ಮಾಗಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮಂಚನಬೆಲೆ ಜಲಾಶಯ ಭರ್ತಿಯಾಗಿದ್ದು, ಗೇಟ್ ಮೂಲಕ ನೀರು ಹೊರ ಬಿಡಲಾಗಿದೆ. ತಾಲೂಕಿನ ಮಾಡಬಾಳ್ ಹೋಬಳಿಗೆ ಸೇರಿದ ಮಂಚನಬೆಲೆ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಆ.28 ರಂದು ಡಿಸಿಎಂ ಡಾ. ಅಶ್ವತ್ಥನಾರಾಯಣ, ಶಾಸಕ ಎ.ಮಂಜು, ಸಂಸದ ಡಿ.ಕೆ.ಸುರೇಶ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಆದರೆ, ಜಲಾಶಯದ ನೀರನ್ನುಗೇಟ್ ಮೂಲಕ ಹೊರ ಬಿಡುತ್ತಿರುವುದು ಅವೈಜ್ಞಾನಿಕ ಎಂಬ ದೂರು ಕೇಳಿ ಬರುತ್ತಿದೆ.
ಜಲಾಶಯ ಭರ್ತಿ: ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಚನಬೆಲೆ ಜಲಾಶಯ ಭರ್ತಿಯಾಗಿದೆ. ನೀರನ್ನು ಹೊರ ಬಿಡುತ್ತಿರುವುದರಿಂದಜಲಾಶಯದ ನೀರು ನದಿಗಳ ಮೂಲಕ ತಮಿಳುನಾಡಿಗೆ ಸೇರುತ್ತದೆ. ಇದರಿಂದ ನಮ್ಮ ಜಲಾಶಯದ ನೀರು ಬೇರೆ ರಾಜ್ಯಕ್ಕೆ ಹರಿದು ಪೋಲಾಗುತ್ತಿದೆ. ಮಂಚನಬೆಲೆ ಜಲಾಶಯದ ಭರ್ತಿಯಾಗಿರುವಾಗ ಪಟ್ಟಣದ ಜನತೆಗೆ ದಿನದ 24 ಗಂಟೆ ಕುಡಿಯಲು ನೀರು ಬಿಡಬೇಕು ಎಂದರು.
ಅಲ್ಲದೇ, ಇದಕ್ಕಾಗಿ ಈಗಾಗಲೇ ಪುರಸಭೆ ಕೋಟ್ಯಂತರ ರೂ. ವೆಚ್ಚದಲ್ಲಿ 24/7 ಕೆಎಂಆರ್‌ಪಿ ಯೋಜನೆಯನ್ನು ಈಗಾಗಲೇ ಅವೈಜ್ಞಾನಿಕವಾಗಿದೆ ಎಂದು ದೂರಿದರು. ಪಟ್ಟಣದ ಜನತೆಗೆ ಕನಿಷ್ಠ 1 ಗಂಟೆ ಕಾಲ ಕುಡಿಯುವ ನೀರು ಸಿಗುತ್ತಿಲ್ಲ. ಆದರೂ ಮತ್ತೆ 8.5 ಕೋಟಿ ರೂ.ಹೆಚ್ಚುವರಿ ಅನುದಾನ ಮಂಜೂರಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿದರೂ, ಪಟ್ಟಣದ ಜನತೆಗೆ ಪ್ರಯೋಜನವಾಗಿಲ್ಲ. ಹೀಗಿರುವಾಗ ಹೊಸ ಪೈಪ್‌ಲೈನ್ ಅಳವಡಿಕೆ ಹೆಸರಿನಲ್ಲಿ ಒಂದು ವಾರಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ.
ರಾಜ್ಯದ ಜನತೆಗೆ ಅನ್ಯಾಯ: ಮಂಚನಬೆಲೆ ಜಲಾಶಯದಲ್ಲಿ ಈಗಿರುವ ನೀರನ್ನು ಹೊರ ಬಿಟ್ಟಿರುವುದರಿಂದ ನೆರೆ ರಾಜ್ಯ ತಮಿಳುನಾಡಿಗೆ ಸೇರುತ್ತಿದೆ. ರಾಜ್ಯದ ನೀರನ್ನು ನೆರೆ ರಾಜ್ಯಕ್ಕೆ ಹರಿಸಿ, ರಾಜ್ಯದ ಜನತೆಗೆ ಅನ್ಯಾಯ ಮಾಡಲಾಗುತ್ತಿದೆ. ಮತ್ತೂಂದೆಡೆ ತಿಪ್ಪಗೊಂಡನಹಳ್ಳಿ ಪುನಶ್ಚೇತನದ ಹೆಸರಿನಲ್ಲಿ ಅಲ್ಲಿನ ಜಲಾಶಯದ ನೀರನ್ನು ಹೊರಬಿಟ್ಟಿದ್ದರಿಂದ ಆ ನೀರು ಮಂಚನಬೆಲೆ ಜಲಾಶಯಕ್ಕೆ ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿದೆ. ಭರ್ತಿಯಾದ ನೀರನ್ನು ಮಾಗಡಿ ಪಟ್ಟಣಕ್ಕೆ ಹರಿಸಿ, ಇಲ್ಲಿನ ಜನತೆ ಕುಡಿಯಲು ಪೂರೈಕೆ ಮಾಡುತ್ತಿದ್ದರೆ, ಜಲಾಶಯದ ನೀರನ್ನು ಹೊರ ಬಿಡುವ ಅನಿವಾರ್ಯ ಬರುತ್ತಿರಲಿಲ್ಲ. ತಾಲೂಕಿನ ಜನತೆಗೆ ಅನುಕೂಲವಾಗುತ್ತಿತ್ತು. ಆದರೆ, ಅವೈಜ್ಞಾನಿಕ ನೀತಿಯಿಂದ ತಾಲೂಕಿನ ಜನತೆಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನೀರಿನ ಕರ ವಸೂಲಿ ನಿಂತಿಲ್ಲ: ಬೇಸಿಗೆ ಕಾಲದಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳುವುದು ಸೂಕ್ತ. ಆದರೆ, ಜಲಾಶಯದಲ್ಲಿ ನೀರಿನ ಕೊರತೆ ಹೇಳಿ, ಪಟ್ಟಣದ ಜನತೆಗೆ ನೀರು ಪೂರೈಕೆ ಮಾಡದೆ ವಂಚಿಸಲಾಗುತ್ತಿದೆ. ಇತ್ತ ಮಳೆಗಾಲದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ಹೆಸರಿನಲ್ಲಿ ಸಮರ್ಪಕವಾಗಿ ನೀರು ಪೂರೈಸದೆ, ನೀರನ್ನು ಪೋಲು ಮಾಡಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಪುರನಾಗರಿಕರಿಂದ ನೀರಿನ ಕರ ವಸೂಲಿ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಸಮರ್ಪಕವಾಗಿ ನೀರು ಕೊಡಲಾಗದ ಮೇಲೆ ಕರ ವಸೂಲಿ ಮಾಡುವುದು ಎಷ್ಟು ಸರಿ ಎಂಬ ಮಾತು ನಾಗರಿಕರಿಂದ ಕೇಳಿ ಬರುತ್ತಿದೆ.
ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿಸಹ ಭರದಿಂದ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರವಷ್ಟೇ ನೀರಿನ ಬವಣೆ ನೀಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಈಗ ಮನೆಗಳಿಗೆ ಬರುತ್ತಿರುವ ನೀರು ತೀರ ಕಲುಷಿತಗೊಂಡಿದ್ದು, ಬಳಕೆಗೆ ಉಪಯೋಗಿಸಲಾಗುತ್ತಿದೆ.
–ರಂಗನಾಥ್, ಪಟ್ಟಣ ನಿವಾಸಿ
ಒಳ ಹರಿವು ಹೆಚ್ಚಾಗಿರುವುದರಿಂದ ಜಲಾಶಯದ ಭದ್ರತೆ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರಬಿಡಲಾಗಿದೆ. ಜಲಾಶಯದಲ್ಲಿ738.09 ಮೀಟರ್‌ನಷ್ಟು ನೀರಿದೆ.ಮುನ್ನೆಚ್ಚರಿಕೆ ಕ್ರಮದಿಂದ 550 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ನದಿ ಪಾತ್ರದ ಜನತೆ ಸುರಕ್ಷಿತವಾಗಿದ್ದಾರೆ.
–ಚರಣ್‌ರಾಜ್, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್.
–ತಿರುಮಲೆ ಶ್ರೀನಿವಾಸ್