ಬೆಳಗಾವಿ: ಜಿಲ್ಲೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ ಈಗಷ್ಟೇ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಅವರು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತು ಡಾ. ಸೋನಾಲಿ ಸರ್ನೋಬತ್ ವಿರುದ್ದ ಗಂಭೀರ ಆರೋಪ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೂಲ ಹಾಗೂ ವಲಸೆ ಬಿಜೆಪಿಗರಲ್ಲಿ ತಾರತಮ್ಯವಾಗುತ್ತಿದೆ. ಪಕ್ಷಕ್ಕಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದವರಿಗೆ ಮಣೆ ನೀಡುವ ಬದಲು ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.
ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರನ್ನು ಖಾನಾಪುರ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ಅಲ್ಲದೆ ಡಾ. ಸೋನಾಲಿ ಸರ್ನೋಬತ್ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದಿದ್ದು ಸಾಕಷ್ಟು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ಜನಸೇವಕ ಸಮಾವೇಶದ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ನಮಗೆ ವಿಮಾನ ನಿಲ್ದಾಣದಲ್ಲಿ ಮುಖ್ಯಸ್ಥೆ ಎಂದು ನೇಮಕ ಮಾಡಿದ್ದರೂ ಮೂಲ ಬಿಜೆಪಿಗರನ್ನು ಕಡೆಗಣಿಸಿ ಡಾ. ಸೋನಾಲಿ ಸರ್ನೋಬತ್ ಹಾಗೂ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ರಾತ್ರೋ ರಾತ್ರಿ ಪಟ್ಟಿಯನ್ನು ಬದಲಾವಣೆ ಮಾಡಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು ಎಂದರು.
ನಾನು ಕೂಡ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಆಕಾಂಕ್ಷಿ. ಈ ಕುರಿತು ಯಾವ ಯಾವ ನಾಯಕರನ್ನು ಭೇಟಿಯಾಗಬೇಕು ಅವರನ್ನು ಭೇಟಿಮಾಡಿ ಆಗಿದೆ ಎಂದು ಹೇಳಿದರು.