ಬೆಂಗಳೂರು: ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ವತಿಯಿಂದಲೂ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಬುಧವಾರ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ನಂತರ ಮಾತನಾಡಿ, ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತ ಆಗಿದ್ದರೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದಿರುವುದು ಸರಿಯಲ್ಲ.
ಜೆಡಿಎಸ್‌ನಿಂದ ಹೋರಾಟ ಮಾಡುತ್ತೇವೆ. ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಪರಿಹಾರ ಬಿಡುಗಡೆ ವಿಚಾರದಲ್ಲಿ ನಮ್ಮ ಪಕ್ಷದ ವತಿಯಿಂದಲೂ ಪ್ರಧಾನಿ ಮೋದಿ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು. ಅದರ ಮೇಲೂ ಪರಿಹಾರ ಬಾರದೇ ಹೋದರೆ ಹೋರಾಟ ಮಾಡುತ್ತೇವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಯಾವ ರೀತಿಯ ಹೋರಾಟ ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದ ಮುಖಂಡರ ಜತೆ ಚರ್ಚಿಸಿ ನಿರ್ಧಾರ ಮಾಡಲಾ ಗುವುದು ಎಂದರು. ಪಕ್ಷದ ಕಚೇರಿಯಲ್ಲಿ ಬುಧವಾರ ರಾಯಚೂರು, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮುಖಂಡರ ಜತೆ ದೇವೇಗೌಡರು ಸಮಾಲೋ ಚನೆ ನಡೆಸಿ, ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ಸೂಚನೆ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರ ಸ್ವಾಮಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
ನೈಸ್ ವಿರುದ್ಧ ಹೋರಾಟ ಮಾಡಿದವನು ನಾನು. ಹೋರಾಟವೇ ನನ್ನ ಜೀವನದ ಮಜಲು. ಯಾರಿಂದಲೂ ನಾನು ಹೋರಾಟ ಮಾಡೋ ದನ್ನು ಕಲಿಯಬೇಕಿಲ್ಲ. ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದರೆ ಸಂತೋಷ, ಮಾಡಲಿ. ನಾವೂ ಮಾಡುತ್ತೇವೆ.
-ದೇವೇಗೌಡ, ಮಾಜಿ ಪ್ರಧಾನಿ