ಭೋಪಾಲ್: ಇತಿಹಾಸ ಪ್ರಸಿದ್ಧ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಭಕ್ತರ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಫೆಬ್ರವರಿ ಸಿನಿಹಬ್ಬ; ರಿಲೀಸ್ ಅಖಾಡದಲ್ಲಿ 20ಕ್ಕೂ ಹೆಚ್ಚು ಚಿತ್ರಗಳು
ಪೊಲೀಸರ ಮಾಹಿತಿ ಪ್ರಕಾರ, ಇ-ರಿಕ್ಷಾದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರ ನಡುವೆ ವಾಗ್ವಾದ ನಡೆದು ಅದು ವಿಕೋಪಕ್ಕೆ ತಿರುಗಿದ ಪರಿಣಾಮ ಮಾರಾಮಾರಿ ನಡೆದಿರುವುದಾಗಿ ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ, ಭಕ್ತರ ಎರಡು ಗುಂಪು ದೇವಾಲಯದೊಳಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದ್ದು, ಕೆಲವು ಭಕ್ತರು ಮಧ್ಯಪ್ರವೇಶಿಸಿ ಜಗಳ ತಪ್ಪಿಸಲು ಪ್ರಯತ್ನಿಸಿದ್ದರು. ಮತ್ತೊಂದೆಡೆ ದೇವಾಲಯಕ್ಕೆ ಆಗಮಿಸಿದ್ದ ಇತರ ಭಕ್ತರು ಗಾಬರಿಯಿಂದ ಘಟನೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿದೆ.
ಭಕ್ತರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ದೇವಾಲಯದ ಆವರಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.