Advertisement

ಬಂದ್‌ಗೆ ಚಿತ್ರೋದ್ಯಮ ನೈತಿಕ ಬೆಂಬಲ: ಸಿನಿಮಾ ರಿಲೀಸ್‌, ಶೂಟಿಂಗ್‌ ಯಥಾಸ್ಥಿತಿ

12:01 PM Dec 25, 2021 | Team Udayavani |

ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ, ಸ್ವತಂತ್ರ ಹೋರಾಟಗಾರರ ಪ್ರತಿಮೆಗಳಿಗೆ ಮಸಿ ಬಳಿದಿರುವ ಪ್ರಕರಣವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಇದೇ ಡಿ. 31ರ ಶುಕ್ರವಾರ ಕರ್ನಾಟಕ ಬಂದ್‌ ಗೆ ಕರೆ ನೀಡಿವೆ. ಇನ್ನು ಡಿ. 31ರಂದು ಕರ್ನಾಟಕದಲ್ಲಿ ಬಹುತೇಕ ವ್ಯಾಪಾರ, ವಹಿವಾಟು, ಸಂಚಾರ ಮತ್ತಿತರ ಚಟುವಟಿಕೆಗಳು ಬಂದ್‌ ಆಗಲಿವೆ ಎನ್ನಲಾಗುತ್ತಿದ್ದು, ಚಿತ್ರೋದ್ಯಮದ ಚಟುವಟಿಕೆಗಳು ಕೂಡ ಬಂದ್‌ ಆಗಲಿವೆಯಾ ಎಂಬ ಆತಂಕ ಅನೇಕರಲ್ಲಿತ್ತು.

Advertisement

ಅದರಲ್ಲೂ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗಳ ನಿರ್ಮಾಪಕರು ಮತ್ತು ಡಿ. 31ರಂದು ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ನಿರ್ಮಾಪಕರು ಥಿಯೇಟರ್‌ನಲ್ಲಿ ತಮ್ಮ ಸಿನಿಮಾಗಳ ಕಥೆ ಏನು ಎಂಬ ಚಿಂತೆಯಲ್ಲಿದ್ದರು. ಆದರೆ ಇದೀಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರೋದ್ಯಮದ ಮೂಲಗಳು ಡಿ. 31ರಂದು ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ಸ್ಥಗಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಈ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌ ಜೈರಾಜ್‌, “ಮೊದಲಿನಿಂದಲೂ ಕರ್ನಾಟಕ ಚಿತ್ರರಂಗ ಕನ್ನಡ ಪರ ಹೋರಾಟಗಳಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತ ಬಂದಿದೆ. ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ ನಾವು ಯಾವಾಗಲೂ ಕನ್ನಡಪರ ಹೋರಾಟಗಾರರ ಪರವಾಗಿ ಇರುತ್ತೇವೆ. ಹಾಗೆಯೇ ಡಿ. 31ರಂದು ಕರೆ ನೀಡಿರುವ “ಕರ್ನಾಟಕ ಬಂದ್‌’ಗೂ ನಮ್ಮ ಸಾಂಕೇತಿಕ ಬೆಂಬಲ ಇದ್ದೇ ಇರುತ್ತದೆ, ಆದರೆ ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ಸ್ಥಗಿತವಾಗುವುದಿಲ್ಲ’ ಎಂದಿದ್ದಾರೆ.

“ಕಳೆದ ಎರಡು ಲಾಕ್‌ಡೌನ್‌ ನಂತರ ಚಿತ್ರೋದ್ಯಮ ಸಾಕಷ್ಟು ಸಂಕಷ್ಟದಲ್ಲಿದೆ. ಈಗಷ್ಟೇ ನಿಧಾನವಾಗಿ ಚಿತ್ರರಂಗದ ಚಟುವಟಿಕೆಗಳು ಶುರುವಾಗಿದೆ. ಹೀಗಿರುವಾಗ ಮತ್ತೂಮ್ಮೆ ಸಂಪೂರ್ಣವಾಗಿ ಚಿತ್ರೋದ್ಯಮವನ್ನು ಬಂದ್‌ ಮಾಡಿದರೆ, ನಿರ್ಮಾಪಕರು, ಪ್ರದರ್ಶಕರು, ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಹೀಗೆ ಎಲ್ಲರಿಗೂ ತೊಂದರೆಯಾಗುತ್ತದೆ. ಅದೂ ಕೂಡ ಡಿ.31 ಶುಕ್ರವಾರವಾಗಿದ್ದರಿಂದ, ಒಂದಷ್ಟು ಸಿನಿಮಾ ಗಳು ತಮ್ಮ ಬಿಡುಗಡೆಯನ್ನು ಈಗಾಗಲೇ ಘೋಷಿಸಿಕೊಂಡು ಪ್ರಚಾರ ಮಾಡುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಒಂದಷ್ಟು ಸಿನಿಮಾಗಳು ಕೂಡ ಉತ್ತಮ ಪ್ರದರ್ಶನ ಕಾಣುತ್ತಿವೆ. ಹೀಗಾಗಿ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಿ, ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳನ್ನು ಸ್ಥಗಿತಗೊಳಿಸದೆ, ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಕೊಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌ ಜೈರಾಜ್‌.

ಇದನ್ನೂ ಓದಿ:ಕೂ- 2021ರ ಪ್ರಮುಖ ಕ್ಷಣಗಳು: ಅಗಲಿದ ಪುನೀತ್ ಹೆಚ್ಚು ಉಲ್ಲೇಖಗೊಂಡ ಸೆಲೆಬ್ರಿಟಿ

Advertisement

ಇನ್ನು ಕರ್ನಾಟಕ ಬಂದ್‌ ಪ್ರಯುಕ್ತ, ಡಿ. 31ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಚಿತ್ರೋದ್ಯಮದ ಪರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿರುವ ಡಾ. ರಾಜಕುಮಾರ್‌ ಪ್ರತಿಮೆಯ ಮುಂದೆ ಸಾಂಕೇತಿಕ ಧರಣಿ ಮಾಡಿ ಸಿಎಂಗೆ ಮನವಿ ಸಲ್ಲಿಸಲಿದೆ. ಈ ಮೂಲಕ ಕನ್ನಡ ಪರ ಹೋರಾಟಕ್ಕೆ ಚಿತ್ರರಂಗದ ಪರವಾಗಿ ನೈತಿಕ ಬೆಂಬಲವನ್ನು ಸೂಚಿಸಲಿದೆ.

ಕನ್ನಡ ಪರ ಹೋರಾಟಗಳಿಗೆ ಸಿನಿಮಾ ರಂಗದ ಬೆಂಬಲ ಮೊದಲಿನಿಂದಲೂ ಇದೆ. ಅವರಿಗೆ ನೈತಿಕ ಬೆಂಬಲ ಇದ್ದೆ ಇದೆ. ನಾವು ಕೂಡ ಸಾಂಕೇತಿಕ ಧರಣಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಚಿತ್ರರಂಗದ ಚಟುವಟಿಕೆಗಳು ಎಂದಿನಂತೆ ನಡೆಯುತ್ತದೆ. ಶುಕ್ರವಾರ ಸಿನಿಮಾ ಪ್ರದರ್ಶನ ನಿಲ್ಲಿಸಿದರೆ, ಚಿತ್ರೋದ್ಯಮಕ್ಕೆ ತೊಂದರೆಯಾಗುತ್ತದೆ. –  ಡಿ.ಆರ್‌ ಜೈರಾಜ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಬೆಳಗಾವಿ ಘಟನೆಯನ್ನು ಖಂಡಿಸಬೇಕಾಗಿರುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ಆದರೆ ಈಗಷ್ಟೇ ಚಿತ್ರೋದ್ಯಮದ ಚಟುವಟಿಕೆಗಳು ಮತ್ತೆ ಮೊದಲಿನ ಸ್ಥಿತಿಗೆ ಬರುತ್ತಿರುವುದರಿಂದ, ಈಗ ಮತ್ತೆ ಬಂದ್‌ ಮಾಡಿದರೆ, ಎಲ್ಲರಿಗೂ ತೊಂದರೆಯಾಗುತ್ತದೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ಯೋಚಿಸಿ ಕರ್ನಾಟಕ ಬಂದ್‌ಗೆ ಸಾಂಕೇತಿಕವಾಗಿ ನೈತಿಕ ಬೆಂಬಲ ನೀಡುತ್ತಿದ್ದೇವೆ. – ಕೆ. ವಿ ಚಂದ್ರಶೇಖರ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next