Advertisement

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮೀ ಚೌಧರಿ

03:00 AM Sep 17, 2024 | Team Udayavani |

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿಯು ಚಿತ್ರರಂಗದಲ್ಲಿ ಮಹಿಳೆಯರಿಗೆ ಆಗುತ್ತಿದ್ದ ಕಿರುಕುಳದ ಬಗೆಗಿನ ವಿಷಯ ಬಹಿರಂಗವಾಗಿತ್ತು. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ಮೀಟೂನಂತಹ ಪ್ರಕರಣಗಳು ಕಂಡು ಬಂದಿದ್ದರಿಂದ ಕೆಲವು ನಟ -ನಟಿಯರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ  ಸಮಿತಿ ರಚಿಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿ ರಾಜ್ಯ ಮಹಿಳಾ ಆಯೋಗವು ಸೋಮವಾರ (ಸೆ.16) ಚಲನಚಿತ್ರ ವಾಣಿಜ್ಯ ಮಂಡಳಿ (Kannada Film Industry)ಯಲ್ಲಿ  ಸಭೆ ಕರೆಯಲಾಗಿತ್ತು.

Advertisement

ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಎನ್‌.ಎಂ.ಸುರೇಶ್‌, ಸಾ.ರಾ.ಗೋವಿಂದು, ರಾಕ್​ಲೈನ್​ ವೆಂಕಟೇಶ್, ತಾರಾ ಅನುರಾಧಾ, ಭಾವನಾ ರಾಮಣ್ಣ, ನೀತೂ ಶೆಟ್ಟಿ, ಸಂಜನಾ ಗಲ್ರಾನಿ, ಇತರರು ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಭೆಯಲ್ಲಿ ಭಾಗವಹಿಸಿದ್ದರು.

ಪಾಶ್ ಸಮಿತಿ ರಚನೆಯಾಗಲೇಬೇಕು: ನಾಗಲಕ್ಷ್ಮೀ ಚೌಧರಿ
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ ‘ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ ತಾಯಿ ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಿ ಎನ್ನುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಹೇಳುತ್ತಾರೆ. ಅದಕ್ಕಾಗಿ ‘ಕನ್ನಡ ಚಿತ್ರರಂಗದಲ್ಲಿ ಪಾಶ್ (POSH- ಪ್ರಿವೆನ್ಶನ್‌ ಆಫ್ ಸೆಕ್ಸುವಲ್‌ ಹರಾಸ್ಮೆಂಟ್‌) (ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಸಮಿತಿ) ಮಾಡಲಾಗುತ್ತಿದೆ. ಈ ಬಗ್ಗೆ ವಾಣಿಜ್ಯ ಚಿತ್ರರಂಗಕ್ಕೆ ಪತ್ರ ಬರೆದಿದ್ದೇವೆ. ಹೊರದೇಶದಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿರುವುದರಿಂದ ಸಭೆ​ಗೆ ಬಹಳ ಕಡಿಮೆ ನಟಿಯರು ಬಂದಿದ್ದಾರೆ. ಮುಂದಿನ ಸಭೆಗೆ ಎಲ್ಲರೂ ಬರುವಂತೆ ಆಗಬೇಕು’ ಎಂದರು.

“ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ಮಹಿಳಾ ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ. ಆದರೆ ಪಾಶ್‌ ಸಮಿತಿ ರಚಿಸಬೇಕೆಂಬ ಅಧಿಸೂಚನೆಯೇ ಇದೆ. ಅದನ್ನು ನಾನು ಮಂಡಳಿಗೆ ಸೂಚಿಸಿದ್ದೇವೆ. ಚಿತ್ರರಂಗದ 24 ವಿಭಾಗಗಳ ಮಹಿಳೆಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಆ ಸಮಿತಿ ಹೇಗೆ ಇರಬೇಕು ಎನ್ನುವ ಕುರಿತು ಕಾನೂನು ಇದೆ. ಅದೇ ರೀತಿಯಲ್ಲಿ ಸಮಿತಿ ರಚನೆ ಆಗಲಿದೆ.

ನಟಿಯರು ಸಿನೆಮಾದಲ್ಲಿ ನಟಿಸಬೇಕು ಎಂದಾಗ 17 ಅಂಶಗಳ ಕುರಿತು ಗಮನ ಹರಿಸಬೇಕಾಗುತ್ತದೆ. ಈ ಅಂಶಗಳನ್ನು ಮಂಡಳಿಗೆ ನೀಡಿ, ಈ ಕುರಿತಾಗಿ ತಾವು ಕೈಗೊಳ್ಳುವ ಕ್ರಮದ ಬಗ್ಗೆ ಕೇಳಿದ್ದೇವೆ. ಸರಕಾರದ ಗೆಜೆಟ್‌ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಗೌಪ್ಯ ಸಮಿತಿಯನ್ನು ರಚಿಸಿ, ಆ ಮೂಲಕವೂ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುವುದು’ ಎಂದು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ತಿಳಿಸಿದರು.

Advertisement

“ಸಮಿತಿ ರಚಿಸಲೇಬೇಕು. ಮಹಿಳೆಯರಿಗೆ ರಕ್ಷಣೆ ನೀಡಲು ಇದನ್ನು ಮಾಡಲೇಬೇಕಾಗುತ್ತದೆ. ಈ ಸಮಿತಿಗೆ ಹಿರಿಯ ನಟಿ ಅಧ್ಯಕ್ಷರಾಗಿರಬೇಕು. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು’ ಎಂದರು. ಇದರ ಜತೆಗೆ ಸಮಿತಿ ರಚಿಸುವ ಕುರಿತು ಮಂಡಳಿ 15 ದಿನದೊಳಗೆ ಕ್ರಿಯಾಯೋಜನೆ ರೂಪಿಸಿ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದರು.

ಪರ-ವಿರೋಧದ ಚರ್ಚೆ
ಮಂಡಳಿಯಲ್ಲಿ ನಡೆದ ಆಂತರಿಕ ಸಭೆಯಲ್ಲಿ ಸಮಿತಿ ರಚಿಸುವ ಕುರಿತು ಸಾಕಷ್ಟು ಚರ್ಚೆಗಳಾಗಿದ್ದು, ಪರ-ವಿರೋಧ ವ್ಯಕ್ತವಾಗಿವೆ. ಮುಖ್ಯವಾಗಿ ಸಮಿತಿಯ ಅಗತ್ಯವಿಲ್ಲ ಎಂದು ಚಿತ್ರರಂಗದ ಕೆಲವರು ಪಟ್ಟು ಹಿಡಿದರೆ, ಕೆಲವು ನಟಿಯರು ಸಮಿತಿಯ ಅಗತ್ಯವಿದೆ ಎಂದರು. ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ನಟಿಯರು ತಾವು ಚಿತ್ರೀಕರಣದಲ್ಲಿ ಅನುಭವಿಸಿದ ತೊಂದರೆ, ತಂಡ ನಡೆಸಿಕೊಂಡ ರೀತಿ, ಸಂಭಾವನೆ ತಾರತಮ್ಯ ಸಹಿತ ಹಲವು ಆರೋಪ ಮಾಡುತ್ತಿದ್ದಾಗ ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ನಿರ್ಮಾಪಕರು, ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪ ಮಾಡುವುದು ಸುಲಭ. ಆದರೆ ಸಿನೆಮಾ ಸೋತಾಗ ನಿರ್ಮಾಪಕನ ಬೆಂಬಲಕ್ಕೆ ಯಾರೂ ಬರುವುದಿಲ್ಲ. ಇಂತಹ ಆರೋಪಗಳು ಚಿತ್ರರಂಗವನ್ನು ಕುಗ್ಗಿಸುತ್ತದೆ ಎಂಬ ಮಾತುಗಳು ಆಂತರಿಕ ಸಭೆಯಲ್ಲಿ ಕೇಳಿಬಂದಿದ್ದು, ಸಭೆಯಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಗರಂ ಆಗಿದ್ದರು.

ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಈಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಸಮಿತಿಯ ಅಗತ್ಯವಿಲ್ಲ, ಮಹಿಳಾ ಆಯೋಗವಿದೆ. ಜತೆಗೆ ಫಿಲಂ ಚೇಂಬರ್‌ ಇದೆ. ಇಲ್ಲಿ ದೂರು ನೀಡಿದರೆ ಸಮಸ್ಯೆ ಬಗೆಬಹರಿಸಲಾಗುವುದು ಎಂದರೆ, ಪಾಶ್‌ ಸಮಿತಿ ರಚನೆಗೂ ಕೆಲವು ತೊಡಕುಗಳಿವೆ. ಪಾಶ್‌ ರಚನೆಗೆ ಚಿತ್ರರಂಗವು ಉದ್ಯಮ ಅಂತ ಆಗಬೇಕು. ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು ಎಂದು ನಿರ್ದೇಶಕಿ ಕವಿತಾ ಲಂಕೇಶ್‌ ಹೇಳಿದರು.

“ಮಹಿಳಾ ಆಯೋಗ ನಡೆಸಿದ ಸಭೆಯಲ್ಲಿ ಮಹಿಳೆಯರ ಸುರಕ್ಷೆಯ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಮಹಿಳೆಯರ ಸುರಕ್ಷೆಗೆ ಮಂಡಳಿ ಸದಾ ಸಿದ್ಧ. ಪಾಶ್‌ ಸಮಿತಿ ರಚಿಸಲು ಆಯೋಗ ಸೂಚಿಸಿದೆ. ಜತೆಗೆ 17 ಅಂಶಗಳನ್ನು ನೀಡಿದೆ. ಈ ಕುರಿತು ಮತ್ತೂಮ್ಮೆ ಸಭೆ ಕರೆದು ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ.”
– ಎನ್‌.ಎಂ. ಸುರೇಶ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

“ಸಮಿತಿ ರಚಿಸುವುದರಿಂದ ನಮಗೇನೂ ತೊಂದರೆ ಇಲ್ಲ. ಇದರಿಂದ ಸಮಸ್ಯೆ ಬಗೆಹರಿಯುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಈಗಲೇ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಇದರಿಂದ ವ್ಯಾವಹಾರಿಕವಾಗಿ ತೊಂದರೆಯಾಗಲಿದೆ.”
– ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕ

“ನಮ್ಮ ಚಿತ್ರರಂಗ ಇನ್ನೂ ಉದ್ಯಮವಾಗಿಲ್ಲ. ನಾವಿನ್ನೂ ಕಾರ್ಮಿಕ ಕಾಯ್ದೆಯಡಿ ಇದ್ದೇವೆ. ಒಮ್ಮೆ ಉದ್ಯಮ ಎಂದು ಘೋಷಣೆಯಾದರೆ ಎಲ್ಲ ಸೌಲಭ್ಯಗಳು ದೊರಕುತ್ತವೆ.”
– ತಾರಾ, ನಟಿ

Advertisement

Udayavani is now on Telegram. Click here to join our channel and stay updated with the latest news.

Next