Advertisement
ಏಷ್ಯಾದ ಅತಿದೊಡ್ಡ ಚಲನಚಿತ್ರ ಸಂತೆಯಾದ ಫಿಲ್ಮ್ ಬಜಾರ್ ಪ್ರತಿ ವರ್ಷ ಇಫಿ ಚಿತ್ರೋತ್ಸವದೊಂದಿಗೆ ನಡೆಯುತ್ತದೆ. ಇದನ್ನು ಎನ್‌ಎಫ್‌ಡಿಸಿ ಸಂಘಟಿಸುತ್ತಿದೆ. ಈ ಬಾರಿ ಉತ್ಸವಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವುದೆಂದರೆ ಕೌಶಲ ಕಾರ್ಯಾಗಾರ, ಚಿತ್ರ ನಿರ್ಮಾಪಕರ ಕಾರ್ಯಾಗಾರ.
Related Articles
Advertisement
ಕೌಶಲ ಕಾರ್ಯಾಗಾರದ ಮೂಲಕ ಯುವ ಸಿನಿಮಾ ನಿರ್ದೇಶಕರ ಸಬಲೀಕರಣದ ಬಗ್ಗೆ ಪ್ರಸೂನ್ ಜೋಷಿ, ಸಿದ್ಧಾರ್ಥ ರಾಯ್ ಕಪೂರ್ ಮಾತನಾಡಿದರೆ, ವಾಣಿ ತ್ರಿಪಾಠಿ ಟಿಕೂ ಬಾಹುಬಲಿ ಚಿತ್ರದ ನಿರ್ಮಾಪಕಿ ಶೋಬು ಯರ್ಲಗಡ್ಡ ಅವರೊಂದಿಗೆ ಸಂವಾದ ನಡೆಸುವರು. ಸೌಂದರ್ಯ ರಜನೀಕಾಂತ್ ಮತ್ತು ನಂದಿತಾ ರಾಯ್ ಭಾರತೀಯ ಸಿನಿಮಾದಲ್ಲಿ ಬದಲಾಗುತ್ತಿರುವ ಮಹಿಳೆಯ ಪಾತ್ರ ಕುರಿತು ಮಾತನಾಡುವರು.
ಕೌಶಲ ಕಾರ್ಯಾಗಾರದಲ್ಲಿ ಅದಿಲ್ ಹುಸೇನ್. ಮೇಘನಾ ಗುಲ್ಜಾರ್, ಪುನೀತ್ ಕೃಷ್ಣ, ರಾಜೀ ವ್ ಕೃಷ್ಣ ಮೆನನ್, ಸುಭಾಷ್ ಘಾಯ್ ಮತ್ತಿತರರು ಪಾಲ್ಗೊಳ್ಳುವರು.
ಪ್ರಗತಿಯಲ್ಲಿರುವ ಚಿತ್ರಗಳ ವಿಭಾಗದಲ್ಲಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳನ್ನು ನಿರ್ದೇಶಕರು ಆಸಕ್ತ ನಿರ್ಮಾಪಕರಿಗೆ ಪ್ರದರ್ಶಿಸಲೂ ಅವಕಾಶವಿದೆ. ಈ ಬಾರಿಯ ಚಿತ್ರ ನಿರ್ಮಾಪಕರ ಕಾರ್ಯಾಗಾರಕ್ಕೆ ಅಮೆರಿಕ, ಶ್ರೀಲಂಕಾ, ಬಾಂಗ್ಲಾದೇಶ್, ತೈವಾನ್ ಮತ್ತು ಭಾರತದ ೨೦ ಯೋಜನೆಗಳು ಆಯ್ಕೆಯಾಗಿವೆ. ಇದರೊಂದಿಗೆ ಸಹ ನಿರ್ಮಾಣ ಯೋಜನೆಯಡಿಯೂ ಭಾರತ, ಭೂತಾನ್. ಬಾಂಗ್ಲಾದೇಶ, ಫ್ರಾನ್ಸ್, ನೇಪಾಳ್ ಸಿಂಗಾಪುರ ಸೇರಿದಂತೆ ೧೪ ಯೋಜನೆಗಳು ಆಯ್ಕೆಯಾಗಿದ್ದು, ಹಿಂದಿ, ಇಂಗ್ಲಿಷ್, ಮಲಯಾಲಂ, ಬಂಗಾಳಿ, ಅಸ್ಸಾಮಿ, ನೇಪಾಳಿ, ಗುಜರಾತಿ, ಭೂತಾನೀಸ್ ಭಾಷೆಯ ಪ್ರತಿಭಾವಂತ ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಈ ವರ್ಷದ ಉತ್ಸವಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಪರಿಸರ ರಾಜ್ಯ ಸಚಿವ ಬಬುಲ್ ಸುಪ್ರಿಯೊ, ಎನ್‌ಎಫ್ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ, ಲಕ್ಷದ್ವೀಪ್, ಮಧ್ಯಪ್ರದೇಶ, ಒರಿಸ್ಸಾ, ಉತ್ತರಾಖಂಡ್, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ ಮತ್ತಿತರ 12 ರಾಜ್ಯಗಳ ಇಲಾಖೆಗಳು ಈ ಸಂತೆಯಲ್ಲಿ ಭಾಗವಹಿಸಿವೆ. ಫಿಲ್ಮ್ ಬಜಾರ್ ಎನ್‌ಎಫ್‌ಡಿಸಿ ಸಂಘಟಿಸುತ್ತಿರುವ ವೇದಿಕೆ. ಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರ ಏಜೆಂಟರು, ವಿತರಕರು, ಚಿತ್ರೋತ್ಸವ ಸಂಘಟಕರ ವಿಚಾರ ವಿನಿಮಯಕ್ಕೆ ಕಲ್ಪಿಸಿರುವಂಥದ್ದು. ದಕ್ಷಿಣ ಏಷ್ಯಾ ಹಾಗೂ ವಿವಿಧ ದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳುವರು. ಕಳೆದ ವರ್ಷ 850 ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.