ಪಾಲಕ್ಕಾಡ್: ವಿಜಯ್ ಅಭಿನಯದ ತಮಿಳು ‘ಲಿಯೋ’ ಚಿತ್ರದ ಪ್ರಚಾರಕ್ಕಾಗಿ ಮಂಗಳವಾರ ಥಿಯೇಟರ್‌ಗೆ ತೆರಳಿದ್ದ ವೇಳೆ ಅಭಿಮಾನಿಗಳ ಭಾರೀ ಜಮಾವಣೆಯಿಂದ ನೂಕುನುಗ್ಗಲು ಉಂಟಾಗಿದ್ದು ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಕಾಲಿಗೆ ಗಾಯವಾಗಿದೆ.
ಕೇರಳದ ಪಾಲಕ್ಕಾಡ್ ನ ಅರೋಮಾ ಥಿಯೇಟರ್‌ನಲ್ಲಿ ಮಧ್ಯಾಹ್ನಈ ಘಟನೆ ನಡೆದಿದ್ದು, ತ್ರಿಶೂರ್‌ನ ರಾಗಂ ಥಿಯೇಟರ್, ನಂತರ ಕೊಚ್ಚಿಯ ಕವಿತಾ ಥಿಯೇಟರ್‌ನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬೇಕಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಗಾಯಗೊಂಡ ನಂತರ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು.
ಪಾಲಕ್ಕಾಡ್‌ನ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿ ನಂತರ ಕೊಯಮತ್ತೂರಿಗೆ ತೆರಳಿದರು. ಅವರು ಅಲ್ಲಿಯೇ ಉಳಿಯಬಹುದು ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ತೆರಳಬಹುದು ಎಂದು ಕನಕರಾಜ್ ಅವರ ನಿಕಟ ಮೂಲಗಳು ಪಿಟಿಐಗೆ ತಿಳಿಸಿವೆ.
ಇದೇ ವೇಳೆ ಗುಂಪನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಥಿಯೇಟರ್ ಪ್ರಚಾರಕ್ಕಾಗಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದ್ದರೂ, ನಿರ್ದೇಶಕರನ್ನು ನೋಡಲು ಬಂದ ಅಭಿಮಾನಿಗಳ ಸಂಖ್ಯೆ ನಿರೀಕ್ಷೆ ಮೀರಿದ್ದ ಕಾರಣ ಅನೀರೀಕ್ಷಿತ ಘಟನೆ ಸಂಭವಿಸಿದೆ.
“ಧನ್ಯವಾದಗಳು, ಕೇರಳ, ನಿಮ್ಮ ಪ್ರೀತಿಗಾಗಿ… ಪಾಲಕ್ಕಾಡ್‌ನಲ್ಲಿ ನಿಮ್ಮೆಲ್ಲರನ್ನು ನೋಡಲು ತುಂಬ ಸಂತೋಷ ಮತ್ತು ಕೃತಜ್ಞತೆ. ಗುಂಪಿನಲ್ಲಿ ಒಂದು ಸಣ್ಣ ಗಾಯದಿಂದಾಗಿ, ನಾನು ಇನ್ನೆರಡು ಸ್ಥಳಗಳಿಗೆ ಮತ್ತು ಪತ್ರಿಕಾಗೋಷ್ಠಿಗೆ ಹೋಗಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಕೇರಳದಲ್ಲಿ ನಿಮ್ಮೆಲ್ಲರನ್ನು ಭೇಟಿ ಮಾಡಲು ನಾನು ಖಂಡಿತವಾಗಿಯೂ ಹಿಂತಿರುಗುತ್ತೇನೆ. ಅಲ್ಲಿಯವರೆಗೆ ಅದೇ ಪ್ರೀತಿಯಿಂದ ‘ಲಿಯೋ’ ಅನ್ನು ಆನಂದಿಸುವುದನ್ನು ಮುಂದುವರಿಸಿ” ಎಂದು ಕನಕರಾಜ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಲಿಯೋ’ ಮೊದಲ ದಿನದಿಂದ ಇಲ್ಲಿಯವರೆಗೆ ಹೌಸ್‌ಫುಲ್ ಪ್ರದರ್ಶನಗಳೊಂದಿಗೆ ದಾಖಲೆಯ ಕಲೆಕ್ಷನ್‌ಗಳನ್ನು ಮಾಡುತ್ತಿದೆ.