ಮಂಗಳೂರು: “ಸ್ಟೂಡೆಂಟ್ಸ್ ವೆಡ್ನೆಸ್ ಡೇ ನೈಟ್’ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮದ್ಯದ ಆಮಿಷವೊಡ್ಡಿದ್ದ ದೇರೆಬೈಲ್ ಕೊಂಚಾಡಿಯ ಬಾರೊಂದರ ವಿರುದ್ಧ ಅಬಕಾರಿ ಇಲಾಖೆ ಎಫ್ಐಆರ್ ದಾಖಲಿಸಿದೆ.
“ಕರ್ನಾಟಕ ಅಬಕಾರಿ ಕಾಯಿದೆ-1965’ರ ಉಲ್ಲಂಘನೆ ಹಾಗೂ ಪರವಾನಿಗೆಯ ಷರತ್ತುಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ಕಾಯಿದೆಯ ಸೆಕ್ಷನ್ 36ರಡಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ಸಹಿತ ಅಪ್ರಾಪ್ತ ವಯಸ್ಕರಿಗೆ ಮದ್ಯದ ಆಮಿಷವೊಡ್ಡಿ ಪೋಸ್ಟರ್ ಹಾಕಿರುವುದು ಗಮನಕ್ಕೆ ಬಂದ ಕೂಡಲೇ ಬಾರ್‌ನವರಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿದ್ದೆವು. ಅಬಕಾರಿ ನಿಯಮ ಉಲ್ಲಂಘನೆಯಾಗಿರುವುದರಿಂದ ಇಲಾಖೆ ಗಮನಕ್ಕೂ ತರಲಾಗಿತ್ತು. ಬಾರ್ ಮತ್ತು ಪಬ್‌ಗಳಲ್ಲಿ ಇಂತಹ ನಿಯಮಬಾಹಿರವಾದ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಎಲ್ಲ ಬಾರ್, ಪಬ್‌ಗಳ ಮೇಲೆ ನಿರಂತರ ನಿಗಾ ಇಟ್ಟು ಪರಿಶೀಲಿಸುವಂತೆ ಎಲ್ಲ ಠಾಣೆಗಳಿಗೂ ಸೂಚನೆ ಕಳುಹಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
“ಉದಯವಾಣಿ’ ವರದಿ ಮಾಡಿತ್ತು
ಬಾರ್‌ನಲ್ಲಿ ವಿದ್ಯಾರ್ಥಿಗಳಿಗೆ ಆಫರ್ ಕೊಟ್ಟು ಆಮಿಷವೊಡ್ಡಿರುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕಠಿನ ಕ್ರಮಕ್ಕೆ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಶುಕ್ರವಾರ “ಉದಯವಾಣಿ’ ವರದಿ ಪ್ರಕಟಿಸಿತ್ತು.