Advertisement
ರಾಜಕೀಯದಿಂದ ದೂರ ನನಗೆ ರಾಜಕೀಯ ಆಸಕ್ತಿ ಇಲ್ಲ. ರಾಜಕೀಯ ಆಸಕ್ತಿ ಇದ್ದಿದ್ದರೆ ಇವತ್ತು ಎಲ್ಲೋ ಹೋಗಬಹುದಿತ್ತು. ನನಗೆ ಸಿನಿಮಾವೊಂದೇ ಸಾಕು. ಅಂಬರೀಶ್ ಅವರೊಟ್ಟಿಗೆ ಎಷ್ಟು ಕ್ಲೋಸ್ ಆಗಿದ್ನೋ, ನಿಖೀಲ್ ಕುಮಾರಸ್ವಾಮಿ ಕೂಡಾ ಅಷ್ಟೇ ಆತ್ಮೀಯರು. ಹೀಗಿರುವಾಗ ನಾನು ಹೇಗೆ ಮಾಡಲಿ ಹೇಳಿ? ಎಲ್ಲರಿಗಿಂತ ಹೆಚ್ಚು ನನ್ನ ಅಗತ್ಯವಿರೋದು ವಯಸ್ಸಾದ ನನ್ನ ತಂದೆ-ತಾಯಿಗೆ. ಅವರ ಆರೋಗ್ಯ ಸರಿಯಿಲ್ಲ. ನಾನು ಒಬ್ಬನೇ ಮಗ. ಅವರಿಗೆ ನಾನು ಬೇಕು. ಈ ಸಂದರ್ಭದಲ್ಲಿ ನಾನು ಅವರ ಜೊತೆ ಇರಬೇಕು.
ನೋಡಿ ನಾನು “ಪೈಲ್ವಾನ’ ಕಥೆಯ ಲೈನ್ ಕೇಳಿದಾಗ ಎಕ್ಸೆಟ್ ಆಗಿದ್ದು ನಿಜ. ಆದರೆ, ನಾನು ಯಾವತ್ತೂ ಜಿಮ್‌ಗೆ ಹೋದವನೇ ಅಲ್ಲ. ಗಂಭೀರವಾಗಿ ಅದನ್ನು ಪರಿಗಣಿಸಿಯೂ ಇಲ್ಲ. ನನ್ನ ತಲೆಯಲ್ಲಿ ಶೂಟಿಂಗ್ ಮುಗಿಸಿ, ಮನೆಗೆ ಹೋಗೋದಷ್ಟೇ ಗೊತ್ತು. ಯಾರಾದರೂ ಜಿಮ್‌ಗೆ ಹೋಗಿ ಬರ್ತೀನಿ ಅಂದರೆ, ಲೈಫನ್ನೇ ವೇಸ್ಟ್ ಮಾಡಿಕೊಳ್ತಾನಲ್ಲ ಎಂಬ ಫೀಲಿಂಗ್ಸ್. ಜಿಮ್ ಮಾಡುವಾಗ ಅಲ್ಲಿ ಯಾರೂ ಇರಲ್ಲ. ನಾನು ಮತ್ತು ಕಬ್ಬಿಣದ ವಸ್ತುಗಳಷ್ಟೇ. ಆದರೂ, ನಾನು ಮಾಡಬೇಕು ಅಂತ ಅಂದಾಗ, ಭಯ ಶುರುವಾಯ್ತು. ಯಾವುದೋ ಶೇಪ್‌ನಿಂದ ಇನ್ಯಾವುದೋ ಶೇಪ್ ತಗೋಬೇಕು. ಕೆಲ ಸ್ನೇಹಿತರು ವರ್ಷಗಟ್ಟಲೆ ಅದನ್ನು ಮಾಡಿದ್ದಾರೆ. ನಾನು ಮಾಡಬೇಕು ಎಂಬುದನ್ನು ನೆನಪಿಸಿಕೊಂಡರೆ ಒಂದಷ್ಟು ಪ್ರಶ್ನೆಗಳು ಹುಟ್ಟಿದ್ದು ನಿಜ. ಅದಕ್ಕೆಲ್ಲ ಸಮಯ ಬೇಕು, ತಾಳ್ಮೆ ಬೇಕು. ನನ್ನಿಂದ ಸಾಧ್ಯವಿಲ್ಲ ಅನ್ನುತ್ತಲೇ, ನೀವು ಬೇರೆಯವರನ್ನು ಇಟ್ಟುಕೊಂಡು ಚಿತ್ರ ಮಾಡಿಬಿಡಿ ಅನ್ನೋ ಮಾತುಕತೆ ಬಂತು. ಕೊನೆಗೆ ನೀವು ಮಾಡಿದರೆ ಮಾಡ್ತೀನಿ ಸರ್ ಅಂದಾಗಲೂ, ಈ ಸಿನಿಮಾನೇ ಬೇಡ ಅಂತ ಹೋಗಿದ್ದೂ ಇದೆ. ಒಂದು ವಾರದ ಬಳಿಕ ಯಾಕೋ ತಲೆಗೆ ಒಂದು ಯೋಚನೆ ಬಂತು. ನಾನು ಯಾವುದರಿಂದ ಓಡುತ್ತಾ ಇದೀನಿ. ಇವತ್ತಲ್ಲ ನಾಳೆ ಮಾಡಲೇಬೇಕು. ಪ್ರಯತ್ನ ಮಾಡೋಣ, ಅಬ್ಬಬ್ಟಾ ಅಂದ್ರೆ ಒಂದು ಮಟ್ಟಕ್ಕೆ ಬರ್ತೀನಿ ಅಲ್ವಾ ಎಂಬ ಯೋಚನೆ ಬಂತು. ಅದಕ್ಕಿಂತ ಹೆಚ್ಚಾಗಿ ಒಂದು ಹಠ ಶುರುವಾಯ್ತು. ಆ ಹಠಕ್ಕೆ ಕಾರಣ, “ಕುಸ್ತಿ’ ಮೇಲೆ ಒಂದು ಸಿನಿಮಾ ಮಾಡ್ತೀನಿ ಅನ್ನೋದು. ಕ್ರೀಡೆಗೆ ಸಂಬಂಧಿಸಿದ ಚಿತ್ರ ಮಾಡಿರಲಿಲ್ಲ. “ಪೈಲ್ವಾನ’ ಮಾಡೋಕೆ ರೆಡಿಯಾದೆ. ಜಿಮ್‌ಗೆ ತುಂಬಾ ಡೆಡಿಕೇಷನ್ ಬೇಕಿತ್ತು. ಅಲ್ಲಿ ಕಟ್ಟುನಿಟ್ಟಿನ ಕೆಲಸ ಶುರುವಾಯ್ತು. ಡಯೆಟ್ ಕೂಡ ಸರಿಯಾಗಿತ್ತು. ನಾನು ಊಟ ಮಾಡೋದು ಕಮ್ಮಿ. ಕುರುಕಲು ತಿಂಡಿ ತಿನ್ನೋದು ಜಾಸ್ತಿ ಇತ್ತು. ಆದರೂ, ಅದನ್ನು ಜಿಮ್‌ಗಾಗಿ ನಿಲ್ಲಿಸಿದೆ. ರಾಮೋಜಿ ಫಿಲ್ಮ್ಸಿಟಿಯಲ್ಲೇ ಎಲ್ಲವೂ ವ್ಯವಸ್ಥೆ ಆಗಿತ್ತು. ಏಳಕ್ಕೆ ಊಟ ಮುಗಿಸಬೇಕು. ಏಳುವರೆ ಆದರೂ ಊಟ ಮಾಡುವಂತಿಲ್ಲ. ಶೇಪ್ ಆಗೋಕೆ ಸಾಕಷ್ಟು ಕಸರತ್ತು ಮತ್ತು ಶಿಸ್ತು ಬೇಕಿತ್ತು. 4.30 ಕ್ಕೆ ಎದ್ದರೆ, 5ಕ್ಕೆ ಜಿಮ್‌ಗೆ ಹೋಗಿ, 6.15 ರ ತನಕ ವರ್ಕೌಟ್ ಮಾಡಿ, ಅಲ್ಲಿಂದ ಐದು ನಿಮಿಷ ಲೊಕೇಶನ್‌ಗೆ ತಲುಪಿ, ಸಿಗುವ 15 ನಿಮಿಷ ಮಲಗಿ, ನಂತರ 7.15 ಕ್ಕೆ ಫಸ್ಟ್ ಶಾಟ್ ಕೊಡುತ್ತಿದ್ದೆ. 1.15 ಕ್ಕೆ ಊಟ ಕೊಡಲೇಬೇಕಿತ್ತು. ನಂತರ 5.15ಕ್ಕೆ ಬಂದು ನೇರ ಸ್ವಿಮ್ಮಿಂಗ್ ಮುಗಿಸಿ ಮನೆಗೆ ಹೋಗಿ, ಒಂದು ಬ್ಲಾಕ್ ಟೀ ಕುಡಿದು, ನಾನೇ ಬೇಕಾದ ಅಡುಗೆ ಮಾಡಿ ಊಟ ಮುಗಿಸಿ 8.30 ಕ್ಕೆ ಮಲಗುತ್ತಿದ್ದೆ. ನನಗೆ ವರ್ಕ್ ಡಿಸಿಪ್ಲೀನ್ ಜಾಸ್ತಿ. ಆದರೆ, ಪರ್ಸನಲ್ ಡಿಸಿಪ್ಲೀನ್ ಕಮ್ಮಿ. ಆದರೆ, “ಪೈಲ್ವಾನ’ ನನ್ನ ಜೀವನದಲ್ಲಿ ಶಿಸ್ತು ಕಲಿಸಿತು.
Related Articles
ಯಾವುದೇ ನಟ ಇರಲಿ, ಸಕ್ಸಸ್ ತುಂಬಾ ಖುಷಿ ಕೊಡುವ ವಿಷಯವೇ. ಅದು ಪ್ರತಿಯೊಬ್ಬರ ಲೈಫಲ್ಲೂ ಅಷ್ಟೇ. ಆದರೆ, ಆ ಯಶಸ್ಸು ಏಕಾಂಗಿಯನ್ನಾಗಿಸುತ್ತೆ ಅನ್ನೋದು ಗೊತ್ತಿರಬೇಕು. ಯಾಕೆಂದರೆ, ನಿತ್ಯ ನಮ್ಮನ್ನು ಗೈಡ್ ಮಾಡೋದು ನಮ್ಮ ಮ್ಯಾನೇಜರ್, ಇಷ್ಟು ಗಂಟೆಗೆ ಶೂಟಿಂಗ್, ಇಂಥಾ ದಿನ ಮೀಟಿಂಗ್ ಅಂತ ಹೇಳುವವರೇ ಅವರು. ಅವರ ಪ್ರಕಾರ ಎಲ್ಲಾ ನಡೆಯುತ್ತೆ, ಇನ್ನು ಸೆಟ್‌ಗೆ ಬಂದರೆ, ನಿರ್ದೇಶಕರು ಹೇಳಿದ್ದನ್ನು ಕೇಳಬೇಕು, ಹೀಗೆ ಡೈಲಾಗ್ ಹೇಳಬೇಕು, ಇಲ್ಲಿ ಕೂರಬೇಕು, ಅಲ್ಲಿ ನಿಲ್ಲಬೇಕು ಅಂದಾಗ ಅದನ್ನು ಮಾಡಲೇಬೇಕು. ಪ್ರೊಡಕ್ಷನ್‌ನವರು ಊಟದ ವಿಷಯ ನೋಡ್ಕೊತ್ತಾರೆ, ಕಾಸ್ಟೂಮ್‌ನವರು ಇಂಥದ್ದನ್ನು ಹಾಕಿಕೊಳ್ಳಿ ಅನ್ನುತ್ತಾರೆ. ಇವೆಲ್ಲವನ್ನೂ ಕೇಳಲೇಬೇಕು. ಇನ್ನು, ಈ ಯಶಸ್ಸು ಇಟ್ಟುಕೊಂಡು ಒಬ್ಬೊಬ್ಬರೇ ಎಲ್ಲೂ ಹೋಗುವಂತಿಲ್ಲ. ಹಾಗಾಗಿ ಏಕಾಂಗಿಯನ್ನಾಗಿಸುತ್ತೆ. ನಮಗೆ ಪ್ರೈವಸಿ ಸಿಗೋದು ಕೆಲ ವಿಷಯಗಳಲ್ಲಿ ಮಾತ್ರ.
Advertisement
ದೊಡ್ಡದನ್ನು ಸಾಧಿಸಲು ದೊಡ್ಡ ಕೆಲಸಕ್ಕೆ ಕೈ ಹಾಕಿನನ್ನ ಪ್ರಕಾರ ಸಾಧನೆ ಮಾಡಬೇಕಾ, ದೊಡ್ಡದ್ದಾಗಿಯೇ ಯೋಚಿಸಿ ದೊಡ್ಡದ್ದಾಗಿ ಗುರುತಿಸಿಕೊಳ್ಳಿ. ಚಿಕ್ಕದ್ದಾಗಿ ಯೋಚಿಸಿ ದೊಡ್ಡದ್ದಾಗಿ ಗುರುತಿಸಿಕೊಳ್ಳೋಕೆ ಹೋಗಬಾರದು. ಅದು ತುಂಬಾನೇ ಕಷ್ಟ. ನೀವು ಸಾಧಿಸಬೇಕಾ, ದೊಡ್ಡದ್ದಾಗಿಯೇ ಯೋಚಿಸಿ. ಅದರೊಂದಿಗೆ ಶ್ರದ್ಧೆ, ಶ್ರಮದಿಂದ ಕೆಲಸ ಮಾಡಿದರೆ ಮಾತ್ರ ಎಲ್ಲವೂ ಸಾಧ್ಯವನ್ನಾಗಿಸುತ್ತೆ.
ಏಕಕಾಲದಲ್ಲಿ ಏಕ ಯೋಚನೆ
ನಾನು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ಇವತ್ತು ಏನು ನಡೆಯುತ್ತದೆಯೋ ಅದರ ಬಗ್ಗೆಯಷ್ಟೇ ಚಿಂತಿಸುತ್ತೇನೆ. ಭವಿಷ್ಯ ಯಾರಿಗೂ ಗೊತ್ತಿರುವುದಿಲ್ಲ. ಹಾಗಾಗಿ, ಇರುವುದನ್ನು ಎಂಜಾಯ್ ಮಾಡಬೇಕು. ಯಾವುದೇ ಕೆಲಸವಾದರೂ ನಾನದನ್ನು ಎಂಜಾಯ್ ಮಾಡುತ್ತೇನೆ. ಚಿತ್ರೀಕರಣಕ್ಕೆ ಬಂದರೆ ಸಂಪೂರ್ಣ ಅದರೆಡೆಗೆ ಗಮನ ಕೊಡುತ್ತೇನೆ. ಬೇರೆಯದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕ್ರಿಕೆಟ್ ಆಡುವಾಗ ತುಂಬಾ ಖುಷಿಯಿಂದ, ಪೂರ್ಣ ಮನಸ್ಸಿನಿಂದ ಭಾಗವಹಿಸುತ್ತೇನೆ. ಫ್ಯಾಮಿಲಿ, ಫ್ರೆಂಡ್ಸ್, ಪಾರ್ಟಿ … ಯಾರ ಜೊತೆ ಇರುತ್ತೇನೋ, ಏನು ಮಾಡುತ್ತೇನೋ ಅದನ್ನು ಸಂಪೂರ್ಣ ಎಂಜಾಯ್ ಮಾಡುತ್ತೇನೆ. ಆ ಸಮಯದಲ್ಲಿ ಬೇರೆಯದರ ಬಗ್ಗೆ ಯೋಚಿಸುವುದಿಲ್ಲ. ಏನೇ ಮಾಡಿದರೂ ಪೂರ್ಣ ಮನಸ್ಸಿನಿಂದ ಮಾಡುತ್ತೇನೆ. ಕುಟುಂಬದವರ ಸಹಕಾರ
ಇವತ್ತು ನಾನು ಅಭಿಮಾನಿಗಳ ಜೊತೆ ನನ್ನ ಕುಟುಂಬಕ್ಕೂ ಥ್ಯಾಂಕ್ಸ್ ಹೇಳಬೇಕು. ನಿಜಕ್ಕೂ ಅವರು ಗ್ರೇಟ್. ಸಿನಿಮಾಗಳು ಆ್ಯವರೇಜ್ ಆದಾಗಲೂ ಅಭಿಮಾನಿಗಳು ಹೇಗೆ ಕೈ ಬಿಡದೇ ಹೇಗೆ ನಡೆಸಿಕೊಂಡು ಬಂದಿದ್ದಾರೋ ಅದೇ ರೀತಿ, ಫ್ಯಾಮಿಲಿ-ಫ್ರೆಂಡ್ಸ್ ಕೂಡಾ. ಏಕೆಂದರೆ ಯಾವತ್ತೋ ಮನೆಗೆ ಹೋಗುತ್ತೇನೆ, ಯಾವಾಗಲೂ ಬರುತ್ತೇನೆ. ಎಷ್ಟೇ ಹೊತ್ತಿಗೂ ಬಂದರೂ ಪ್ರೀತಿಯಿಂದ ಮಾತನಾಡಿಸುವ ಅಪ್ಪ-ಅಮ್ಮ, ಹೆಂಡ್ತಿ-ಮಗಳು … ಜೊತೆಗೆ ನನ್ನ ಗುರುತು ಮರೆಯದೇ ಪ್ರೀತಿಯಿಂದ ಓಡಿ ಬರುವ ನಾಯಿ … ಹೀಗೆ ಎಲ್ಲಾ ಕಡೆಯಿಂದ ಪ್ರೀತಿ ತೋರುವವರೇ ಇದ್ದಾರೆ. ಇರೋ ಎರಡು ಕಾಲನ್ನು ಹತ್ತು ಕಡೆ ಇಡುವಾಗ ಅವೆಲ್ಲವನ್ನು ಸಹಿಸಿಕೊಂಡು, ಸಂಭಾಳಿಸಿಕೊಂಡು ಹೋಗೋದು ಇದೆಯಲ್ಲ. ಅದು ದೊಡ್ಡಗುಣ. ತೆರೆಮೇಲೆ ಇರೋದೇ ಇಷ್ಟ
ನನಗೆ ಹಿರಿತೆರೆ, ಕಿರುತೆರೆ ಎಂಬ ಯಾವ ವ್ಯತ್ಯಾಸವೂ ಇಲ್ಲ. ನನಗೆ ತೆರೆಯಷ್ಟೇ ಮುಖ್ಯ. ತೆರೆ ಅನ್ನೋದೇ ನನಗೆ ಖುಷಿಕೊಡುತ್ತೆ. ಸದಾ ನಾನು ತೆರೆಮೇಲೆ ಇದ್ದು, ಜನರನ್ನು ಎಂಟರ್‌ಟೈನ್ ಮಾಡಲು ಇಷ್ಟಪಡುತ್ತೇನೆ. ನೀವು ನನ್ನನ್ನು ಚಿತ್ರಮಂದಿರದಲ್ಲಾದರೂ ನೋಡಿ, ಟಿವಿಯಲ್ಲಾದರೂ ನೋಡಿ ಅಥವಾ ಸಣ್ಣ ಮೊಬೈಲ್ ಸ್ಕ್ರೀನ್‌ನಲ್ಲಾದರೂ ನೋಡಿ. ನೋಡಿ ಖುಷಿಪಡುತ್ತಿರುತ್ತಾರಾ, ಅವರಿಗೆ ಮನರಂಜನೆ ಕೊಟ್ಟು ,ಸೀಟಲ್ಲಿ ಹಿಡಿದಿಡುವ ಸಾಮರ್ಥ್ಯವಿದೆಯಾ ಅದು ಮುಖ್ಯ. ಅದನ್ನು ನಾವು ಆಗಾಗ ಟ್ಯೂನ್ ಮಾಡಿಕೊಳ್ಳುತ್ತಿರಬೇಕು. ಯಾವುದೇ ತೆರೆಮೇಲಾದರೂ ಬನ್ನಿ, ನೋಡಿದ್ರೆ ಜನ ವಿಶಲ್, ಚಪ್ಪಾಳೆ ಹೊಡಿತಾರಾ ಅಷ್ಟು ಸಾಕು. ಆರು ಸೀಸನ್ ಆಗಿ ಏಳನೇ ಸೀಸನ್ ಆದ್ರೂ ಜನ ನೋಡೋಕೆ ಕಾಯ್ತಾರಂದ್ರೆ ನಾವು ಅದನ್ನು ಮತ್ತಷ್ಟು ಬೆಳೆಸಿಕೊಂಡು ಹೋಗೋಣ. ನಾನು ತೆರೆಗೆ ನಿಯತ್ತಾಗಿರಲು ಇಷ್ಟಪಡುತ್ತೇನೆ. ಇಬ್ಬರು ಒಂದೇ ಕಥೆ ಮಾಡೋದರಲ್ಲಿ ಅರ್ಥವಿಲ್ಲ
ಐತಿಹಾಸಿಕ ಚಿತ್ರ ಮದಕರಿ ನಾಯಕನನ್ನು ಅವರು ಮಾಡ್ತಾ ಇದ್ದಾರೆ. ಮಾಡಲಿ. ಅದಕ್ಕಿಂತ ಹೆಚ್ಚು ನನಗೆ ಫ್ರೀಡಂ ಕೂಡಾ ಮುಖ್ಯ. ಅವರು ಏನ್ ಮಾಡ್ತಾರೆ, ನಾವೇನು ಮಾಡ್ತೀವಿ ಅಂತ ಕೇಳ್ಕೊಂಡು ಮಾಡೋದರಲ್ಲಿ ಅರ್ಥವಿಲ್ಲ. ಅದಕ್ಕಿಂತ ಹೆಚ್ಚಾಗಿ ಎರಡೂ ಸಿನಿಮಾಗಳಿಗೂ ಬೇಕಾಗಿರೋದು ವಿಪರೀತ ಬಂಡವಾಳ. ಯಾಕೆ ಅಷ್ಟೊಂದು ಕಾಸು ಹಾಕಿ ಅದನ್ನೇ ಮಾಡಬೇಕು. ಎರಡು ಹೋಟೆಲ್‌ನಿಂದ ಊಟ ಬರುತ್ತೆ ಅನ್ನೋದು ಮುಖ್ಯವಾಗುತ್ತೇ ಹೊರತು, ಎರಡೂ ಹೋಟೆಲ್‌ನಿಂದಲೂ ಇಡ್ಲಿನೇ ತರುತ್ತಿದ್ದಾರೆಂದರೆ, ಏನಕ್ಕೆ ಬೇಕು ಅನ್ಸುತ್ತೆ. ಅದರ ಬದಲು ವೆರೈಟಿ ತರೋದು ಮುಖ್ಯ. ಅದು ಎಲ್ಲಿಂದ ತರುತ್ತೀರಿ ಅನ್ನೋದು ಮುಖ್ಯವಲ್ಲ. ಅಷ್ಟೊಂದು ಖರ್ಚು ಮಾಡಿ, ಇಬ್ಬರು ಒಂದೇ ತರಹ ಹೇಳಿ, ಆ ನಂತರ “ನಾನು ಚೆನ್ನಾಗಿ ಹೇಳಿದ್ನಾ, ನೀನು ಚೆನ್ನಾಗಿ ಹೇಳಿದ್ನಾ’ ಎಂಬುದಕ್ಕೆ ಯಾಕೆ ಇಳಿಯಬೇಕು. ನಾನು ಆ ಸ್ಕ್ರಿಪ್ಟ್ಗೆ ಎರಡು ವರ್ಷ ತೊಡಗಿಸಿಕೊಂಡಿದ್ದೆ. ಹಾಗಂತ ಹಠ ಹಿಡಿದು ಕೂರೋದರಲ್ಲಿ ಅರ್ಥವಿಲ್ಲ. ಯಾರಾದರೂ ಒಬ್ಬರು ಬಿಡಬೇಕು. ಇಲ್ಲಾಂದ್ರೆ, ನೀನಾ, ನಾನಾ ಎಂದು ಹೋಗಿ ಕೊನೆಗೆ ಇಬ್ಬರು ಅಲ್ಲ ಅನ್ನೋ ತರಹ ಆಗಿಬಿಡುತ್ತೆ. ಮಾಡಲಿ ಅವರು, ದರ್ಶನ್ ಅವರಿಗೆ ಐತಿಹಾಸಿಕ ಸಿನಿಮಾ ಮೇಲೆ ಒಲವು ಜಾಸ್ತಿ. ಮಾಡ್ತಾರೆ ಅವರು. ರಾಕ್‌ಲೈನ್ ಕೂಡಾ ನಮಗೆ ಬೇಕಾದವರು. ಒಳ್ಳೆಯ ತಂಡವಿದೆ, ಮಾಡ್ತಾರೆ. ಒನ್ಸ್ ಅಗೇನ್ ಕೆ 3
“ಕೋಟಿಗೊಬ್ಬ’ ಫನ್ ಸಿನಿಮಾ. ಮಜವಾಗಿರುವ ಚಿತ್ರವಿದು. ಹಾಗೆ ಹೇಳುವುದಾದರೆ, ಫನ್ ಬ್ರಾಂಡ್ ಆಗಿಬಿಟ್ಟಿದೆ. ಶಿವ ಎಂಬ ಪಾತ್ರವಿರಲಿ, ಮ್ಯೂಸಿಕ್ ಇರಲಿ ಎಲ್ಲವೂ ಬ್ರಾಂಡ್ ಆಗಿದೆ. ಇದನ್ನು ನಾನು ಮುಂದುವರೆದ ಭಾಗ ಅಂತ ಹೇಳಲ್ಲ. ಒಂದು ವಿಭಿನ್ನ ಚಿತ್ರ. ಈ ಚಿತ್ರಕ್ಕೆ ಮೊದಲು ಶೀರ್ಷಿಕೆ ಮಾತ್ರ ಫಿಕ್ಸ್ ಆಗಿತ್ತು. ಕಥೆ ರೆಡಿಯಾಗಿರಲಿಲ್ಲ. ಆಗ ಒಂದು ಐಡಿಯಾ ಕೊಟ್ಟಿದ್ದೆ. ಈ ಐಡಿಯಾ ಹೇಗಿರುತ್ತೆ ನೋಡಿ ಅಂತ. ಆ ಐಡಿಯಾ ಮೇಲೆ ಬರೆದ ನಂತರ ಆರೇಳು ವರ್ಷನ್ ಆಗಿತ್ತು. ಆದರೆ, ಎಲ್ಲೂ ಲಿಂಕ್ ತಪ್ಪದೆ, ಅದನ್ನು ಇಟ್ಟುಕೊಂಡೇ ಚಿತ್ರ ಮಾಡಿದ್ದೇವೆ. ಈಗ ನಮಗೆ ಒಂದೊಂದು ಸೀನ್ ಕೂಡ ಖುಷಿಕೊಡುತ್ತದೆ. ಇಡೀ ಚಿತ್ರದಲ್ಲಿ ಮಜಾನೇ ತುಂಬಿದೆ. ಇದು ಟಿಪಿಕಲ್ “ಕೋಟಿಗೊಬ್ಬ’. ಬಿಗ್ಗರ್ ಸ್ಕೇಲ್, ದೊಡ್ಡ ಸೆಟ್‌ಗಳು ಇಲ್ಲಿವೆ. ಯಾರೂ ಇದುವರೆಗೆ ಮೆಟ್ರೋ ಸೆಟ್ ಹಾಕಿಲ್ಲ. ಅದಕ್ಕಾಗಿ ತುಂಬಾ ದಿನ ಶ್ರಮಿಸಲಾಗಿದೆ. ಐರನ್ ಮೋಲ್ಡ್ ನಲ್ಲೇ ನಿರ್ಮಿಸಲಾಗಿದ್ದು, ತುಂಬ ಖರ್ಚು ಮಾಡಲಾಗಿದೆ. ದೊಡ್ಡ ಫಾರ್ಮೆಟ್‌ನಲ್ಲಿ ಕೆಲಸವಾಗಿದೆ. ಇದು ಒನ್‌ಪೀಸ್ ಅಷ್ಟೇ. ತುಂಬಾ ಕಡೆ ಆ ರೀತಿಯ ಸೆಟ್‌ಗಳಿವೆ. “ಕೋಟಿಗೊಬ್ಬ’ ಸೀರಿಸ್ ಆಗುತ್ತಾ ಗೊತ್ತಿಲ್ಲ. ಆದರೆ, ಮುಂದೆ ಹೇಗೋ ಗೊತ್ತಿಲ್ಲ. ಅವಸರವೇನಿಲ್ಲ. ಮುಂದೆ ನೋಡೋಣ, ಕಥೆ ಇದ್ದರೆ, ಕೋಟಿಗೊಬ್ಬ 10 ಸೀರಿಸ್ ಆದರೂ ಪರವಾಗಿಲ್ಲ. ವಿಷಯವಿದ್ದರೆ ಮಾತ್ರ ಮಾಡ್ತೀನಿ. ರವಿ/ವಿಜಿ