Advertisement
ಜಿಲ್ಲೆಯಲ್ಲಿ ಮಾಜಿ ಸೈನಿಕರ ಸಂಘ ಹುಟ್ಟಿಕೊಂಡು ಬರೋಬ್ಬರಿ 11 ವರ್ಷ ಕಳೆದಿವೆ. ಸದ್ಯಕ್ಕೆ 175 ಜನ ನಿವೃತ್ತ ಯೋಧರಿದ್ದರೆ; 30ಕ್ಕೂ ಹೆಚ್ಚು ಜನ ಮೃತ ಸೈನಿಕರ ಮಡದಿಯರು ಸಂಘದಲ್ಲಿದ್ದಾರೆ. ಮಾಜಿ ಸೈನಿಕರಿಗಾಗಿ ಏನಾದರೂ ಅನುಕೂಲ ಮಾಡಿಕೊಡಬೇಕು ಎಂಬ ನಿಟ್ಟಿನಲ್ಲಿ ಸಂಘ ಸತತ ಪ್ರಯತ್ನ ನಡೆಸುತ್ತಿದೆ ವಿನಃ ಅದಕ್ಕೆ ಸಿಕ್ಕ ಪ್ರತಿಫಲ ಮಾತ್ರ ಶೂನ್ಯವಾಗಿದೆ. ಮಾಜಿ ಸೈನಿಕರಲ್ಲಿಯೂ ಕೆಲವರು ಕಡು ಬಡವರಿದ್ದಾರೆ. ಅಂಥವರಿಗೊಂದು ನಿವೇಶನ ಒದಗಿಸಬೇಕು. ಸಂಘಕ್ಕೆ ಒಂದು ಸುಸಜ್ಜಿತ ಕಟ್ಟಡ ಬೇಕು, ಒಂದು ಸಮುದಾಯ ಭವನ ನಿರ್ಮಿಸಬೇಕು, ವಾರ್ ಮೆಮೋರಿಯಲ್ ಮಾಡಬೇಕು ಎಂಬಿತ್ಯಾದಿ ಕಾರಣಗಳಿಂದ ಜಿಲ್ಲಾಡಳಿತಕ್ಕೆ ಜಾಗ ಮಂಜೂರು ಮಾಡಲು ಸಂಘದಿಂದ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಅವರಿಗೆ ಒಂದು ಅಂಗುಲ ಸ್ಥಳ ಮಂಜೂರಾಗಿಲ್ಲ ಎನ್ನುವುದು ಕಟುವಾಸ್ತವ.
Related Articles
Advertisement
ಸ್ವಂತ ಕಚೇರಿ ಕೂಡ ಇಲ್ಲ
ಸಂಘ ಹುಟ್ಟಿಕೊಂಡಾಗ ಕೇವಲ ಬೆರಳೆಣಿಕೆ ಸದಸ್ಯರಿದ್ದರು. ಆದರೆ, ಈಗ ಜಿಲ್ಲೆಯಲ್ಲಿ ಸುಮಾರು 400 ಜನ ಮಾಜಿ ಸೈನಿಕರಿದ್ದು, ಅದರಲ್ಲಿ 205 ಜನ ಸಂಘದಲ್ಲಿದ್ದಾರೆ. ಸಂಘಕ್ಕೆ ಒಂದು ಸ್ವಂತ ಕಚೇರಿ ಮಾಡಬೇಕಿದ್ದು, ಸ್ಥಳಾವಕಾಶ ಮಾಡಿಕೊಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ, ಈವರೆಗೂ ಒಂದು ಸ್ಥಳ ನೀಡಿಲ್ಲ. ನಗರದ ಪೇಟ್ಲ ಬುರ್ಜ್ ಬಳಿಯಿರುವ ಸಿಎಂಸಿಯ ಹಳೇ ಕಟ್ಟದಲ್ಲಿಯೇ ತಿಂಗಳ ಬಾಡಿಗೆ ಪಾವತಿಸಿ ಸಂಘದ ಕಚೇರಿ ನಡೆಸಲಾಗುತ್ತಿದೆ. ಅದು ಸಂಪೂರ್ಣ ಶಿಥಿಲಾವಸ್ಥಗೆ ತಲುಪಿದ್ದು, ಆಗಲೋ-ಈಗಲೋ ಎನ್ನುವಂತಿದೆ.
ವಾರ್ ಮೆಮೋರಿಯಲ್ ಇಲ್ಲ
ಮಾಜಿ ಸೈನಿಕರಿಗೆ ಯಾವುದೇ ಸಂಭ್ರಮಾಚರ ಣೆಗೋ, ಇಲ್ಲ ಗೌರವ ಸಮರ್ಪಣೆಗೋ ಒಂದು ಸ್ಮಾರಕ ಇಲ್ಲ. ಒಂದು ವಾರ್ ಮೆಮೋರಿಯಲ್ (ಯುದ್ಧ ಸ್ಮಾರಕ) ಮಾಡಲು ನಗರದ ಹೃದಯ ಭಾಗದಲ್ಲಿ ಒಂದು ಚಿಕ್ಕ ಸ್ಥಳ ನೀಡುವಂತೆ ಕೇಳು ತ್ತಲೇ ಬಂದಿದ್ದಾರೆ. ಆದರೂ ಯಾರೊಬ್ಬರು ಸ್ಪಂದಿಸುತ್ತಿಲ್ಲ. ಕೆಲವೊಮ್ಮೆ ಯಾವುದೋ ವೃತ್ತಕ್ಕೆ ಭಾವಚಿತ್ರ ಅಳವಡಿಸಿ ಗೌರವ ಸಲ್ಲಿಸುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಾಜಿ ಸೈನಿಕರು.
ಮಾಜಿ ಸೈನಿಕರನ್ನು ಕಾರ್ಯಕ್ರಮಗಳಿಗೆ ಕರೆದು ಸನ್ಮಾನಿಸುತ್ತಿರುವುದೇ ದೊಡ್ಡ ಕಾರ್ಯ ಎನ್ನುವಂತಾಗಿದೆ. ನಮ್ಮ ಸಮಸ್ಯೆಗಳ ಕುರಿತು ಕಚೇರಿಗಳಿಗೆ ಅಲೆದು ಬೇಸತ್ತಿದ್ದೇವೆ. ಮಾಜಿ ಸೈನಿಕರಿಗೆ ಏನಾದರೂ ಉಪಯುಕ್ತವಾಗುವ ಕೆಲಸ ಮಾಡಬೇಕಿದೆ. ಸೂಕ್ತ ಸ್ಥಳ ಮಂಜೂರು ಮಾಡಿದರೆ, ಬಡವರಿಗೆ ನಿವೇಶನ, ಸಂಘದ ಕಚೇರಿಗೆ ಕಟ್ಟಡ ನಿರ್ಮಿಸಿಕೊಳ್ಳುತ್ತೇವೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಇನ್ನಾದರೂ ಈ ವಿಚಾರದಲ್ಲಿ ಸೂಕ್ತ ಕ್ರಮ ವಹಿಸಲಿ. -ಸುಂದರ್‌ಸಿಂಗ್, ಅಧ್ಯಕ್ಷ, ಮಾಜಿ ಸೈನಿಕರ ಸಂಘ
ಸಂಘಕ್ಕೆ ಒಂದು ಕಚೇರಿ ಕೂಡ ಇಲ್ಲ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಸಿಎಂಸಿ ಕಟ್ಟದಲ್ಲಿಯೇ ಕಳೆದ 10 ವರ್ಷದಿಂದ ಕಚೇರಿ ನಡೆಸುತ್ತಿದ್ದೇವೆ. ಧ್ವಜಾರೋಹಣ ಸೇರಿದಂತೆ ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಕೂಡಲು ಸ್ಥಳಾವಕಾಶ ಇಲ್ಲ. ಮಾಜಿ ಸೈನಿಕರ ಬಗ್ಗೆ ಬರೀ ಮಾತಿನಲ್ಲೇ ಅಭಿಮಾನ ತೋರುವುದಕ್ಕಿಂತ ವಾಸ್ತವದಲ್ಲಿ ನೆರವಾಗುವ ಅನಿವಾರ್ಯತೆ ಇದೆ. -ಶ್ಯಾಮಸುಂದರ್, ಮಾಜಿ ಸೈನಿಕ
-ಸಿದ್ಧಯ್ಯಸ್ವಾಮಿ ಕುಕನೂರು