ಹೊನ್ನಾವರ: ಲಿಂಗನಮಕ್ಕಿ ಅಣೆಕಟ್ಟು ಆರಂಭವಾದ ಮೇಲೆ ಈವರೆಗೆ 70-80ರ ದಶಕದಲ್ಲಿ ಒಂದೆರಡು ಬಾರಿ ಅಕಸ್ಮಾತ್ ಹೆಚ್ಚು ನೀರು ಬಿಟ್ಟು ಹಾನಿಯಾದದ್ದರ ಹೊರತಾಗಿ ಉಳಿದೆಲ್ಲ ವರ್ಷಗಳಲ್ಲಿ ಲಿಂಗನಮಕ್ಕಿ ಮೇಲೆ ವರುಣನ ಕೃಪೆ ಹೇಗಿದೆ ಎಂದರೆ ಒಂದೆಡೆ ಅಣೆಕಟ್ಟನ್ನು ತುಂಬಿಸುತ್ತ ಇನ್ನೊಂದೆಡೆ ಜನರನ್ನೂ ಎಚ್ಚರಿಸುತ್ತ ನಾಲ್ಕಡಿ ಬಾಕಿ ಇರುವಾಗಲೇ ವರುಣ ಮಾಯವಾಗುತ್ತಿದ್ದ. ಭೀತಿಯೂ ತೊಲಗುತ್ತಿದೆ.
ಸಣ್ಣಪುಟ್ಟ ಅಣೆಕಟ್ಟುಗಳು ಬಯಲು ಸೀಮೆಯಲ್ಲಿ ಅನಾಹುತಗಳ ಸರಣಿಯನ್ನೇ ಸೃಷ್ಟಿಸಿ ಹೋಗುವುದನ್ನು ಪ್ರತಿವರ್ಷ ಕಾಣುವಾಗ ಒಂದು ದೃಷಿಯಿಂದ ಶರಾವತಿಕೊಳ್ಳದ ಜನ ಪುಣ್ಯವಂತರು ಎಂದು ಹೇಳಬೇಕು.
ಶಿವಮೊಗ್ಗಾದ ಅಂಬು ತೀರ್ಥದಿಂದ ಹೊನ್ನಾವರದ ಅಪ್ಸರಕೊಂಡದವರೆಗೆ ಬೇಸಿಗೆಯಲ್ಲೂ ತುಂಬಿ ಹರಿಯುವ ಶರಾವತಿ ದೇಶದ ಸಾರ್ಥಕ ನದಿಗೆ ಸಂಕೇತ. ಎಡಬಲದ ಸಹಸ್ರಾರು ಅಡಕೆ, ತೆಂಗು, ಬಾಳೆ, ಕಬ್ಬು, ಭತ್ತ ಮೊದಲಾದ ತೋಟಗಳಿಗೆ ಬೇಸಿಗೆಯಲ್ಲೂ ನೀರುಣ್ಣಿಸುವ ಶರಾವತಿ ಮಳೆಗಾಲದಲ್ಲೂ ಮಂದವಾಗಿ ಹರಿದ ದಿನಗಳೇ ಹೆಚ್ಚು. ಜೋಗ ಜಲಪಾತವಾಗಿ ಧುಮುಕುವ ಲಿಂಗನಮಕ್ಕಿಯಿಂದ ಟೇಲರೀಸ್‌ವರೆಗೆ ರಾಜ್ಯದಲ್ಲಿ ಒಟ್ಟೂ ಉತ್ಪಾದನೆಯಾಗುವ ಜಲವಿದ್ಯುತ್‌ನಲ್ಲಿ ಶೇ.60 ರಷ್ಟನ್ನು ಜಗತ್ತಿನಲ್ಲಿಯೇ ಅಗ್ಗವಾಗಿ 3 ಪೈಸೆ ಯುನಿಟ್ ಗೆ ಶರಾವತಿ ಕೊಡುತ್ತಿದೆ. ಇದಲ್ಲದೇ ಜೋಗದ ಆಕರ್ಷಣೆ ಬೇರೆ ಇದೆ.
ಇದನ್ನೂ ಓದಿ : ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರ್ಪ್ರೈಸ್ ಅಭ್ಯರ್ಥಿ? ಮಲ್ಲಿಕಾರ್ಜುನ ಖರ್ಗೆ ಸುಳಿವು
ಸಾವಿರಾರು ಜನಕ್ಕೆ ಜೋಗ ಜೀವನೋಪಾಯದ ಮಾರ್ಗ. ಈ ನದಿ ಕುರಿತು ಕವನ ಬರೆಯದ ಕವಿಗಳಿಲ್ಲ. ಇದನ್ನು ಕಂಡು ಹರ್ಷಿಸದ ಜನಗಳಿಲ್ಲ, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗುವ ಮೊದಲು ಕಿಮೀಗಟ್ಟಲೆ ಸಪ್ಪಳದ ಅಬ್ಬರ ಕೇಳುತ್ತಿತ್ತು. ಪ್ರತಿ ಮಳೆಗಾಲದಲ್ಲಿ ನೆರೆಹಾವಳಿ ಬರುತ್ತಿತ್ತು. ಗೇರುಸೊಪ್ಪಾದಿಂದ ಹೊನ್ನಾವರದವರೆಗೆ ಗದ್ದೆಬಯಲನ್ನು ತೊಳೆದುಕೊಂಡು ಹೋಗುತ್ತಿತ್ತು. ಶರಾವತಿ ಕೊಳ್ಳದ ಜನಕ್ಕೆ ಬಡವರೆಂದು ಹೆಣ್ಣು ಕೊಡುತ್ತಿರಲಿಲ್ಲ.
ಅಣೆಕಟ್ಟಿನ ನಿರ್ಮಾಣ ಕಾಲದಲ್ಲಿ ವಿದ್ಯುತ್ ಉತ್ಪಾದನೆ, ಕೃಷಿ, ನೀರಾವರಿ, ನೆರೆ ನಿಯಂತ್ರಣ ಈ ಮೂರು ಉದ್ದೇಶಗಳಿರುತ್ತವೆ. ಶರಾವತಿಯಲ್ಲಿ ಇವು ಮೂರು ಯಶಸ್ವಿಯಾಗಿವೆ. ಆತಂಕದ ಕಾಲಕಳೆದು ಶರಾವತಿ ಮತ್ತೆ ಮಂದಗಮನೆಯಾಗಿ ಹರಿಯತೊಡಗಿರುವಾಗ ಆ ತಾಯಿಗೊಂದು ಕೃತಜ್ಞತೆ ಹೇಳಲು ಈ ಮಾತುಗಳು. ಶರಾವತಿಯನ್ನು ನಿರ್ಮಲವಾಗಿ, ನಿಷ್ಕಲ್ಮಶವಾಗಿ ಅನ್ನನೀಡುವ ತಾಯಿಯಂತೆ ಕಾಪಾಡಿಕೊಳ್ಳಬೇಕಾದದ್ದು ತಾಲೂಕಿನ ಹೊಣೆಯಾಗಿದೆ. ಇಂದಿನ ಲಿಂಗನಮಕ್ಕಿ ಜಲಮಟ್ಟ 0.05 ಅಡಿ ತುಂಬಿ 1814.35 ಅಡಿಯಾಗಿದೆ. ಲಿಂಗನಮಕ್ಕಿಯ ಒಳಹರಿವು 6,679 ಕ್ಯೂಸೆಕ್ ಇದೆ, ಶೇ. 89.90 ಅಡಿ ನೀರು ಭರ್ತಿಯಾಗಿದೆ.
– ಜೀಯು, ಹೊನ್ನಾವರ