ಸಾಮಾನ್ಯವಾಗಿ ಮೂವತ್ತು ಪ್ರಾಯ ದಾಟಿದ ಹುಡುಗರಿಗೆ ಮದುವೆಯಾ ಗಲು ವಧು ಸಿಗುವುದು ಕಷ್ಟ ಎಂಬುದು ಅಲ್ಲಲ್ಲಿ ಕಿವಿಯ ಮೇಲೆ ಬೀಳುವ ಮಾತು. ಹುಡುಕುತ್ತ ಹೋದರೆ ನಮ್ಮ ನಡುವೆಯೇ ಮೂವತ್ತರ ಗಡಿ ದಾಟಿದ ಇಂಥ ಹತ್ತಾರು ಹುಡುಗರು ಕಾಣುತ್ತಾರೆ. ಇಂಥದ್ದೇ ಹುಡುಗರ ಕಥೆಯನ್ನು ಒಂದು ಎಳೆಯಾಗಿ ಇಟ್ಟುಕೊಂಡು ಅದಕ್ಕೆ ನವಿರಾದ ಹಾಸ್ಯವನ್ನು ಬೆರೆಸಿ “ಹರೀಶ ವಯಸ್ಸು 36′ ಚಿತ್ರದ ಮೂಲಕ ತೆರೆಮೇಲೆ ಹೇಳಿದ್ದಾರೆ ನಿರ್ದೇಶಕ ಗುರುರಾಜ್ ಜ್ಯೇಷ್ಠ.
ನಮ್ಮ ನಡುವೆಯೇ ನಡೆಯುವ ಅನೇಕ “ಹರೀಶ’ರುಗಳ ಸಹಜ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ. ಚಿತ್ರದ ಕಥೆಯ ಎಳೆ ಸರಳವಾಗಿರುವುದರಿಂದ, ಚಿತ್ರಕಥೆ ನಿರೂಪಣೆ ಮತ್ತು ಸಂಭಾಷಣೆಯ ಮೇಲೆ ಇಡೀ ಚಿತ್ರವನ್ನು ಕಾಮಿಡಿಯಾಗಿ ಕಟ್ಟಿಕೊಡುವ ಜಾಣ್ಮೆ ಮೆರೆದಿದ್ದಾರೆ ನಿರ್ದೇಶಕರು. ಈ ತಂತ್ರ ಸಿನಿಮಾದಲ್ಲಿ ಕೆಲವೆಡೆ ಫಲಿಸಿದರೆ, ಇನ್ನು ಕೆಲವೆಡೆ ಫಲಿಸಿಲ್ಲ.
ಮಧ್ಯಂತರದ ನಂತರ “ಹರೀಶ’ನ ಚಿತ್ರಕಥೆ, ಕೆಲವು ಅನಗತ್ಯ ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಅಲ್ಲಲ್ಲಿ ಕತ್ತರಿ ಹಾಕಿದ್ದರೆ, “ಹರೀಶ’ನ ವ್ಯಥೆಯ ಕಥೆ ಇನ್ನಷ್ಟು ವೇಗವಾಗಿ ಸಾಗುವುದರ ಜೊತೆ ನೋಡುಗರಿಗೂ ಪರಿಣಾಮಕಾರಿ ಎನಿಸುವ ಸಾಧ್ಯತೆಗಳಿದ್ದವು.
ಇದನ್ನೂ ಓದಿ:ಉಪೇಂದ್ರ ನಿರ್ದೇಶನದ ಹೊಸಚಿತ್ರ ‘ಯು’; ಪೋಸ್ಟರ್ ನಲ್ಲೇ ಟ್ವಿಸ್ಟ್ ನೀಡಿದ ಉಪ್ಪಿ
ಇನ್ನು ನಾಯಕ ಯೋಗೀಶ್ 36 ವಯಸ್ಸಿನ ಮದುವೆಯಾಗದ ಹುಡುಗನ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ. ಉಳಿದಂತೆ ಶ್ವೇತಾ ಅರೆಹೊಳೆ, ಉಮೇಶ್, ಪ್ರಕಾಶ್ ತುಮ್ಮಿನಾಡು ಮತ್ತಿತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇಡೀ ಸಿನಿಮಾವನ್ನು ಕರಾವಳಿ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡಿದರೆ, “ಹರೀಶ ವಯಸ್ಸು 36′ ಒಂದು ಒಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ . ಕರಾವಳಿ ಕನ್ನಡ ಶೈಲಿಯ ಸಿನಿಮಾಗಳನ್ನು ಇಷ್ಟಪಡುವವರಿಗೆ “ಹರೀಶ’ ಖಂಡಿತವಾಗಿಯೂ ಕನಿಷ್ಟ ಮನರಂಜನೆಯಂತೂ ನೀಡುತ್ತಾನೆ.
ಜಿ.ಎಸ್.ಕಾರ್ತಿಕ ಸುಧನ್