ಬೆಂಗಳೂರು: ಪ್ರಗತಿಯ ಹೆಸರಿನಲ್ಲಿ ಪಶ್ಚಿಮ ಘಟ್ಟ ಅಪಾಯಕ್ಕೆ ಸಿಲುಕಿದ್ದು ಆ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಉಳಿವಿಗೆ ಆಗ್ರಹಿಸಿ ಸಂಯುಕ್ತ ಸಸ್ಯ ಸಂರಕ್ಷಣಾ ಚಳವಳಿ ಸಂಘಟನೆ ಫೆ.16ರಂದು ನಗರದಲ್ಲಿ ಬೃಹತ್ ರ್ಯಾಲಿ ಆಯೋಜಿಸಿದೆ ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಾಯಕ್ಕೆ ಸಿಲುಕಿರುವ ಪಶ್ಚಿಮ ಘಟ್ಟಕ್ಕೆ ಇತಿಹಾಸವಿದೆ. ಆ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಸುಮಾರು 25 ಸಂಘಟನೆಗಳು ಜತೆಗೂಡಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ರ್ಯಾಲಿ ಆಯೋಜಿಸಿದ್ದು ಕರ್ನಾಟಕ, ಕೇರಳ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ಪರಿಸರ ವಾದಿಗಳು ಪಾಲ್ಗೊಂಡು ಪಶ್ಚಿಮ ಘಟ್ಟ ಸೇರಿ ಇನ್ನಿತರ ಪರಿಸರ ಉಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ನದಿಗಳು ಅಪಾಯದಲ್ಲಿವೆ: ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಮಲೆನಾಡು, ಕೊಡುಗು ಸೇರಿ ಕರ್ನಾಟಕದಾದ್ಯಂತ ಸುಮಾರು 21 ಲಕ್ಷ ಮರಗಳನ್ನು ನೆಲಸಮ ಮಾಡಲಾಗಿದೆ. ಹಲವು ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಸದ್ದಿಲ್ಲದೆ ಆರಂಭವಾಗಿದ್ದು ಈ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಸುಮಾರು 52 ನದಿಗಳು ಅಪಾಯದ ಅಂಚಿಗೆ ಸಿಲುಕಿವೆ. ಹೀಗಾಗಿ, ಭವಿಷ್ಯತ್ತಿನ ದೃಷ್ಟಿಯಿಂದ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂದರು.
ಅಮೆಜಾನ್‌ನಲ್ಲಿರುವ ಜೀವ ವೈವಿಧ್ಯಗಳಿಗಿಂತ ಹೆಚ್ಚು ಜೀವವೈವಿಧ್ಯ ಪಶ್ಚಿಮ ಘಟ್ಟದಲ್ಲಿವೆ. ಅವುಗಳ ಉಳಿವಿಗಾಗಿ ಸರ್ಕಾರ ಆದ್ಯತೆ ನೀಡಬೇಕಾಗಿದ್ದು ಕಾಡು ಇದ್ದರೆ ನದಿ, ನದಿ ಇದ್ದರೆ ಬದುಕು ಎಂಬುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಭವಿಷ್ಯತ್ತಿನ ದೃಷ್ಟಿಯಿಂದ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ನದಿ ತಿರುವು ಪರಿಸರಕ್ಕೆ ಅಪಾಯ: ಸಂಯುಕ್ತ ಸಸ್ಯ ಸಂರಕ್ಷಣಾ ಚಳವಳಿಯ ಸಂಚಾಲಕ ಸಹದೇವ ಮಾತನಾಡಿ, ನದಿ ತಿರುವು ಯೋಜನೆ ಪರಿಸರಕ್ಕೆ ಅತ್ಯಂತ ಅಪಾಯಕಾರಿ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನದಿಗಳ ದಿಕ್ಕು ಬದಲಾವಣೆ ಕೂಡ ಅನೇಕ ರೀತಿಯ ಅಪಾಯಗಳಿಗೆ ಕಾರಣವಾಗಲಿದೆ. ಯಾವ ಪ್ರದೇಶಗಳಿಗೆ ನೀರು ಅಗತ್ಯ ಇದೆಯೋ, ಆ ಪ್ರದೇಶದಲ್ಲಿ ನೀರಿನ ಬವಣೆ ನೀಗಿಸುವ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ನದಿ ತಿರುವು ಯೋಜನೆಗೆ ಕೈ ಹಾಕುವುದು ಒಳ್ಳೆಯದಲ್ಲ ಎಂದರು.
ಪಶ್ಚಿಮ ಘಟ್ಟಕ್ಕೆ ಕುತ್ತು ತಂದಿರುವ ಯೋಜನೆಗಳು
ಬೆಂಗಳೂರು – ಮಂಗಳೂರು ಕೈಗಾರಿಕಾ ಕಾರಿಡಾರ್, ನೇತ್ರಾವತಿ ನದಿ ತಿರುವು, ತುಂಗಾ ಏತ ನೀರಾವರಿ, ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು -ತುಮಕೂರು- ತರೀಕೆರೆ-ಶಿವಮೊಗ್ಗ- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಆಗುಂಬೆ-ಮಲ್ಪೆ ರಸ್ತೆ ಅಗಲೀಕರಣ, ಕೈಗಾ ಅಣು ವಿದ್ಯುತ್ ಘಟಕ, ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆ, ಶರಾವತಿ ನದಿಯಿಂದ ನೀರೆತ್ತುವ ಯೋಜನೆ, ಶಿರಸಿ-ಕುಮಟಾ ಹೈವೇ, ಸಾಗರ- ಸಿಂಗಂದೂರು-ನಿಟ್ಟೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಯೋಜನೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆ, ಮೈಸೂರು-ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಮೈಸೂರು -ಮಂಗಳೂರು ರೈಲ್ವೆ, ಶಿವಮೊಗ್ಗ -ಶೃಂಗೇರಿ ರೈಲ್ವೆ ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳು.