ರಾಯಚೂರು: ಸುಕ್ಷೇತ್ರ ಶ್ರೀಶೈಲದಲ್ಲಿ ಆಂಧ್ರ ಸರ್ಕಾರದಿಂದ ಕರ್ನಾಟಕ ಭಕ್ತರಿಗಾಗಿ ಮಂಜೂರು ಮಾಡಿದ್ದ ಸ್ಥಳವನ್ನು ಈಗ ಆಂಧ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಖಂಡಿಸಿ ನ.20ರಂದು ಶ್ರೀಶೈಲದ ಕರ್ನಾಟಕ ಛತ್ರದ ಎದುರು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಭ್ರಮ ರಾಂಬ ಮಲ್ಲಿಕಾರ್ಜುನ ಕುಂದುಕೊರತೆಗಳ ಹೋರಾಟ ಸಮಿತಿ ಅಧ್ಯಕ್ಷ ವೀರನಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಿಂದ ಪ್ರತಿ ವರ್ಷ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ಶ್ರೀಶೈಲಕ್ಕೆ ಹೋಗುತ್ತಾರೆ. ಸರಿಸುಮಾರು ರಾಜ್ಯದಿಂದ 150 ಕೋಟಿ ರೂ.ಗಿಂತ ಅಧಿಕ ಆದಾಯ ಆಂಧ್ರಕ್ಕೆ ಹೋಗುತ್ತಿದೆ. ಆದರೆ, ಅಲ್ಲಿ ರಾಜ್ಯದ ಭಕ್ತರಿಗೆ ಸೂಕ್ತ ಸೌಲಭ್ಯಗಳೇ ಇಲ್ಲ. ಈಗ ನೋಡಿದರೆ ಹಿಂದೆ ಆಂಧ್ರ ಸರ್ಕಾರ ನೀಡಿದ್ದ ಸ್ಥಳದಲ್ಲೇ ಅಕ್ರಮವಾಗಿ ಕಟ್ಟಡ ನಿರ್ಮಿ ಸುತ್ತಿದ್ದು, ಅದನ್ನು ಪ್ರಶ್ನಿಸುವವರೇ ಇಲ್ಲದಾಗಿದೆ.
ಪ್ರತಿವರ್ಷ ಶ್ರೀಶೈಲಕ್ಕೆ ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆ ಹೋಗುವವರ ಸಂಖ್ಯೆಯೇ 7 ಲಕ್ಷಕ್ಕಿಂತ ಹೆಚ್ಚಾಗಿದೆ. ಆದರೆ, ಅವರಿಗೆ ಸೂಕ್ತ ಆಹಾರ, ನೀರು, ಔಷಧಗಳು ಸಿಗದ ಪರಿಸ್ಥಿತಿ ಇದೆ. ಪ್ರಮುಖವಾಗಿ ಸೊಲ್ಲಾಪುರ ಮಾರ್ಗವಾಗಿ ಶ್ರೀ ಶೈಲಕ್ಕೆ ಹೆಚ್ಚು ಭಕ್ತರು ತೆರಳುತ್ತಾರೆ. ಆದರೆ, ವೆಂಕಟಾಪುರ ಮಾರ್ಗವನ್ನು ಬಂದ್ ಮಾಡಲು ಆಂಧ್ರ ಸರ್ಕಾರ ಮುಂದಾಗಿದೆ. ಇದರಿಂದ ಭಕ್ತರಿಗೆ ಸಾಕಷ್ಟು ತೊಂದರೆ ಆಗುತ್ತದೆ.
ನಾಗಾಲೋಟಿಯಿಂದ 37 ಕಿ.ಮೀ.ಹಾದಿ ದುರ್ಗಮವಾಗಿದ್ದು, ಅಲ್ಲಿ ಏನೂ ಸಿಗುವುದಿಲ್ಲ ಎಂದು ವಿಷಾದಿಸಿದರು. ಸ್ಥಳ ಅತಿಕ್ರಮಣ ಕುರಿತು ಈಗಾಗಲೇ ಉಭಯ ಸರ್ಕಾರಗಳ ಗಮನಕ್ಕೆ ತಂದು, ಅತಿಕ್ರಮಣ ತೆರವಿಗೆ ಒತ್ತಾಯ ಮಾಡಲಾಗಿದೆ. ಅಲ್ಲಿನ ಸ್ಥಳೀಯ ಶಾಸಕರಿಗೂ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಆದರೆ, ನಮ್ಮ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿರುವುದು ವಿಪರ್ಯಾಸ ಎಂದರು.
ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ ಮೇಲೆಯೇ ಈ ಸ್ಥಳವನ್ನು ನೀಡಿದ್ದಾರೆ. ಆದರೆ, ಈಗ ಸಂಪುಟದ ತೀರ್ಮಾನ ಪಡೆಯದೆ ಅಲ್ಲಿನ ಸರ್ಕಾರ ಸ್ಥಳ ಬಳಕೆಗೆ ಮುಂದಾಗಿರುವುದು ಖಂಡನೀಯ. ಈ ಕೂಡಲೇ ಸ್ಥಳದಲ್ಲಿ ಕೈಗೊಂಡ ಕಾಮಗಾರಿ ಸ್ಥಗಿತಗೊಳಿಸಿ, ರಾಜ್ಯದ ಭಕ್ತರಿಗೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ತಿಳಿಸಿದರು.
ಆಂಧ್ರ ಸರ್ಕಾರ ಕರ್ನಾಟಕದ ಭಕ್ತರಿಗಾಗಿ ಸುಮಾರು 4.16 ಎಕರೆ ಭೂಮಿಯನ್ನು 1969ರಲ್ಲಿ ಮಂಜೂರು ಮಾಡಿದೆ. ಅದನ್ನು ದೀರ್ಘಾವಧಿ ಗೆ ಲೀಜ್ ಮಾಡಿಕೊಳ್ಳಲಾಗಿದೆ. ಆ ಸ್ಥಳದ ಎರಡೂ ಬದಿ ಸುಮಾರು 100×300 ಸ್ಥಳವಿದ್ದು, ಎಡ ಭಾಗದಲ್ಲಿ ಆಂಧ್ರ ಸರ್ಕಾರ ಯಾವುದೇ ಅನುಮತಿ ಪಡೆಯದೆ ಭವನ ನಿರ್ಮಿಸುತ್ತಿದೆ. ಇದನ್ನು ಪ್ರಶ್ನಿಸಬೇಕಾದ ಅಲ್ಲಿನ ವ್ಯವಸ್ಥಾಪಕ ಮೌನಕ್ಕೆ ಶರಣಾಗಿದ್ದಾರೆ.
-ವೀರನಗೌಡ, ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಕುಂದುಕೊರತೆಗಳ ಹೋರಾಟ ಸಮಿತಿ ಅಧ್ಯಕ್ಷ