ್ಥಿತಿ ಮತ್ತು ವಿದ್ಯಾರ್ಥಿಗಳ ಭಡ್ತಿ ಬಗ್ಗೆ ಸರಕಾರದಿಂದ ಹಲವಾರು ಹೊಸ ನಿರ್ಧಾರಗಳು ಬರುತ್ತಿರುವುದರಿಂದ, ನಮ್ಮ ಸ್ಥಾನಮಾನದ ಬಗ್ಗೆ ನಮಗೆ ಗೊಂದಲವಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನಮಗೆ ಖುಷಿಯಾಗಿದೆ ಎಂದು ಬಾಂದ್ರಾದ ಥಡೋಮಲ್ ಶಹಾನಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಗೋಪ ಕುಮಾರನ್ ಥಾಂಪಿ ಹೇಳಿದ್ದಾರೆ.