Advertisement

ಗಾಜಿನಮನೆ ಹೆಸರಿಗಾಗಿ ಗುದ್ದಾಟ

10:48 AM Oct 04, 2018 | |

ದಾವಣಗೆರೆ: ನಗರದ ಕುಂದುವಾಡ ಕೆರೆ ಪಕ್ಕದಲ್ಲಿ ನಿರ್ಮಿಸಿರುವ ಆಕರ್ಷಕ ಗಾಜಿನಮನೆಗೆ ಹೆಸರಿಡುವ ಬಗ್ಗೆ ಈಗ ಬೀದಿ ರಂಪಾಟ ಆರಂಭವಾಗಿದ್ದು, ವಾದ-ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮಹಾನಗರಪಾಲಿಕೆ ಗಾಜಿನಮನೆಗೆ ಶಾಮನೂರು ಹೆಸರಿಡುವ ಸಂಬಂಧ ಕೈಗೊಂಡಿರುವ ತೀರ್ಮಾನವನ್ನು ಶಾಮನೂರು ಗ್ರಾಮದ ಮುಖಂಡರು
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತಿಸಿದರೆ, ಗಾಜಿನಮನೆಗೆ ಯಾರಾದರೂ ದಾರ್ಶನಿಕರ ಇಲ್ಲವೇ ಹೋರಾಟಗಾರರ ಹೆಸರಿಡುವಂತೆ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

Advertisement

ಪಾಲಿಕೆ ತೀರ್ಮಾನ ಸ್ವಾಗತಾರ್ಹ: ತೋಟಗಾರಿಕಾ ಇಲಾಖೆಯಿಂದ ನಿರ್ಮಿಸಿರುವ ಗಾಜಿನಮನೆಗೆ ಶಾಮನೂರು ಹೆಸರಿಡಲು ಪಾಲಿಕೆ ಸಭೆ ಕೈಗೊಂಡಿರುವ ತೀರ್ಮಾನ ಸ್ವಾಗತಾರ್ಹ ಎಂಬುದಾಗಿ ಶಾಮನೂರು ಗ್ರಾಮದ ಕೆಲ ಮುಖಂಡರು ಬಣ್ಣಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಶಾಮನೂರು ಗ್ರಾಮದ ಸರ್ವೇ ನಂಬರ್‌ 37ರಲ್ಲಿ ನಿರ್ಮಿಸಿರುವ ಗಾಜಿನಮನೆಗೆ ಶಾಮನೂರು ಹೆಸರಿಡುವುದರಿಂದ ಗ್ರಾಮದ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದು ಶಾಮನೂರು ಟಿ. ಬಸವರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಾನಗರ ಪಾಲಿಕೆ ಶಾಮನೂರು ಗಾಜಿನಮನೆ.. ಎಂಬುದಾಗಿ ಹೆಸರಿಡುವ ನಿರ್ಧಾರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ನಿರ್ಧಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳು, ಮುಖಂಡರ ಆರೋಪ, ಪ್ರತ್ಯಾರೋಪ, ವೈಯಕ್ತಿಕ ಹೇಳಿಕೆ ನೀಡುವುದು ಅವರವರಿಗೆ ಬಿಟ್ಟ ವಿಚಾರ. ಶಾಮನೂರು ಗ್ರಾಮದ ಹೆಸರು ಉಳಿಯಬೇಕು. ಹಾಗಾಗಿ ಗಾಜಿನಮನೆಗೆ ಶಾಮನೂರು ಗಾಜಿನಮನೆ ಎಂದೇ ಹೆಸರಿಡಬೇಕು ಎಂದು ಗ್ರಾಮಸ್ಥರು ಪಕ್ಷಾತೀತವಾಗಿ ಒತ್ತಾಯಿಸುತ್ತೇವೆ ಎಂದರು.

ಶಾಮನೂರು ಗ್ರಾಮದ ಸರ್ವೇ ನಂಬರ್‌ 37 ರಲ್ಲಿರುವ 11.7 ಎಕರೆ ಜಾಗದಲ್ಲಿ 5 ಎಕರೆ ಜಾಗದಲ್ಲಿ ಸ್ಮಶಾನ, ಕುಂದುವಾಡ ಕೆರೆ ಇದೆ. ಈಗ ಗಾಜಿನಮನೆ ನಿರ್ಮಾಣವಾಗಿರುವ ಜಾಗ ಶಾಮನೂರಿಗೆ ಸೇರಿದ್ದು. ವಾಸ್ತವವಾಗಿ ಗಾಜಿನಮನೆಗೆ ಶಾಮನೂರು ಶಿವಶಂಕರಪ್ಪ ಗಾಜಿನಮನೆ… ಎಂದು ಹೆಸರಿಡಬೇಕು ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದರೂ ಶಾಸಕರೇ ತಮ್ಮ ಹೆಸರಿಡುವುದು ಬೇಡ ಎಂದಿದ್ದಾರೆ. ಆದರೂ, ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು ರಾಜಕೀಯ ಜಿದ್ದಾಜಿದ್ದಿಗಾಗಿ ಶಾಮನೂರು ಎಂಬ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.

ಹಿಂದೆ ನಮ್ಮ ಗ್ರಾಮಕ್ಕೆ ಶಂಭನೂರು ಎಂಬ ಹೆಸರಿತ್ತು. ಶಂಭನೂರು ಕ್ರಮೇಣ ಶಾಬನೂರು ಎಂದಾಯಿತು. 30 ವರ್ಷಗಳ ಈಚೆಗೆ ಶಾಮನೂರು ಎಂದೇ ಚಾಲ್ತಿಯಲ್ಲಿದೆ. ಎಲ್ಲಾ ದಾಖಲೆಗಳು ಶಾಮನೂರು ಹೆಸರಿನಲ್ಲೇ ಇವೆ. ಆದರೆ, ಆ ಹೆಸರಿಗೆ ವಿರೋಧ ಮಾಡಲಾಗುತ್ತದೆ. ನಮ್ಮ ಗ್ರಾಮದ ಕೆಲವಾರು ಕಟ್ಟಡಕ್ಕೆ ರವೀಂದ್ರನಾಥ್‌ ಹೆಸರಿಡಲಾಗಿದೆ. 
ಅದಕ್ಕೆ ಯಾರೂ ವಿರೋಧ ಮಾಡಿಲ್ಲ. ಅವರಿಬ್ಬರೂ ಅನುದಾನ ತಂದು ಇನ್ನೊಂದು ಕೆರೆಯೋ, ಏನಾದರೂ
ಮಾಡಿ ಅವರದ್ದೇ ಹೆಸರಿಟ್ಟುಕೊಳ್ಳಲಿ ಬೇಡ ಎನ್ನುವುದಿಲ್ಲ. ಗಾಜಿನಮನೆಗೆ ನಮ್ಮ ಗ್ರಾಮದ ಹೆಸರಿಡುವುದಕ್ಕೆ ವಿರೋಧ ಮಾಡಬಾರದು ಎಂದು ಕೋರಿದರು. ಗ್ರಾಮದ ಜಿ.ಎಚ್‌. ರಾಮಚಂದ್ರಪ್ಪ, ಎಚ್‌. ಹಿಮಂತ್‌ರಾಜ್‌, ಅನಂತ್‌, ಓಂಕಾರಪ್ಪ, ಕೆ.ಪಿ. ಪ್ರಭು, ಎಸ್‌.ಜಿ. ವೇದಮೂರ್ತಿ, ಸಿದ್ದೇಶ್‌, ಬೆಳವನೂರು ಜಯಪ್ಪ, ಬಿ. ಶಿವಕುಮಾರ್‌, ಪ್ರವೀಣ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಕ ಆಕರ್ಷಕವಾಗಿ ನಿರ್ಮಿಸಿರುವ ಗಾಜಿನ ಮನೆಗೆ ದಾರ್ಶನಿಕರ, ನಾಡಿನ ಹೋರಾಟಗಾರರ ಹೆಸರಿಡಬೇಕೆಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪಾಲಿಕೆ ಮುಂಭಾಗದಲ್ಲಿ ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಗಾಜಿನ ಮನೆಗೆ ಶಾಮನೂರು ಹೆಸರಿಡಲು ಪಾಲಿಕೆ ಸಭೆ ಕೈಗೊಂಡ ನಿರ್ಧಾರ ಕೂಡಲೇ ಹಿಂಪಡೆಯಲು ಒತ್ತಾಯಿಸಿ, ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ಅವರಿಗೆ ಮನವಿ ಸಲ್ಲಿಸಿದರು.
 
ಶಾಮನೂರು ಬಳಿ ಇರುವ ಗಾಜಿನಮನೆಯ ಸ್ಥಳ ಕುಂದುವಾಡ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಕುಂದುವಾಡ ಗಾಜಿನಮನೆ ಎಂಬುದಾಗಿ ಹೆಸರಿಡಲಿ. ಗಾಜಿನಮನೆಯ ಹೆಸರಿನ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ಕೆಸರೆರೆಚಾಟ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಾಜಿನ ಮನೆಯ ಹೆಸರನ್ನು ಮರು ಪರಿಶೀಲಿಸಲು ಕೂಡಲೇ ಪಾಲಿಕೆ ಕ್ರಮಕೈಗೊಳ್ಳಬೇಕು.

ಆ ಮನೆಗೆ ದಾರ್ಶನಿಕರು, ಸೈನಿಕರು, ಸ್ವಾತಂತ್ರ ಹೋರಾಟಗಾರರು ಇಲ್ಲವೇ ಸಾರ್ವಜನಿಕರಿಗೆ ಸ್ಫೂರ್ತಿದಾಯಕವಾಗಿ ಕೆಲಸ ಮಾಡಿದವರ ಹೆಸರಿಡಬೇಕು ಎಂದು ಒತ್ತಾಯಿಸಿದರು. ಜನತಾ ರಕ್ಷಣಾ ವೇದಿಕೆಯ ಮಧು ನಾಗರಾಜ್‌ ಕುಂದುವಾಡ, ಪರಿಸರ ಸಂರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನೆ, ಸುವರ್ಣ ಕರ್ನಾಟಕ ವೇದಿಕೆಯ ಸಂತೋಷ್‌, ಜನಸಾಮಾನ್ಯರ ಸೇವಾ ಸಂಸ್ಥೆಯ ಪ್ರಸನ್ನ ಬೆಳಕೇರಿ, ಶಿವಪ್ಪ, ಟಿ.ಸಿ.ದೇವರಾಜ್‌, ಅಣ್ಣಪ್ಪ, ನಿಂಗಪ್ಪ, ಸಿದ್ದೇಶ್‌, ಪ್ರಭು, ಮಾರುತಿ, ನಾಗರಾಜ್‌ ಸುರ್ವೆ ಹಾಗೂ ಕುಂದುವಾಡ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next