Advertisement

ತುಂಬಿದ ಚರಂಡಿ; ದಿಢೀರ್‌ ಹೆದ್ದಾರಿ ಬಂದ್‌-ಆಕ್ರೋಶ

05:49 PM Feb 25, 2022 | Team Udayavani |

ಮುದಗಲ್ಲ: ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ವಾರ್ಡ್‌ ನಂ.7ರ ನಿವಾಸಿಗಳು ಚರಂಡಿ ಸ್ವತ್ಛಗೊಳಿಸದ್ದರಿಂದ ಸೊಳ್ಳೆಕಾಟಕ್ಕೆ ಬೇಸತ್ತು ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟಿಸಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ವಾರ್ಡ್‌ ನಂ.7 ಹನುಮಂತ ದೇವರ ಗುಡಿ ಮುಂಭಾಗದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ನಿರ್ಮಿಸಿದ ಚರಂಡಿಗೆ ಸಂಪರ್ಕ ಕಲ್ಪಿಸದೇ ಹಳೇ ಚರಂಡಿಯಲ್ಲಿ ಪುರಸಭೆ ಮುಂದಿರುವ ಮೂತ್ರಾಲಯ ಹಾಗೂ ಶೌಚಾಲಯ ನೀರು ಹರಿದು ಹಳೇ ಚರಂಡಿಯಲ್ಲಿ ಕಳೆದ ನಾಲ್ಕಾರು ತಿಂಗಳಿಂದ ಅದರಲ್ಲಿಯೇ ಸಂಗ್ರಹವಾಗಿದೆ. ಇದು ಅಲ್ಲಿನ ನಿವಾಸಿಗೆ ತೊಂದರೆಯಾಗಿದೆ. ಹೀಗಾಗಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶಗೊಂಡು ಏಕಾಏಕಿ ಒಂದು ಗಂಟೆ ಕಾಲ ಹೆದ್ದಾರಿ ಬಂದ್‌ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸೈ ಡಾಕೇಶ ಹಾಗೂ ಸಿಬ್ಬಂದಿ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಷ್ಟಾದರೂ ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ನೈರ್ಮಲ್ಯ ನಿರೀಕ್ಷಕಿ ಆರೀಫುನ್ನಿಸಾಬ ಆಗಮಿಸಿ ಒಂದು ಗಂಟೆಯಲ್ಲಿಯೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಹಳೇ ಚರಂಡಿ ಮುಚ್ಚಿಸಿ ಜನರ ಸಮಸ್ಯೆಗೆ ಸ್ಪಂದಿಸಿದರು.

ಈ ವೇಳೆ ಭೀಮಣ್ಣ ಉಪ್ಪಾರ, ಲಿಂಗಪ್ಪ ಉಪ್ಪಾರ, ರಾಮು ಉಪ್ಪಾರ, ಶಂಕರ, ರಾಮಣ್ಣ ಉಪ್ಪಾರ, ಅಮೀನ ನದಾಫ್‌, ಆನಂದ ಮಡಿವಾಳ, ಶರಣು ಹೂಗಾರ, ಹೇಮಂತ ಪಾಟೀಲ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next