Advertisement

ಸಮಾಜದ ಅಭಿವೃದ್ಧಿಗೆ ಹೋರಾಟ

06:26 AM Feb 25, 2019 | Team Udayavani |

ಹರಿಹರ: ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನಿಡುವುದು, ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುವುದು ಸೇರಿದಂತೆ ಸಮಾಜದ ಅಭಿವೃದ್ಧಿಗೆ ತಾವು ನಿರಂತರ ಹೋರಾಟ ನಡೆಸುವುದಾಗಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದರು.

Advertisement

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ. 8, 9ರಂದು ನಡೆದಿದ್ದ ವಾಲ್ಮೀಕಿ ಜಾತ್ರೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ಜನರ ಬೆಂಬಲದೊಂದಿಗೆ ಹಿಂದುಳಿದಿರುವ ವಾಲ್ಮೀಕಿ
ಜನಾಂಗದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಭಿವೃದ್ದಿಗೆ ತಾವು ಶ್ರಮಿಸುವುದಾಗಿ ತಿಳಿಸಿದರು.

ವಾಲ್ಮೀಕಿ ಸಮಾಜಕ್ಕೆ ಜನಸಂಖ್ಯಾ ಆಧಾರದಲ್ಲಿ ಶೇ. 7.5ರಷ್ಟು ಮೀಸಲಾತಿ ನೀಡಿದರೆ ಮಾತ್ರ ಸಾಮಾಜಿಕ ನ್ಯಾಯ ದೊರಕಿಸಲು ಸಾಧ್ಯ. ಅಲ್ಲದೆ ರಾಜ್ಯದ ಒಂದು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡುವ ಮೂಲಕ ರಾಮಾಯಣ ಮಹಾಕೃತಿ ರಚಿಸಿದ ಮಹರ್ಷಿಗೆ ಗೌರವ ಸಲ್ಲಿಸಬೇಕಿದೆ
ಎಂಬುದನ್ನು ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರು ಆಡಳಿತಗಾರರ ಗಮನಕ್ಕೆ ತಂದಿದ್ದಾರೆ. ಸರ್ಕಾರ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.  ವಿಳಂಬ ನೀತಿ ಅನುಸರಿಸಿದರೆ ಹೋರಾಟ ಮುಂದುವರೆಸುವುದು ಅನಿವಾರ್ಯವಾಗುತ್ತದೆ ಎಂದರು.

ಶಾಸಕ ಎಸ್‌.ವಿ.ರಾಮಚಂದ್ರಪ್ಪ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಿಂದ ಲಕ್ಷಾಂತರ ಸಮಾಜ ಬಾಂಧವರು ಆಗಮಿಸಿದ್ದ ಪ್ರಥಮ ವಾಲ್ಮೀಕಿ ಜಾತ್ರೆ ದಾಖಲೆಯಾಗಿ ಉಳಿದಿದೆ. ಜಾತ್ರೆಯನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಿದ ಆಡಳಿತ ಮಂಡಳಿಯ ಶ್ರಮ
ಶ್ಲಾಘನೀಯ ಎಂದರು. ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಜಾತ್ರಾ ಸಮಿತಿ, ಸಮಾಜದ ಪದಾಧಿಕಾರಿಗಳು, ದಾನಿಗಳನ್ನು ಸತ್ಕರಿಸಲಾಯಿತು.

ಸಮಾಜದ ಮುಖಂಡರಾದ ಟಿ.ಈಶ್ವರ್‌, ಜಿಪಂ ಸದಸ್ಯರಾದ ನಿರ್ಮಲ ಟಿ.ಮುಕುಂದ, ಓಬಳಪ್ಪ, ಕೆ.ಬಿ.ಮಂಜಣ್ಣ, ಪಾಲಿಕೆ ಸದಸ್ಯ ನಾಗರಾಜ್‌, ಪಿ.ಎಸ್‌.ಹನುಮಂತಪ್ಪ, ಟಿ.ಮಹದೇವಪ್ಪ, ಜಿಗಳಿ ಆನಂದಪ್ಪ, ಧಾರವಾಡದ ಭರತ್‌, ಡಾ| ಜಿ.ರಂಗಯ್ಯ, ನಿರ್ಮಲ ಶೇಖರಪ್ಪ, ಕೆ.ಎನ್‌.ಹಳ್ಳಿ
ಕುಬೇರಪ್ಪ, ಜಿಗಳಿ ಪ್ರಕಾಶ್‌ ಇತರರಿದ್ದರು.

Advertisement

1.67 ಕೋಟಿ ರೂ. ಉಳಿತಾಯ ಜಾತ್ರೆಯ ಒಟ್ಟು ವೆಚ್ಚ 1.13 ಕೋಟಿ ರೂ.ಗಳಾಗಿದ್ದರೆ, 1.67 ಕೋಟಿ ರೂ. ಉಳಿತಾಯವಾಗಿದೆ ಎಂದು ಜಾತ್ರೆಯ ಆಯವ್ಯಯ ವರದಿ ಮಂಡಿಸಿದ ಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಹಾಗೂ ನಿವೃತ್ತ ಜೈಲರ್‌ ವೀರೇಂದ್ರಸಿಂಹ ಹೇಳಿದರು.

ಹೊಸ ರಥ ನಿರ್ಮಾಣ ಮುಂದಿನ ಜಾತ್ರೆ ಸಮಯಕ್ಕೆ ಹೊಸ ಭವ್ಯ, ಸುಂದರ ರಥವನ್ನು ನಿರ್ಮಿಸಲಾಗುವುದು. ರಥವು ರಾಜ್ಯದಲ್ಲೆ ವಿಶಿಷ್ಠವಾಗಿ ಕಾಣುವಂತಿರುತ್ತದೆ. ಇದಕ್ಕಾಗಿ ನೆರವಾಗಲು ಸಾಕಷ್ಟು ದಾನಿಗಳು ಮುಂದಾಗಿದ್ದಾರೆ ಎಂದು ಶ್ರೀಗಳು ನುಡಿದರು. ಸಭೆಯಲ್ಲಿ ಹಾಜರಿದ್ದ ಅರಸೀಕೆರೆ ದೇವೇಂದ್ರಪ್ಪ ರಥದ ನಿರ್ಮಾಣಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next