ಕಕ್ಕೇರಾ: ಬೇಸಿಗೆ ಇನ್ನೂ ಬಂದಿಲ್ಲ. ಆಗಲೇ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಪ್ರತಿ ನಿತ್ಯ ಹನಿ ನೀರಿಗಾಗಿ ತಾಸುಗಟ್ಟಲೇ ಕಾಯ್ದು ಕುಳಿತರೂ ಒಂದು ಬಿಂದಿಗೆ ನೀರು ಮಾತ್ರ ಸಿಗುವುದು ಕಷ್ಟ.
ಇದು ತಿಂಥಣಿ ಗ್ರಾಪಂ ವ್ಯಾಪ್ತಿಗೆ ಸೇರಿದ ಹುಣಸಿಹೊಳೆ ಗ್ರಾಮದ ದಲಿತಕೇರಿ ನಿವಾಸಿಗಳು ತಮಗಾದ ನೀರಿನ ಸಮಸ್ಯೆ ತೋಡಿಕೊಂಡ ಪರಿ.
ಗ್ರಾಮದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳು ಅಳವಡಿಸಿದ್ದು, ಕೆಲವೊಂದು ಕಡೆ ನೀರು ಪೂರೈಕೆ ಆಗುತ್ತಿದೆ. ಆದರೆ 70ಕ್ಕೂ ಹೆಚ್ಚು ಕುಟುಂಬ ಇರುವ ದಲಿತಕೇರಿಗೆ ಅಳವಡಿಸಿದ ನಲ್ಲಿಗೆ ಮಾತ್ರ ನೀರೆ ಬರುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗರು ನಿತ್ಯ ನೀರಿಗಾಗಿ ಬಿಂದಿಗೆ ಹಿಡಿದುಕೊಂಡು ಪರದಾಡಬೇಕಾಗಿದೆ.
ಟ್ಯಾಂಕ್ ಮೂಲಕ ನಲ್ಲಿಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಮರ್ಪಕ ನೀರು ಸಿಗುತ್ತಿಲ್ಲ. ಈಗಾಗಲೇ ಬರಗಾಲ ಬೇರೆ. ಹಳ್ಳಗಳು ಬತ್ತಿವೆ. ಎಲ್ಲಿಯೂ ನೀರಿಲ್ಲ. ನಲ್ಲಿ ನೀರು ಬಿಟ್ಟರೆ ಬೇರೆ ನಮಗೆ ಗತಿ ಇಲ್ಲ ಎನ್ನುತ್ತಾರೆ ಜನರು.
ಈ ಸಮಸ್ಯೆಗೆ ಸಂಬಂಧಿಸಿದಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಜನರ ಆರೋಪವಾಗಿದೆ. ದಲಿತ ಕೇರೆ ಬಿಟ್ಟು ಇನ್ನೂ ಬೇರೆ ವಾರ್ಡ್, ಓಣಿಗಳಲ್ಲಿ ಕೆಲವೊಂದು ಮನೆಗಳಿಗೆ ವೈಯಕ್ತಿಕ ನಲ್ಲಿ ವ್ಯವಸ್ಥೆ ಕಲ್ಪಿಸಿ ನೀರಿನ ಕರ ಗ್ರಾಪಂವತಿಯಿಂದ ವಸೂಲಿ ಮಾಡಲಾಗುತ್ತಿದೆ. ಕೆಲವು ಅನಧಿಕೃತವಾಗಿ ಮನೆಗಳಿಗೆ ನಲ್ಲಿ ಅಳವಡಿಸಿಕೊಂಡಿದ್ದರಿಂದ ದಲಿತ ಕೇರಿಗೆ ನೀರಿನ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ನೀರಿನ ಸಮಸ್ಯೆ ನಿವಾರಣೆಗೆ ಸರಕಾರದಿಂದ ಸಾಕಷ್ಟು ಅನುದಾನ ಇದ್ದರೂ ನೀರಿನ ಸಮಸ್ಯೆ ಹೋಗಲಾಡಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನವಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ದಲಿತರ ಒತ್ತಾಯವಾಗಿದೆ.