Advertisement

ಮೈದುಂಬಿಕೊಳ್ಳುತ್ತಿದೆ ಕಬಿನಿ ಜಲಾಶಯದ ಒಡಲು

09:32 PM Jul 09, 2019 | Lakshmi GovindaRaj |

ಮೈಸೂರು: ಮುಂಗಾರು ಮಳೆಯ ಆಗಮನವಾಗುತ್ತಿದ್ದಂತೆ ರಾಜ್ಯದಲ್ಲೇ ಪ್ರಪ್ರಥಮವಾಗಿ ಭರ್ತಿಯಾಗುವ ಹೆಗ್ಗಳಿಕೆ ಹೊಂದಿರುವ ಕಬಿನಿ ಜಲಾಶಯ ಈ ಬಾರಿ ತಡವಾಗಿ ಮೈದುಂಬಿಕೊಳ್ಳುತ್ತಿದೆ. ನೆರೆಯ ಕೇರಳ ರಾಜ್ಯದ ವೈನಾಡು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾಗುತ್ತಿದ್ದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿತ್ತು.

Advertisement

ಜೊತೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಧಾರಣ ಮಳೆಯಾಗುತ್ತಿದ್ದರಿಂದ ಎಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಕಬಿನಿ ನದಿಗೆ ಅಡ್ಡಲಾಗಿ 1974ರಲ್ಲಿ ನಿರ್ಮಿಸಲಾಗಿರುವ ಗರಿಷ್ಠ 2284.00 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ ದಿನೇ ದಿನೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದ್ದು, ಜಲಾಶಯದ ನೀರಿನ ಮಟ್ಟ ಏರುತ್ತಿತ್ತು.

ಆದರೆ, ನಿನ್ನೆಯಿಂದ ಕೇರಳದಲ್ಲಿ ಮಳೆ ತಗ್ಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲೂ ಜಿಟಿ ಜಿಟಿ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ತಗ್ಗಿದೆ.  19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯದ ಲೈವ್‌ ಸ್ಟೋರೇಜ್‌ ಮಟ್ಟ 15.67 ಟಿಎಂಸಿ.  ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 18.44 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ವರ್ಷ 9.54 ಟಿಎಂಸಿ ನೀರು ಸಂಗ್ರಹವಿದೆ.

ಜಲಾಶಯದ ಇಂದಿನ ಮಟ್ಟ 2265.39 ಅಡಿಗಳಿದ್ದು, ಕಳೆದ ವರ್ಷ ಇದೇ ದಿನ 2282.32 ಅಡಿ ನೀರಿತ್ತು. ಜಲಾಶಯಕ್ಕೆ ಮಂಗಳವಾರ ಬೆಳಗ್ಗೆ 6 ಗಂಟೆಯ ಮಾಪನದಲ್ಲಿ 5,984 ಕ್ಯೂಸೆಕ್‌ ಒಳ ಹರಿವು ಬರುತ್ತಿತ್ತು. ಆದರೆ, ಸಂಜೆ 6 ಗಂಟೆಯ ಮಾಪನದಲ್ಲಿ 4,630 ಕ್ಯೂಸೆಕ್‌ ದಾಖಲಾಗಿದೆ. 500 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 32,635 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 35 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿತ್ತು.

ಒಳಹರಿವು ಕುಸಿತ: ಜೂನ್‌ ತಿಂಗಳಲ್ಲಿ ಮುಂಗಾರು ಮಳೆಯ ಆರಂಭದ ದಿನಗಳಲ್ಲೇ ಮೈದುಂಬಿ ಕೊಂಡು ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಗರಗಳ ಜನತೆಗೆ ಕುಡಿಯುವ ನೀರಿನ ಪ್ರಮುಖ ಆಧಾರದ ಜೊತೆಗೆ ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು, ರೈತರ ಕೃಷಿ ಭೂಮಿಗೆ ನೀರುಣಿಸುವ ಕಬಿನಿ ಜಲಾಶಯಕ್ಕೆ

Advertisement

-ಈ ವರ್ಷ ಜೂನ್‌ ತಿಂಗಳು ಕಳೆದರೂ ಮುಂಗಾರು ಮಳೆ ಕಾಲಿಡದೆ ಒಳಹರಿವಿನ ಪ್ರಮಾಣ ಕುಸಿತವಾಗಿದ್ದರಿಂದ ಜಲಾಶಯದ ನೀರಿನಮಟ್ಟ ದಿನೇ ದಿನೆ ಕಡಿಮೆಯಾಗುತ್ತಾ, ಕೃಷಿಗಿರಲಿ ಬೆಂಗಳೂರು ಮತ್ತು ಮೈಸೂರು ನಗರಗಳ ಜನತೆಯ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಲಕ್ಷಣಗಳು ಕಾಣಿಸುತ್ತಿತ್ತು. ಆದರೆ, ವಿಳಂಬವಾಗಿ ಮಳೆಯ ಆಗಮನವಾಗಿರುವುದರಿಂದ ಜಲಾಶಯಕ್ಕೆ ಒಳ ಹರಿವು ಬರುತ್ತಿದೆ.

ಆತಂಕ: ಜಲಾಶಯ ಭರ್ತಿಯಾಗಿದ್ದರೆ ಜುಲೈ ತಿಂಗಳಲ್ಲಿ ಕಬಿನಿ ಜಲಾಶಯದ ಬಲ ಮತ್ತು ಎಡದಂಡೆಗಳ ಮೂಲಕ ಕೃಷಿ ಚಟುವಟಿಕೆಗೆ ನೀರು ಹರಿಸಲು ಕಬಿನಿ ನೀರಾವರಿ ಸಲಹಾ ಸಮಿತಿ ಸಭೆ ಸೇರಿ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ, ಜಲಾಶಯವೇ ಬರಿದಾಗಿರುವುದರಿಂದ ಮುಂಗಾರು ಮಳೆಯ ಆಗಮನಕ್ಕೆ ಎದುರು ನೋಡುವಂತಾಗಿತ್ತು. ಈ ಮಧ್ಯೆ ಜುಲೈ ಮೊದಲ ವಾರದಲ್ಲಿ ಮುಂಗಾರು ಮಳೆ ವ್ಯಾಪಕವಾಗುತ್ತಿದೆ ಎನ್ನುವಾಗಲೇ ಮತ್ತೆ ಕೈಕೊಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಕೃಷಿ ಚಟುವಟಕೆ ಚುರುಕು: ಮುಂಗಾರು ಮಳೆ ವಿಳಂಬವಾಗಿ ಕಾಲಿಟ್ಟಿರುವುದರಿಂದ ಈಗಾಗಲೇ ಭೂಮಿ ಹದಗೊಳಿಸಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದ ರೈತರು ಇದೀಗ ಬಿತ್ತನೆ ಆರಂಭಿಸಿದ್ದಾರೆ. ನೀರಾವರಿ ಅಚ್ಚುಕಟ್ಟು ಪ್ರದೇಶದ ರೈತರು ಗದ್ದೆಗಳಲ್ಲಿ ಭತ್ತದ ಹಗೆ ಹಾಕುತ್ತಿದ್ದು, ನಾಲೆಗಳಲ್ಲಿ ನೀರು ಹರಿಸಿದ ನಂತರ ಗದ್ದೆ ನಾಟಿ ಕಾರ್ಯ ಕೂಡ ಶುರುವಾಗಲಿದೆ. ಹಿಂದಿನ ಮೂರು ವರ್ಷ ಸತತ ಬರ ಪರಿಸ್ಥಿತಿ, ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಕೈಸುಟ್ಟು ಕೊಂಡಿದ್ದ ರೈತ ಸಮುದಾಯ ಈ ವರ್ಷವಾದರೂ ಮಳೆ ಸಮರ್ಪಕವಾಗಿ ಆಗಲಿ ಎಂದು ಮಳೆಯನ್ನು ಎದುರು ನೋಡುತ್ತಿದೆ.

ಕೇರಳದಲ್ಲಿ ಮಳೆ ಕಡಿಮೆಯಾಗಿದೆ. ನಮ್ಮಲ್ಲಿ ಸೋನೆ ಮಳೆಯಿಂದಾಗಿ ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಬರುತ್ತಿಲ್ಲ. ಭಾರೀ ಮಳೆಯಾಗಿ ಒಳಹರಿವು ಹೆಚ್ಚು ಬಂದರೆ ಮಾತ್ರ ಜಲಾಶಯ ಭರ್ತಿಯಾಗುತ್ತೆ.
-ಮಾಳಗಾವಿ, ಸಹಾಯಕ ಎಂಜಿನಿಯರ್‌, ಕಬಿನಿ ಜಲಾಶಯ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next