ಭುವನೇಶ್ವರ: ಮೂರು ಗೋಲುಗಳ ಹಿನ್ನಡೆಯಿಂದ ಮೇಲೆದ್ದು ಬಂದ ಭಾರತದ ಪುರುಷರ ಹಾಕಿ ತಂಡ ಎಫ್ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ 5-4 ಅಂತರದ ಅಚ್ಚರಿಯ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ವನಿತಾ ತಂಡವೂ ಸ್ಪೇನ್‌ಗೆ ಆಘಾತವಿಕ್ಕಿತ್ತು.
ಪಾವ್ ಕ್ಯುನಿಲ್ 14ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದರು. ಬಳಿಕ ನಾಯಕ ಮಾರ್ಕ್ ಮಿರಾಲ್ಲೆಸ್ ಅವರ ಹ್ಯಾಟ್ರಿಕ್ (20, 23 ಮತ್ತು 40ನೇ ನಿಮಿಷ) ಸಾಧಿಸಿದರು. ಇವರ ಸಾಹಸದಿಂದ ಸ್ಪೇನ್ 4-1ರ ಮುನ್ನಡೆ ಗಳಿಸಿ ಗೆಲುವಿನ ಸನಿಹದಲ್ಲಿತ್ತು. ಭಾರತದ ಏಕೈಕ ಗೋಲನ್ನು ಹರ್ಮನ್‌ಪ್ರೀತ್ ಸಿಂಗ್ 15ನೇ ನಿಮಿಷದಲ್ಲಿ ದಾಖಲಿಸಿದ್ದರು.
ಇಲ್ಲಿಂದ ಮುಂದೆ ಭಾರತ ಯಾರೂ ನಿರೀಕ್ಷಿಸದ ರೀತಿ ಯಲ್ಲಿ ತಿರುಗಿ ಬಿತ್ತು. ಶಿಲಾನಂದ ಲಾಕ್ರಾ (41ನೇ ನಿಮಿಷ), ಶಮ್ಶೆàರ್ ಸಿಂಗ್ (43ನೇ ನಿಮಿಷ), ವರುಣ್ ಕುಮಾರ್ (55ನೇ ನಿಮಿಷ) ಪಟಪಟನೆ ಗೋಲು ಬಾರಿಸಿದರು. ಕೊನೆಯ ಕ್ಷಣದಲ್ಲಿ ಹರ್ಮನ್‌ಪ್ರೀತ್ ಸಿಂಗ್ ತಮ್ಮ 2ನೇ ಗೋಲು ಸಿಡಿಸಿ ಭಾರತದ ಗೆಲುವನ್ನು ಸಾರಿದರು.
ಎಡವಿದ ವನಿತೆಯರು
ರವಿವಾರದ ದ್ವಿತೀಯ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಗೋಲು ಬಿಟ್ಟುಕೊಟ್ಟ ಭಾರತದ ವನಿತೆಯರು ಸ್ಪೇನ್‌ಗೆ 3-4ರಿಂದ ಶರಣಾದರು. ಮೊದಲ ಮುಖಾಮುಖಿಯನ್ನು ಭಾರತ 2-1 ಅಂತರದಿಂದ ಜಯಿಸಿತ್ತು.
ಪಂದ್ಯದ ಮುಕ್ತಾಯಕ್ಕೆ ಇನ್ನೇನು 35 ಸೆಕೆಂಡ್ಸ್ ಬಾಕಿ ಇರುವಾಗ ಸ್ಪೇನ್ 4ನೇ ಗೋಲು ಸಿಡಿಸಿತು. ಭಾರತದ ಗೋಲು ಸಾಧಕಿಯರೆಂದರೆ, ಪದಾರ್ಪಣ ಪಂದ್ಯವಾಡಿದ ಸಂಗೀತಾ ಕುಮಾರಿ (18ನೇ ನಿಮಿಷ), ಸಲೀಮಾ ಟೇಟೆ (22ನೇ ನಿಮಿಷ) ಮತ್ತು ನಮಿತಾ ಟೋಪ್ಪೊ (49ನೇ ನಿಮಿಷ). ಇದು ಪ್ರೊ ಲೀಗ್ ಹಾಕಿ ಕೂಟದ 4 ಪಂದ್ಯಗಳಲ್ಲಿ ಭಾರತಕ್ಕೆ ಎದುರಾದ ಮೊದಲ ಸೋಲು. ಹಾಗೆಯೇ ಸ್ಪೇನ್ ಸಾಧಿಸಿದ ಮೊದಲ ಜಯ.