Advertisement

ಪರ್ಯಾಯ ರಸ್ತೆಗಳಿಲ್ಲದೆ ಪರದಾಟ

06:38 AM Feb 15, 2019 | Team Udayavani |

ಬೆಂಗಳೂರು: ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೆ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ಕೃಷ್ಣರಾಜಪುರದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕೆ.ಆರ್‌.ಪುರದ ಬಡಾವಣೆಗಳ ಜನ ಮನೆ ಬಿಟ್ಟು ರಸ್ತೆಗೆ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

Advertisement

ನಗರದ ಅತಿ ಹೆಚ್ಚು ಜನಸಂದಣಿ ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆಗೆ ಕೃಷ್ಣರಾಜಪುರ ಪಾತ್ರವಾಗಿದೆ. ಸಾಮಾನ್ಯ ದಿನಗಳಲ್ಲೂ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಇದೀಗ ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ದೇವಸಂದ್ರ ಮುಖ್ಯರಸ್ತೆಯಲ್ಲಿ ಪಾಲಿಕೆಯಿಂದ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಕಾಲುವೆ ನಿರ್ಮಾಣ ಕಾಮಗಾರಿಗಾಗಿ ದೇವಸಂದ್ರ ಮುಖ್ಯರಸ್ತೆಯನ್ನು ಸಂಪೂರ್ಣವಾಗಿ ಅಗೆದು,  ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ಸಂಚಾರ ಪೊಲೀಸರು ಪರ್ಯಾಯ ರಸ್ತೆಗಳನ್ನು ಗುರುತಿಸದ ಪರಿಣಾಮ, ವಾಹನ ಸವಾರರು ಬಡಾವಣೆ ಒಳ ರಸ್ತೆಗಳಿಗೆ ನುಗ್ಗುತ್ತಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿ ನಿವಾಸಿಗಳು ಹಿಂಸೆ ಅನುಭವಿಸುವಂತಾಗಿದೆ.

ಕೆ.ಆರ್‌.ಪುರದಿಂದ ಚಿಕ್ಕದೇವಸಂದ್ರ, ವಿನಾಯಕನಗರ, ಸಿದ್ದಪ್ಪ ಬಡಾವಣೆ, ಮಂಜುನಾಥ ಬಡಾವಣೆ, ಕೃಷ್ಣನಗರ, ಅಯ್ಯಪ್ಪನಗರ, ಪ್ರಿಯಾಂಕ ನಗರ, ಕಾವೇರಿ ಬಡಾವಣೆ, ಕೊಡಿಗೆಹಳ್ಳಿ, ಆಲ್ಫಾ ಗಾರ್ಡನ್ಸ್‌, ದೊಮ್ಮಸಂದ್ರ, ಸಾದರಮಂಗಳ, ಹೂಡಿ ಸೇರಿ ಹಲವು ಭಾಗಗಳಿಗೆ ದೇವಸಂದ್ರ ಮುಖ್ಯರಸ್ತೆ ಪ್ರಮುಖ ಸಂಚಾರ ಕೊಂಡಿಯಾಗಿದೆ. ಆದರೆ, ಪರ್ಯಾಯ ರಸ್ತೆಗಳನ್ನು ಕಲ್ಪಿಸದೆ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ಒಂದೆರಡು ಕಿ.ಮೀ ಕ್ರಮಿಸಲು ಕನಿಷ್ಠ 30-40 ನಿಮಿಷ ತಗುಲುತ್ತಿದೆ.

ಬಡಾವಣೆ ರಸ್ತೆಗಳು ಜಾಮ್‌: ದೇವಸಂದ್ರ ಮುಖ್ಯರಸ್ತೆಯ ಅಕ್ಕಪಕ್ಕದ ಬಡಾವಣೆ ರಸ್ತೆಗಳು ಕಿರಿದಾಗಿದ್ದು, ದ್ವಿಮುಖವಾಗಿ ವಾಹನಗಳು ಸಂಚರಿಸುತ್ತಿರುವ ಕಾರಣ ತೀವ್ರ ದಟ್ಟಣೆ ಉಂಟಾಗುತ್ತಿದೆ. ಒಂದೇ ಸಮಯಕ್ಕೆ ಎರಡು ಕಡೆಗಳಿಂದ ಕಾರುಗಳು ಬಂದರೆ ದಟ್ಟಣೆ ನಿವಾರಿಸಲು ಕನಿಷ್ಠ 20-30 ನಿಮಿಷ ಬೇಕಾಗುತ್ತಿದ್ದು, ಕೆಲವೊಮ್ಮೆ ವಾಹನ ಸವಾರರು ಜಗಳಕ್ಕಿಳಿಯುವ ಘಟನೆಗಳೂ ನಡೆಯುತ್ತಿವೆ. 

Advertisement

ಬಡಾವಣೆಯ ಒಳ ರಸ್ತೆಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ವಾಹನಗಳು ಸಂಚರಿಸುತ್ತಿರುವುದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ವಾಹನಗಳು ವೇಗವಾಗಿ ಸಂಚರಿಸುತ್ತಿರುವುದರಿಂದ ರಸ್ತೆಗಳಿಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾನವಾಗಿದೆ. ಇದರೊಂದಿಗೆ ಸಂಚಾರ ದಟ್ಟಣೆ ವೇಳೆ ಜೋರಾಗಿ ಕೇಳಿಬರುವ ಹಾರ್ನ್ ಶಬ್ದ ನಿವಾಸಿಗಳನ್ನು ಕಂಗೆಡಿಸಿದೆ.

ಆಟೋ ದರ ಹೆಚ್ಚಳ: ಪಾಲಿಕೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಕೆ.ಆರ್‌.ಪುರದಿಂದ ಅಯ್ಯಪ್ಪನಗರಕ್ಕೆ ಹೋರಲು ಆಟೋ ಚಾಲಕರು ತಲಾ 10 ರೂ. ಪಡೆಯುತ್ತಿದ್ದರು. ಇದೀಗ ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣವಾಗಿ ಅಗೆದ ಪರಿಣಾಮ ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಆಟೋ ಚಾಲಕರು, ಪ್ರಯಾಣಿಕರಿಂದ ತಲಾ 15 ರೂ. ಪಡೆಯುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ, ಈ ಹಿಂದೆ ಹೆಚ್ಚು ದಟ್ಟಣೆ ಉಂಟಾಗುತ್ತಿರಲಿಲ್ಲ. ಇದೀಗ 30-40 ನಿಮಿಷ ದಟ್ಟಣೆಯಲ್ಲೇ ಪರಿಣಾಮ ಅನಿವಾರ್ಯವಾಗಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎನ್ನುತ್ತಾರೆ.

ಹತ್ತು ದಿನಗಳಲ್ಲಿ ಕಾಮಗಾರಿ ಪೂರ್ಣ: 30 ವರ್ಷಗಳಿಂದಲೂ ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ತೀವ್ರ ಸಮಸ್ಯೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಹತ್ತು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಾಹನ ದಟ್ಟಣೆ ಹೆಚ್ಚಾಗದಂತೆ ಹಾಗೂ ಪರ್ಯಾಯ ರಸ್ತೆಗಳ ಕುರಿತ ಮಾಹಿತಿ ಫ‌ಲಕಗಳನ್ನು ಅಳವಡಿಸಲಾಗುವುದು ಎಂದು ದೇವಸಂದ್ರ ವಾರ್ಡ್‌ ಪಾಲಿಕೆ ಸದಸ್ಯ ಶ್ರೀಕಾಂತ್‌ ತಿಳಿಸಿದ್ದಾರೆ.

ಏಕಾಏಕಿ ರಸ್ತೆ ಬಂದ್‌ ಮಾಡಿ ಕಾಮಗಾರಿ ಆರಂಭಿಸಿದ್ದು, ಬಡಾವಣೆಗಳ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸದ ಸಂಚಾರ ಪೊಲೀಸರು, ದಟ್ಟಣೆ ನಿವಾರಣೆಗೂ ಮುಂದಾಗುತ್ತಿಲ್ಲ.
-ಮಹದೇವ ರೆಡ್ಡಿ, ದೇವಸಂದ್ರ ನಿವಾಸಿ

ಮುಖ್ಯರಸ್ತೆ ಬಂದ್‌ ಮಾಡಿದ ಪರಿಣಾಮ ವಾಹನಗಳು ಬಡಾವಣೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ರಸ್ತೆಗಳು ದಟ್ಟಣೆಯಿಂದ ಕೂಡಿರುತ್ತವೆ. ಜತೆಗೆ ವಾಹನಗಳ ಹರ್ನ್ ಕಿರಿಕಿರಿ ಉಂಟು ಮಾಡುತ್ತಿದ್ದು, ಮನೆಯಲ್ಲಿರುವುದು ಕಷ್ಟವಾಗುತ್ತಿದೆ.
-ಪಾವರ್ತಿ, ವಿನಾಯಕ ನಗರ ನಿವಾಸಿ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next