ಕಾರವಾರ: ಕಾಮಗಾರಿ ನಡೆಸದೇ ಇದ್ದರೂ 36 ಲಕ್ಷ ರೂ. ಹಣ ಪಾವತಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸದಸ್ಯ ಅಲ್ಬರ್ಟ್ ಡಿಕೋಸ್ಟಾ ಆರೋಪಿಸಿದ್ದು, ಸಭೆಯಲ್ಲಿ ಕೋಲಾಹಲ ಉಂಟಾದ ಘಟನೆ ಶುಕ್ರವಾರ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸದಸ್ಯ ಅಲ್ಬರ್ಟ ಡಿಕೋಸ್ಟಾ ಅವರು ಈ ಅವ್ಯವಹಾರದ ಬಗ್ಗೆ ಗಮನ ಸೆಳೆದಿದ್ದು, ಹೊನ್ನಾವರ ತಾಲೂಕಿನಲ್ಲಿ ಏಳು ಕಾಮಗಾರಿಗಳನ್ನು ಮುಗಿಸದೇ ಬಿಲ್ ಮಾಡಲಾಗಿದೆ. ಒಂದು ಕಾಮಗಾರಿಗೆ 36 ಲಕ್ಷ ರೂ.ಬಿಲ್ ಮಾಡಲಾಗಿದೆ ಎಂದು ಅರೋಪಿಸಿದರು. ಇದಕ್ಕೆ ಜಿ.ಪಂ.ನ ಆಡಳಿತ ವ್ಯವಸ್ಥೆ ಕಾರಣ, ತನಿಖೆ ಮಾಡಿದ ಸಮತಿಯು ಶಿಫಾರಸ್ಸು ಮಾಡಿದ ಒಬ್ಬ ಅಧಿಕಾರಿಗೂ ಇಲ್ಲಿ ಶಿಕ್ಷೆಯಾಗಿಲ್ಲ. ಅಧ್ಯಕ್ಷರ ಸಹಕಾರ ಇಲ್ಲದೆ ಹೀಗೆ ನಡೆಯಲು ಸಾಧ್ಯವಿಲ್ಲ. ಕಾಮಗಾರಿ ಮಾಡದೆ ಹಣ ನುಂಗುವ ಹಂತಕ್ಕೆ ನಾವು ಬಂದು ಮುಟ್ಟಿದ್ದೇವೆ ಎಂದು ಆರೋಪ ವ್ಯಕ್ತಪಡಿಸಿದರು.
ಸದಸ್ಯ ಎಲ್.ಟಿ.ಪಾಟೀಲ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದು, ಉತ್ತರ ಕನ್ನಡದಲ್ಲಿ ಈ ಪದ್ಧತಿ ಈ ವರ್ಷದಿಂದ ಶುರುವಾಗಿದೆ. ಮುಂಡಗೋಡದಲ್ಲಿ 86 ಲಕ್ಷ ದೋಚಲಾಗಿದೆ ಎಂದು ಆರೋಪಿಸಿದರು.
ಮುಂಡಗೋಡ ತಾ.ಪಂ.ಅಧ್ಯಕ್ಷರು ತಮ್ಮ ಅನುಭವ ಹೇಳಿ, ಅಧಿಕಾರಿಯನ್ನು ಅಮಾನತು ಮಾಡಿ ಎಂದಾಗ ಅಧಿಕಾರಿಯು ಕೆಲಸ ಪ್ರಾರಂಭಿಸುವ ಕುರಿತು ಸಮಜಾಯಿಷಿ ನೀಡಲು ಯತ್ನಿಸಿದರು. ಒಂದು ಕಾಮಗಾರಿ ಮುಗಿದಿದೆ. ಎರಡು ಪ್ರಾರಂಭವಾಗಿವೆ. ನಾಲ್ಕು ಇನ್ನೂ ಪ್ರಾರಂಭವಾಗಿಲ್ಲ ಎಂದರು.
ಒಂದು ಕಾಮಗಾರಿಗೆ 36 ಲಕ್ಷ ರೂ. ಬಿಲ್ ಆಗಿದ್ದು ಹೇಗೆ ಎಂಬುದಕ್ಕೆ ಅಧಿಕಾರಿ ಉತ್ತರಿಸಲು ತಡವರಿಸಿದರು. ಇದನ್ನು ಗಮನಿಸಿದ ಸಿಇಒ ಪ್ರಿಯಾಂಗಾ ಸಮಗ್ರ ತನಿಖೆ ಮಾಡುವುದಾಗಿ ಹೇಳಿದರು.