ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ದ.ಕ.ಜಿಲ್ಲಾ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ದೂರು ನೀಡಿದ್ದು, ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪಾವಿತ್ರ್ಯತೆ ಉಳಿಸುವಂತೆ, ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ, ದೇವಸ್ಥಾನಕ್ಕೆ ಅನ್ಯ ಮತೀಯರ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ಬಂಟ್ವಾಳ ತಾ.ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಕಾರಿಂಜ ರಥಬೀದಿಯಲ್ಲಿ ನಡೆದ ರುದ್ರಗಿರಿಯ ರಣಕಹಳೆ ಜನಜಾಗೃತಿ ಸಭೆಯಲ್ಲಿ ಜಗದೀಶ ಕಾರಂತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರನ್ನುದ್ದೇಶಿಸಿ ಮಾತಾನಾಡಿದ್ದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಸಂಪತ್ತಿನ ಭಾರಿ ಕೃಷಿ ಮಾಡಿದ ಅಧಿಕಾರಿ: ಎಸಿಬಿ ಸುಸ್ತು!
ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುವ ಗಣಿಗಾರಿಕೆಯನ್ನು ನಿಲ್ಲಿಸಲು ಡಿಸೆಂಬರ್ 21 ರವರೆಗೆ ಗಡುವು ಕೊಟ್ಟಿದ್ದೇವೆ, ಇಲ್ಲದಿದ್ದರೆ ಡಿಸೆಂಬರ್ 21 ಕ್ಕೆ ಎಲ್ಲರೂ ಸಿದ್ಧರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಜಿಲ್ಲಾಧಿಕಾರಿಗಳ ಕಛೇರಿಗೆ ಲಗ್ಗೆ ಹಾಕಿ, ಅವನ ಕೊರಳು ಪಟ್ಟಿಯನ್ನು ಹಿಡಿಯುತ್ತೀವಿ. ತಾಕತ್ತಿದ್ದರೆ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸೋ, ಇಲ್ಲವಾದರೇ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗೋ, ಎಂಬಿತ್ಯಾದಿ ರೀತಿಯಲ್ಲಿ ಏಕವಚನ ಮತ್ತು ಅಸಭ್ಯವಾಗಿ ಮಾತುಗಳನ್ನಾಡುವ ಮೂಲಕ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಿಸಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಪ್ರಚೋದನೆಯನ್ನು ಹಾಗೂ ಅಪರಾಧಕ್ಕೆ ದುಷ್ಪ್ರೇರಣೆ ನೀಡಿರುತ್ತಾರೆ. ಜಗದೀಶ್ ಕಾರಂತ್ ಅವರು ಅಪರಾಧ ಕೃತ್ಯವನ್ನು ಎಸಗುವ ಮನೋಧೋರಣೆ ಹೊಂದಿ ಪ್ರಚೋದಾನಾ ಕಾರಿಯಾಗಿ ಬೆದರಿಕೆಯೊಡ್ಡಿರುವುದರಿಂದ ಮತ್ತು ಸಾವಿರಾರು ಜನಕ್ಕೆ ಅಪರಾಧ ಕೃತ್ಯವೆಸಗಲು ಪ್ರೇರಣೆ ನೀಡಿ ಅಪರಾಧ ಭೀತಿಯನ್ನುಂಟು ಮಾಡಿರುತ್ತಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ್ದರ ಕುರಿತು ಜಗದೀಶ ಕಾರಂತ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.