Advertisement

ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸದಿದ್ದರೆ ಹೋರಾಟ: ಡಿಕೆಶಿ

02:31 AM May 03, 2020 | Sriram |

ಬೆಂಗಳೂರು: ಸರಕಾರದ ವತಿಯಿಂದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡಲು ಮೀಸಲಿಟ್ಟ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಿಜೆಪಿ ನಾಯಕರು ತಮ್ಮ ಹೆಸರಿನ ಪ್ಯಾಕೆಟ್‌ನಲ್ಲಿ ಹಾಕಿಕೊಂಡು ಹಂಚಿಕೆ ಮಾಡುತ್ತಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳದೆ ಹೋದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಸರಕಾರದ ನೀಡಲಾದ ಆಹಾರ ಪದಾರ್ಥಗಳನ್ನು ಬಿಜೆಪಿ ನಾಯಕ ಲಿಂಬಾವಳಿ ಅವರು ತಮ್ಮ ಕ್ಷೇತ್ರದಲ್ಲಿ ಅವರ ಫೋಟೋ ಜತೆಗೆ ಮುಖ್ಯಮಂತ್ರಿ ಮತ್ತು ಪ್ರಧಾನಿ ಮೋದಿ ಅವರ ಫೋಟೋ ಹಾಕಿ ಹಂಚಿಕೆ ಮಾಡಿದ್ದರು.

ಕಳೆದ ವಾರ ಅಕ್ರಮವಾಗಿ ಬಡವರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುತ್ತಿದ್ದುದನ್ನು ಬಯಲು ಮಾಡಿದ ಬಳಿಕ ಸರಕಾರ ಅದನ್ನು ಮುಚ್ಚಿಹಾಕಲು ಸಾಕಷ್ಟು ಪ್ರಯತ್ನ ನಡೆಸಿತು. ಯಾವ ಜಿಲ್ಲೆಯಿಂದ ಎಷ್ಟು ಅಕ್ಕಿ ಜನರಿಗೆ ಹೋಗುತ್ತಿದೆ. ಎಷ್ಟು ಅಕ್ಕಿ ಬಿಜೆಪಿ ನಾಯಕರ ಪಾಲಾಗುತ್ತಿದೆ ಎಂಬುದು ನಮಗೆ ಗೊತ್ತಿದೆ. ಲಿಂಬಾವಳಿ ಅವರ ಪ್ರಕರಣದ ಬಗ್ಗೆ ಈವರೆಗೂ ಒಂದು ಕೇಸ್‌ ಕೂಡ ದಾಖಲಾಗಿಲ್ಲ. ಒಬ್ಬರನ್ನೂ ಬಂಧಿಸಿಲ್ಲ. ಮುಖ್ಯಮಂತ್ರಿಗಳೇ ಈ ಅಕ್ರಮ ಮಾಡುತ್ತಿದ್ದಾರೆ ಎಂದು ಹೇಳುತ್ತಿಲ್ಲ. ಯಡಿಯೂರಪ್ಪ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಹೇಗೆ ಬಡವರ ಅಕ್ಕಿ, ದುಡ್ಡು ದುರುಪಯೋಗವಾಗುತ್ತಿದೆ ಎಂಬುದನ್ನು ತಿಳಿಸುತ್ತಿದ್ದೇನೆ ಎಂದರು.

ಮಕ್ಕಳು, ಬಾಣಂತಿಯರು, ಬಡವರ ಆಹಾರದಲ್ಲಿ ನೀವು ರಾಜಕಾರಣ ಮಾಡಬೇಕಾ? ಇಡೀ ರಾಜ್ಯ ಮತ್ತು ದೇಶದಲ್ಲಿ ಎಲ್ಲ ವರ್ಗದ ಜನ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡುತ್ತಿದ್ದಾರೆ. ಹಸಿದವರಿಗೆ, ಬಡವರಿಗೆ ಊಟ ಹಾಕುತ್ತಿದ್ದಾರೆ. ಅನೇಕ ಎನ್‌ಜಿಒ, ಸಂಘ ಸಂಸ್ಥೆಗಳು ಬಡವರ ನೆರವಿಗೆ ಧಾವಿಸಿದ್ದಾರೆ. ಎಂಜಿನಿಯರ್‌, ಡಾಕ್ಟರ್‌, ಚಾರ್ಟೆಡ್‌ ಅಕೌಂಟೆಂಟ್ಸ್‌ ಎಲ್ಲರೂ ಕೂಡ ತಮ್ಮ ಸಹಾಯ ಮಾಡುತ್ತಿದ್ದಾರೆ. ಆದರೆ ಅಧಿಕಾರದಲ್ಲಿರುವವರು ಮಾಡುತ್ತಿರುವುದೇನು? ನಿಮಗ್ಯಾಕೆ ಇಂತಾ ನೀಚ ಬುದ್ಧಿ? ನಿಮಗೆಷ್ಟು ಬೇಕು ಹೇಳಿ, ಭಿಕ್ಷೆ ಎತ್ತಿಯಾದರೂ ಸರಿ ಕೊಡುತ್ತೇವೆ ಎಂದರು.

ಸರಕಾರಕ್ಕೆ ನಾಚಿಕೆಯಾಗಬೇಕು
ಶುಕ್ರವಾರ ಕಾಂಗ್ರೆಸ್‌ ಸಂಸದರು, ವಕ್ತಾರರು, ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ಮಕ್ಕಳು, ಗರ್ಭಿಣಿಯರಿಗೆ ಕೊಡುವ ಸಕ್ಕರೆ, ಬೇಳೆಗಳನ್ನು ಬಿಜೆಪಿ ನಾಯಕರ ಹೆಸರಲ್ಲಿ ರೀಪ್ಯಾಕ್‌ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದು ಒಂದು ಸರಕಾರವಾ? ಕಾಂಗ್ರೆಸ್‌ ಶಾಸಕ, ಸಂಸದರಿರುವ ಕ್ಷೇತ್ರದಲ್ಲಿ ಹೀಗೆ ಆಗುತ್ತಿದೆ ಎಂದರೆ ಇನ್ನು ರಾಜ್ಯದ ಬೇರೆ ಭಾಗಗಳಲ್ಲಿ ಏನಾಗುತ್ತಿರಬಹುದು. ಭಾಗಿಯಾದವರನ್ನು ಬಂಧಿಸಲು ನಿಮ್ಮಿಂದ ಸಾಧ್ಯವಾಗಿಲ್ಲವಲ್ಲ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next