Advertisement

ಬಾಂಗ್ಲಾದಿಂದಲೂ ಬ್ಯಾಟಿಂಗ್‌ ಹೋರಾಟ

03:45 AM Feb 12, 2017 | Team Udayavani |

ಹೈದರಾಬಾದ್‌: ಮಧ್ಯಮ ಕ್ರಮಾಂಕದ ಆಟಗಾರರ ಬ್ಯಾಟಿಂಗ್‌ ಸಾಹಸದಿಂದ ಪ್ರವಾಸಿ ಬಾಂಗ್ಲಾದೇಶ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಹೋರಾಟ ವೊಂದನ್ನು ಜಾರಿಯಲ್ಲಿರಿಸಿದೆ. ಭಾರತದ 687ಕ್ಕೆ ಉತ್ತರ ವಾಗಿ 6 ವಿಕೆಟ್‌ ಕಳೆದುಕೊಂಡು 322 ರನ್‌ ಗಳಿಸಿದೆ. 

Advertisement

ಬಾಂಗ್ಲಾದ ಈ ಚೇತೋಹಾರಿ ಬ್ಯಾಟಿಂಗ್‌ ಪ್ರದರ್ಶನ ದೊಂದಿಗೆ ಮೂರನೇ ದಿನವೂ ಹೈದರಾಬಾದ್‌ ಟ್ರ್ಯಾಕ್‌ ಬೌಲಿಂಗಿಗೆ ತೆರೆದುಕೊಳ್ಳದೆ ಬ್ಯಾಟ್ಸ್‌ಮನ್‌ ಪರವೇ ವಹಿಸಿದಂತಾಯಿತು. ಈ 3 ದಿನಗಳಲ್ಲಿ ಉರುಳಿದ್ದು ಕ್ರಮವಾಗಿ 3, 4 ಹಾಗೂ 5 ವಿಕೆಟ್‌ ಮಾತ್ರ. ಒಟ್ಟುಗೂಡಿದ್ದು ಬರೋಬ್ಬರಿ 1,009 ರನ್‌! ಬಾಂಗ್ಲಾದ 6ಕ್ಕೆ 322 ರನ್‌ ಎನ್ನುವುದು ಉತ್ತಮ ಸ್ಕೋರೇ ಆಗಿದೆ. ಆದರೆ ಭಾರತದ ಬೃಹತ್‌ ಮೊತ್ತಕ್ಕೆ ಹೋಲಿಸಿದರೆ ತೀರಾ ಸಣ್ಣದಾಗಿ ಕಾಣುವುದು ಸಹಜ. ರಹೀಂ ಬಳಗವಿನ್ನೂ 365 ರನ್ನುಗಳ ಹಿನ್ನಡೆಯಲ್ಲಿದೆ. ಫಾಲೋಆನ್‌ ಗಡಿ 487 ರನ್‌. ಬಾಂಗ್ಲಾ ಇನ್ನೂ ಅರ್ಧ ಹಾದಿಯನ್ನೂ ಕ್ರಮಿಸಿಲ್ಲ. ಪಂದ್ಯ ಭಾರತದ ಹಿಡಿತದಲ್ಲೇ ಇದೆಯಾದರೂ ರವಿವಾರದ ಮೊದಲ ಅವಧಿಯ ಆಟ ನಿರ್ಣಾಯಕ. ಉಳಿದ 4 ವಿಕೆಟ್‌ಗಳನ್ನು ಬೇಗನೇ ಕಿತ್ತು, ಫಾಲೋಆನ್‌ ವಿಧಿಸುವ ಅಥವಾ ತಾನೇ ದ್ವಿತೀಯ ಇನ್ನಿಂಗ್ಸ್‌ ಆರಂಭಿಸುವ ಮೂಲಕ ಕೊಹ್ಲಿ ಪಡೆ ಬಾಂಗ್ಲಾಕ್ಕೆ ಸವಾಲೊಡ್ಡಬೇಕಿದೆ. 

ಅಂದಹಾಗೆ ಭಾರತದೆದುರು ಬಾಂಗ್ಲಾದ ಈವರೆಗಿನ ಗರಿಷ್ಠ ಸ್ಕೋರ್‌ 400 ರನ್‌. ಇದನ್ನು 2000ದ ಢಾಕಾ ಟೆಸ್ಟ್‌ ನಲ್ಲಿ ದಾಖಲಿಸಿತ್ತು. ಆದರೂ ಸೋತಿತ್ತು. ಒಂದಕ್ಕೆ 41 ರನ್‌ ಮಾಡಿದಲ್ಲಿಂದ ಬಾಂಗ್ಲಾ 3ನೇ ದಿನದಾಟ ಮುಂದುವರಿಸಿತ್ತು. ಮೊದಲ ಅವಧಿಯಲ್ಲಿ ಭಾರತದ ಬೌಲರ್‌ಗಳ ದಾಳಿ ನಿಖರವಾಗಿತ್ತು. ಲಂಚ್‌ ಒಳ ಗಾಗಿ ಪ್ರವಾಸಿಗರ 3 ವಿಕೆಟ್‌ ಉರುಳಿತ್ತು. 4ಕ್ಕೆ 109 ರನ್‌ ಮಾಡಿದ್ದ ಬಾಂಗ್ಲಾ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿತ್ತು. ಆದರೆ ಲಂಚ್‌ ಬಳಿಕ ಚೇತರಿಕೆಯ ಆಟವಾಡಿತು. ಭಾರತಕ್ಕೆ ದ್ವಿತೀಯ ಅವಧಿಯಲ್ಲಿ ಸಿಕ್ಕಿದ್ದು 2 ವಿಕೆಟ್‌ ಮಾತ್ರ. ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌, ನಾಯಕ ಮುಶ್ಫಿಕರ್‌ ರಹೀಂ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದರು. ಟೀ ವಿರಾಮದ ವೇಳೆ ಸ್ಕೋರ್‌ 6ಕ್ಕೆ 246 ರನ್‌ ಆಗಿತ್ತು. ಆದರೂ ಟೀಮ್‌ ಇಂಡಿಯಾ ಸ್ಪಷ್ಟ ಹಿಡಿತ ಸಾಧಿಸಿತ್ತು.

ಮಿಸುಕದ ರಹೀಂ-ಮಿರಾಜ್‌
ಅಂತಿಮ ಅವಧಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡ ರಹೀಂ- ಮಿರಾಜ್‌ ಮಿಸುಕಾಡಲಿಲ್ಲ. ಭಾರತದ ದಾಳಿ ಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಮುರಿಯದ 7ನೇ ವಿಕೆಟಿಗೆ 87 ರನ್‌ ಒಟ್ಟುಗೂಡಿಸಿದ್ದಾರೆ. ಅಂತಿಮ ಅವಧಿಯನ್ನು ತೀರಾ ಎಚ್ಚರಿಕೆ ಹಾಗೂ ನಿಧಾನ ಗತಿಯಿಂದ ನಿಭಾಯಿಸಿದ ರಹೀಂ-ಮಿರಾಜ್‌ 30 ಓವರ್‌ಗಳಲ್ಲಿ ಗಳಿಸಿದ್ದು 76 ರನ್‌ ಮಾತ್ರ. 206 ಎಸೆತ ಎದುರಿಸಿರುವ ರಹೀಂ 12 ಬೌಂಡರಿಗಳ ನೆರವಿನಿಂದ 81 ರನ್‌ ಗಳಿಸಿದ್ದಾರೆ. ಆಲೌರೌಂಡರ್‌ ಪಾತ್ರವನ್ನು ಚೊಕ್ಕ ರೀತಿಯಲ್ಲಿ ನಿಭಾಯಿಸುತ್ತಿರುವ ಮಿರಾಜ್‌ 51 ರನ್‌ ಮಾಡಿ ಆಡುತ್ತಿದ್ದಾರೆ (103 ಎಸೆತ, 10 ಬೌಂಡರಿ). 5ನೇ ಟೆಸ್ಟ್‌ ಆಡುತ್ತಿರುವ ಮಿರಾಜ್‌ ಪಾಲಿಗೆ ಇದು ಮೊದಲ ಅರ್ಧ ಶತಕ ಸಂಭ್ರಮ.

ತಂಡದ ಸೀನಿಯರ್‌ ಆಟಗಾರ, ಸವ್ಯಸಾಚಿ ಶಕಿಬ್‌ ಅಲ್‌ ಹಸನ್‌ ಬಿರುಸಿನ ಆಟಕ್ಕಿಳಿದು 103 ಎಸೆತಗಳಿಂದ 82 ರನ್‌ ಸಿಡಿಸಿದರು. ಚೆಂಡು 14 ಸಲ ಬೌಂಡರಿ ಗೆರೆ ದಾಟಿತು. ಇದು ಶಕಿಬ್‌ ಅವರ 21ನೇ ಅರ್ಧ ಶತಕ, ಭಾರತದೆದುರು ಮೊದಲನೆಯದು. ಶಕಿಬ್‌-ರಹೀಂ 5ನೇ ವಿಕೆಟಿಗೆ 107 ರನ್‌ ಒಟ್ಟುಗೂಡಿಸುವ ಮೂಲಕ ತಂಡಕ್ಕೆ ರಕ್ಷಣೆ ಒದಗಿಸಿದರು. 

Advertisement

ಅಗ್ರ ಸರದಿಯ ಕುಸಿತ
ಅಪಾಯಕಾರಿ ಎಡಗೈ ಆರಂಭಕಾರ ತಮಿಮ್‌ ಇಕ್ಬಾಲ್‌ ರನೌಟ್‌ ಆಗುವುದರೊಂದಿಗೆ ಬಾಂಗ್ಲಾ ಕುಸಿತಕ್ಕೆ ಚಾಲನೆ ಲಭಿಸಿತು. ತಮಿಮ್‌ ದ್ವಿತೀಯ ದಿನದ ಮೊತ್ತಕ್ಕೆ ಒಂದೂ ರನ್‌ ಸೇರಿಸದೆ ನಿರ್ಗಮಿಸಿದರು (24). ಆಗ ಬಾಂಗ್ಲಾ ತನ್ನ ಮೊತ್ತಕ್ಕೆ 3 ರನ್‌ ಸೇರಿತ್ತಷ್ಟೆ. ಮತ್ತೆ 20 ರನ್‌ ಒಟ್ಟುಗೂಡುವಷ್ಟರಲ್ಲಿ ಮತ್ತೂಬ್ಬ ನಾಟೌಟ್‌ ಬ್ಯಾಟ್ಸ್‌ ಮನ್‌ ಮೊಮಿನುಲ್‌ ಹಕ್‌ (12) ನಿರ್ಗಮಿಸಿದರು. ಸ್ಕೋರ್‌ 109ಕ್ಕೆ ಏರಿದಾಗ ಮಹಮದುಲ್ಲ (28) ಔಟಾದರು. ಇವರಿಬ್ಬರನ್ನು ಯಾದವ್‌ ಮತ್ತು ಇಶಾಂತ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.

ಶಕಿಬ್‌ ಮತ್ತು ಶಬ್ಬೀರ್‌ (16) ವಿಕೆಟ್‌ ಸ್ಪಿನ್ನರ್‌ಗಳಾದ ಅಶ್ವಿ‌ನ್‌, ಜಡೇಜ ಪಾಲಾಯಿತು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
6 ವಿಕೆಟಿಗೆ ಡಿಕ್ಲೇರ್‌        687
ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್‌
ತಮಿಮ್‌ ಇಕ್ಬಾಲ್‌    ರನೌಟ್‌    24
ಸೌಮ್ಯ ಸರ್ಕಾರ್‌    ಸಿ ಸಾಹಾ ಬಿ ಯಾದವ್‌    15
ಮೊಮಿನುಲ್‌ ಹಕ್‌    ಎಲ್‌ಬಿಡಬ್ಲ್ಯು ಯಾದವ್‌    12
ಮಹಮದುಲ್ಲ    ಎಲ್‌ಬಿಡಬ್ಲ್ಯು ಇಶಾಂತ್‌    28
ಶಕಿಬ್‌ ಅಲ್‌ ಹಸನ್‌    ಸಿ ಯಾದವ್‌ ಬಿ ಅಶ್ವಿ‌ನ್‌    82
ಮುಶ್ಫಿಕರ್‌ ರಹೀಂ    ಬ್ಯಾಟಿಂಗ್‌    81
ಶಬ್ಬೀರ್‌ ರೆಹಮಾನ್‌    ಎಲ್‌ಬಿಡಬ್ಲ್ಯು ಜಡೇಜ    16
ಮೆಹೆದಿ ಹಸನ್‌    ಬ್ಯಾಟಿಂಗ್‌    51

ಇತರ        13
ಒಟ್ಟು  (6 ವಿಕೆಟಿಗೆ)        322
ವಿಕೆಟ್‌ ಪತನ: 1-38, 2-44, 3-64, 4-109, 5-216, 6-235.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    17-6-46-0
ಇಶಾಂತ್‌ ಶರ್ಮ        16-5-54-1
ಆರ್‌. ಅಶ್ವಿ‌ನ್‌        24-6-77-1
ಉಮೇಶ್‌ ಯಾದವ್‌        18-3-72-2
ರವೀಂದ್ರ ಜಡೇಜ        29-8-60-1

ಎಕ್ಸ್‌ಟ್ರಾ ಇನ್ನಿಂಗ್ಸ್‌
ಬಾಂಗ್ಲಾದೇಶ 2ನೇ ಸಲ ಭಾರತದ ವಿರುದ್ಧ 100 ಓವರ್‌ ಬ್ಯಾಟಿಂಗ್‌ ನಡೆಸಿತು. ಮೊದಲ ಸಲ ಈ ಗಡಿ ದಾಟಿದ್ದು 2000ದ ಢಾಕಾ ಪಂದ್ಯದಲ್ಲಿ (153.3 ಓವರ್‌, 400 ರನ್‌). ಅದು ಬಾಂಗ್ಲಾದ ಪ್ರಪ್ರಥಮ ಟೆಸ್ಟ್‌ ಆಗಿತ್ತು.

ಮುಶ್ಫಿಕರ್‌ ರಹೀಂ 3 ಸಾವಿರ ರನ್‌ ಪೂರ್ತಿಗೊಳಿಸಿದ ಬಾಂಗ್ಲಾದ 4ನೇ ಬ್ಯಾಟ್ಸ್‌ಮನ್‌ ಎನಿಸಿದರು (3,003 ರನ್‌). ಉಳಿದವರೆಂದರೆ ತಮಿಮ್‌ ಇಕ್ಬಾಲ್‌ (3,467), ಶಕಿಬ್‌ ಅಲ್‌ ಹಸನ್‌ (3,295) ಮತ್ತು ಹಬಿಬುಲ್‌ ಬಶರ್‌ (3,026). 

ಶಕಿಬ್‌ ಅಲ್‌ ಹಸನ್‌ ಭಾರತದ ವಿರುದ್ಧ ಮೊದಲ ಅರ್ಧ ಶತಕ ಹೊಡೆದರು. ಭಾರತದೆದುರು ಅವರ ಹಿಂದಿನ ಗರಿಷ್ಠ ಗಳಿಕೆ 34 ರನ್‌ ಆಗಿತ್ತು.

ಶಕಿಬ್‌-ರಹೀಂ ಈ ವರ್ಷದ ತಮ್ಮ 2 ಜತೆಯಾಟಗಳಲ್ಲಿ ಒಟ್ಟು 466 ರನ್‌ ಪೇರಿಸಿದರು. ನ್ಯೂಜಿಲ್ಯಾಂಡ್‌ ಎದುರಿನ ವೆಲ್ಲಿಂಗ್ಟನ್‌ ಟೆಸ್ಟ್‌ನಲ್ಲಿ ಇವರು 359 ರನ್‌ ಜತೆಯಾಟ ನಿಭಾಯಿಸಿದ್ದರು.

ಮೆಹೆದಿ ಹಸನ್‌ ಮೊದಲ ಅರ್ಧ ಶತಕ ಹೊಡೆದರು. ಹಿಂದಿನ 8 ಇನ್ನಿಂಗ್ಸ್‌ಗಳಲ್ಲಿ ಇವರು ಗಳಿಸಿದ ಒಟ್ಟು ರನ್‌ 20 ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next