ಮೂಡುಬಿದಿರೆ: ಕಾರ್ಮಿಕರನ್ನು 16 ತಾಸುಗಳ ಕಾಲ ದುಡಿಸಿಕೊಳ್ಳುವ ಪದ್ಧತಿಯು ಹೋರಾಟದಿಂದಾಗಿ 14 ತಾಸುಗಳಿಂದ 10ಕ್ಕೆ ಸೀಮಿತಗೊಂಡಿತ್ತು. ಇದೀಗ ಕಾರ್ಮಿಕರಿಗೆ 8 ತಾಸು ದುಡಿಮೆ, ಅಷ್ಟೇ ಹೊತ್ತು ಮನೋರಂಜನೆ ಮತ್ತು ಅಷ್ಟೇ ಹೊತ್ತು ನಿದ್ರೆಗೆ ಮೀಸಲಿರಿಸಲು ಹೋರಾಟ ನಡೆಸಲಾಗುತ್ತಿದೆ. ಆದರೆ ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಕಾರ್ಮಿಕರಿಗಿರುವ ಹಕ್ಕುಗಳು ಕಾರ್ಯಗತ ವಾಗದಂತೆ ತಡೆಹಿಡಿಯಲಾಗುತ್ತಿದೆ; ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸುವ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಸಿ.ಐ.ಟಿ.ಯು ಮೂಡುಬಿದಿರೆ ವಲಯ ಸಮಿತಿಯ ವತಿಯಿಂದ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ (ಮೇ ಡೇ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಉತ್ತರ ಭಾರತದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಸರಿಯಾದ ಸವಲತ್ತು ಗಳನ್ನು ನೀಡದೆ ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ದುಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಿ.ಐ.ಟಿ.ಯು. ಮೂಡುಬಿದಿರೆ ವಲಯ ಸಮಿತಿ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಯಾದವ ಶೆಟ್ಟಿ ಮಾತನಾಡಿ, ಈ ದೇಶದ ನೆಲ, ಜಲ ಮತ್ತಿತರ ಸಂಪನ್ಮೂಲಗಳನ್ನು ಕಾರ್ಪೋರೆಟ್ ವಲಯದ ಉದ್ಯಮಿಗಳಿಗೆ ಕೇಂದ್ರ ಸರಕಾರ ಎತ್ತಿ ಕೊಡುತ್ತಿದೆ; 27 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ, 4 ಕಾರ್ಮಿಕ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.
ಸಿ.ಐ.ಟಿ.ಯು ಮುಖಂಡರಾದ ಬಿಸಿಯೂಟ ಕಾರ್ಮಿಕರ ಜಿಲ್ಲಾ ಸಂಘದ ಕಾರ್ಯದರ್ಶಿ ಗಿರಿಜಾ, ಲಕ್ಷ್ಮೀ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ತಾ. ಪ್ರ. ಕಾರ್ಯದರ್ಶಿ ಶಂಕರ ವಾಲ್ಪಾಡಿ, ಪ್ರಾ. ರೈತಸಂಘದ ತಾಲೂಕಾಧ್ಯಕ್ಷ ಸುಂದರ ಶೆಟ್ಟಿ, ದಿವಾಕರ ಸುವರ್ಣ ನಿಡ್ಡೋಡಿ, ರಿಕ್ಷಾ ಯೂನಿಯನ್‌ನ ಗೌ| ಸಲಹೆಗಾರ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.
ಸಿಐಟಿಯು ತಾ.ಕಾರ್ಯದರ್ಶಿ ರಾಧಾ ನಿರೂಪಿಸಿ ಉಪಾಧ್ಯಕ್ಷ ಮಹಮ್ಮದ್ ತಸ್ಲಿಪ್ ವಂದಿಸಿದರು.
ಪ್ರಾರಂಭದಲ್ಲಿ ಸಿ.ಐ.ಟಿ.ಯು. ಕಚೇರಿಯಿಂದ ಮೂಡುಬಿದಿರೆ ಸಮಾಜ ಮಂದಿರದವರೆಗೆ ಕಾರ್ಮಿಕರ ಮೆರವಣಿಗೆ ನಡೆಯಿತು.