Advertisement

Dharwad; ಒಂದೇ ಒಂದು ಕೇಸ್‌ ವಾಪಸ್ ಪಡೆದರೂ ಹೋರಾಟ: ಜೋಶಿ ಎಚ್ಚರಿಕೆ

04:19 PM Oct 07, 2023 | Team Udayavani |

ಧಾರವಾಡ: ಹುಬ್ಬಳ್ಳಿ ಸೇರಿದಂತೆ ಸಮಾಜ ದ್ರೋಹಿ ಹಾಗೂ ದೇಶದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣ ಹಿಂಪಡೆದರೂ ತೀವ್ರ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತಪರ ಹೋರಾಟಗಾರರ ಅಥವಾ ಕನ್ನಡಪರ ಹೋರಾಟಗಾರರ ಕೇಸುಗಳನ್ನು ಹಿಂಪಡೆದಿದ್ದರೆ ನಮ್ಮದೇನು ಅಭ್ಯಂತರವಿರುತ್ತಿರಲಿಲ್ಲ. ನಮ್ಮ ಸರ್ಕಾರವಿದ್ದಾಗ ಇದನ್ನು ಮಾಡಿದ್ದೇವೆ. ಆದರೆ ರಾಜಕೀಯಕ್ಕೋಸ್ಕರ ಪೊಲೀಸರನ್ನು ಕೊಲೆ ಮಾಡಲು ಬಂದ, ಪೊಲೀಸ್ ಠಾಣೆ ಲೂಟಿ ಮಾಡಿದ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲೆ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುತ್ತಿರುವುದು ನಾಚಿಕೆಯಲ್ಲಿ ಸಂಗತಿ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು ರಾಜ್ಯ ಸರ್ಕಾರ ಈ ಕೂಡಲೇ ಈ ನಡೆಯಿಂದ ಹಿಂದೆ ಸರಿಯದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಕೋಲಾರ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಕೇಸು ಹಾಕಿಸಿಕೊಂಡವರು ಬಹಿರಂಗವಾಗಿ ಪೊಲೀಸರ ಮುಂದೆ ತಲ್ವಾರ್ ಸೇರಿದಂತೆ ಆಯುಧಗಳನ್ನು ಪ್ರದರ್ಶಿಸಿದ್ದಾರೆ. ಇದನ್ನು ನೋಡಿದರೆ ಜನರಲ್ಲಿ ಭಯ ಉಂಟಾಗುತ್ತದೆ. ಈ ರೀತಿ ಮಾಡುವ ಜನರಿಗೆ ಧೈರ್ಯ ಎಲ್ಲಿಂದ ಬರುತ್ತದೆ? ಎನ್ನುವುದೇ ಅರ್ಥವಾಗುವುದಿಲ್ಲ. ಅಷ್ಟರಮಟ್ಟಿಗೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮುನ್ನ ಮುನ್ನ ಯಾವುದೇ ಪ್ಲ್ಯಾನಿಂಗ್ ನಡೆಸಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಯಾವುದಕ್ಕೂ ಹಣವಿಲ್ಲ ಹೀಗಾಗಿ ರಾಜ್ಯ ಮುಂದಿನ ದಿನಗಳಲ್ಲಿ ಹಿಮ್ಮುಖವಾಗಿ ಚಲಿಸಲಿದೆ ಎಂದರು.

ಬರ ಕುರಿತು ಮಾತನಾಡಿದ ಸಚಿವರು, ಎಲ್ಲದಕ್ಕೂ ಕೇಂದ್ರದತ್ತ ಕೊಟ್ಟು ಮಾಡುವುದು ಸರಿಯಲ್ಲ. ಈ ಹಿಂದೆ ಬಿಎಸ್ವೈ ಅಧಿಕಾರದಲ್ಲಿದ್ದಾಗ ಮಳೆಯಾದ ಸಂದರ್ಭದಲ್ಲಿ 5 ಲಕ್ಷ ಹಣ ನೀಡಿದ್ದರು. ಅದೇ ರೀತಿ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ನೆರವಾಗಬೇಕು ಎಂದರು.

Advertisement

ರಾಜ್ಯಕ್ಕೆ ಬರ ಅಧ್ಯಯನ ತಂಡ ಆಗಮಿಸಿದೆ. ಸರಕಾರವೂ ಕೂಡ ಸರ್ವೆ ನಡೆಸಿದೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಇದನ್ನೆಲ್ಲವನ್ನು ನೋಡಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಕೊಡಿಸಲು ತಾವು ಸಿದ್ಧವಿರುವುದಾಗಿ ತಿಳಿಸಿದರು.

ಭಯೋತ್ಪಾದನೆ ಚಟುವಟಿಕೆ ಕುರಿತು ಸಚಿವ ಲಾಡ್ ಹೇಳಿಕೆ ಹಾಸ್ಯಾಸ್ಪದ. ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲವನ್ನು ರಾಜಕಾರಣ ಪ್ರೀತಿಯಿಂದ ನೋಡುವುದು ಸರಿಯಲ್ಲ. ಭಯೋತ್ಪಾದಕರು ತಮಗೆ ಸಿಂಪತಿ ಸಿಗುವ ರಾಜ್ಯಗಳಲ್ಲಿ ಹೋಗಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಾರೆ. ದೆಹಲಿ ಪೊಲೀಸರು ನೀಡಿರುವ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ಭಯೋತ್ಪಾದಕರ ಸ್ಲೀಪರ್ ಸೆಲ್ ಆಗದಂತೆ ನೋಡಿಕೊಳ್ಳಬೇಕು ಎಂದು ಈ ಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next