ರಾಯಚೂರು: ಜನ ಕಾಂಗ್ರೆಸ್ ನವರಿಗೆ ಅಧಿಕಾರ ಕೊಟ್ಟಿದ್ದಾರೆ. ಒಬ್ಬರು ಸಿಎಂ, ಡಿಸಿಎಂ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಟ್ಟು ಡಿಸಿಎಂಗಾಗಿ ಈ ರೀತಿ ಕಚ್ಚಾಡುವುದು ಸರಿಯಲ್ಲ ಎಂದು ಎಂಎಲ್ ಸಿ ಎಚ್.ವಿಶ್ವನಾಥ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡಿಸಿಎಂ ಸಂವಿಧಾನ ಬದ್ದ ಹುದ್ದೆಯಲ್ಲ. ಸಚಿವರು ತಮ್ಮ ತಮ್ಮ ಕೆಲಸಗಳನ್ನು ಮಾಡಿ ಜನರ ನಂಬಿಕೆ ಉಳಿಸಿಕೊಳ್ಳಲಿ ಎಂದರು.
ನಾನು ಯಾವ ಪಕ್ಷದಲ್ಲೂ ಇಲ್ಲ. ನಾನು ಸ್ವತಂತ್ರ ವ್ಯಕ್ತಿ. ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದೇನೆ. ನಾನು ಪ್ರಗತಿಯ ಪರವಾಗಿರುವ ಪಕ್ಷದ ಜತೆಗಿರುತ್ತೇನೆ ಎಂದರು.
ಇದನ್ನೂ ಓದಿ:Road mishap: ರಸ್ತೆ ಅಪಘಾತದಲ್ಲಿ ಪತ್ರಿಕಾ ಪ್ರಸರಣ ವಿಭಾಗದ ಮ್ಯಾನೇಜರ್ ದುರ್ಮರಣ
ಕಾಂತರಾಜ್ ಸಮೀಕ್ಷಾ ವರದಿ ಜಾರಿಗೆ ಬರಬೇಕು. ಇದಕ್ಕೆ ಮುಂದುವರಿದು ಜಾತಿಗಳು ಅಡ್ಡಿಯಾಗಬಾರದು. ವಿರೋಧ ಮಾಡಲು ಜಾತಿಗಣತಿ ಯಾರು ನೋಡಿದ್ದಾರೆ? ಹಾವನೂರು ವರದಿ ಬಂದಾಗಲೂ ಇದೇ ರೀತಿ ವಿರೋಧವಾಗಿತ್ತು. ಆದರೆ ಅದು ಜಾರಿಯಾಯಿತು. ಕಾಂತರಾಜ್ ಸಮೀಕ್ಷೆಯನ್ಮು ಸಿಎಂ ಸ್ವೀಕರಿಸಿ ಜನರ ಬಳಿಗೆ ಒಯ್ಯಲಿ ಎಂದು ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆ. ಯಾರು ಸಮೀಕ್ಷೆ ನೋಡದೆ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ವಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮೀಕ್ಷೆ ನೋಡಿದ್ದರಾ? ಸುಮ್ಮನೆ ಯಾಕೆ ವಿರೋಧ ಮಾಡುತ್ತಿದ್ದಾರೆ. ಅಂದರೆ ಸಮೀಕ್ಷೆ ಸರಿ ಇಲ್ಲವೇ? ಅನಾವಶ್ಯಕವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಶ್ರೀರಾಮ ಇಡೀ ಭಾರತೀಯರ ರಾಮ. ಬಿಜೆಪಿಗೆ ಮಾತ್ರ ಸೀಮಿತವಲ್ಲ. ಶಂಕರಾಚಾರ್ಯರ ಶಿಷ್ಯಂದಿರೇ ಹೇಳುತ್ತಿದ್ದಾರೆ ,ಅದು ಪೂರ್ಣಗೊಳ್ಳದೆ ಉದ್ಘಾಟನೆ ಸರಿಯಲ್ಲ ಎಂದರು.