Advertisement

ಹೋರಾಟದಿಂದ ಹಿಂದೆ ಸರಿಯಲ್ಲ

06:00 AM Nov 22, 2018 | Team Udayavani |

ಬೆಳಗಾವಿ: ಕಬ್ಬಿನ ದರ ನಿಗದಿ ಹಾಗೂ ಬಾಕಿ ಹಣ ಪಾವತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭಾರತೀಯ ಕೃಷಿಕ ಸಮಾಜ ಮುಖಂಡರ ಅಹೋರಾತ್ರಿ ಧರಣಿ ಮುಖ್ಯಮಂತ್ರಿಗಳ ಸಭೆ ನಂತರವೂ ಮುಂದುವರಿದಿದೆ. 

Advertisement

ಜತೆಗೆ ರೈತರ ಮನವೊಲಿಸಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ಮನವೊಲಿಕೆ ಪ್ರಯತ್ನವೂ ವಿಫ‌ಲವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಕುಳಿತಿರುವ ರೈತರು, ಸರ್ಕಾರದಿಂದ ನಮಗೆ ಲಿಖೀತ ರೂಪದಲ್ಲಿ ಹೇಳಿಕೆ ಹಾಗೂ ನಿರ್ಧಾರ ಬರುವವರೆಗೆ ಕದಲಲ್ಲ ಎಂದು ಸ್ಪಷ್ಟಪಡಿಸಿದರು. 

ಹೀಗಾಗಿ ಹೋರಾಟ ಮುಂದುವರಿಸುವುದು ಅಥವಾ ಕೈಬಿಡುವುದನ್ನು ಸ್ಥಳೀಯ ರೈತರಿಗೆ ಹಾಗೂ ಮುಖಂಡರಿಗೆ ಬಿಡಲಾಗಿದೆ. ಅವರು ಧರಣಿ ಮುಂದುವರಿಸಿದರೆ ನಮ್ಮ ಬೆಂಬಲ ಇದೆ ಎಂದು ಹೇಳಿ ಕೋಡಿಹಳ್ಳಿ ಚಂದ್ರಶೇಖರ್‌ ಅಲ್ಲಿಂದ ತೆರಳಿದರು.

ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ರೈತ ಮುಖಂಡರೊಂದಿಗೆ ಏನು ಸಭೆ ನಡೆಸಿದ್ದಾರೆ. ಅಲ್ಲಿ ಯಾವ ನಿರ್ಣಯ ಕೈಗೊಂಡಿದ್ದಾರೆ ಎಂಬುದು ನಮಗೆ ಲಿಖೀತವಾಗಿ ಮಾಹಿತಿ ಬಂದಿಲ್ಲ. ನಮ್ಮ ಬೇಡಿಕೆ ದರ ನಿಗದಿ ಹಾಗೂ ಬಾಕಿ ಹಣ ಪಾವತಿಯಾಗಬೇಕು. ಇದರ ಬಗ್ಗೆ ಸ್ಪಷ್ಟ ಹೇಳಿಕೆ ಬರುವವರೆಗೆ ಹೋರಾಟ ಕೈಬಿಡುವ  ಪ್ರಶ್ನೆಯೇ ಇಲ್ಲ ಎಂದು ಭಾರತೀಯ ಕೃಷಿಕ ಸಮಾಜ ಅಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.

Advertisement

ಗುರುವಾರ ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ಅಲ್ಲಿ ಯಾವ ರೀತಿ ನಿರ್ಣಯ ಬರುತ್ತದೆ ಎಂಬುದನ್ನು ತಿಳಿದುಕೊಂಡು ಮುಂದಿನ ಹೋರಾಟ ಬಗ್ಗೆ ನಿರ್ಧರಿಸಲಾಗುವುದು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ರೈತರನ್ನು ಗೂಂಡಾಗಳು ಹಾಗೂ ದರೋಡೆಕೋರರು ಎಂದು  ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಡಿಕೆಶಿ ವಿರುದ್ಧ ಸಿದ್ದುಗೆ ಜಾರಕಿಹೊಳಿ ದೂರು
ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಕಬ್ಬುಬೆಳೆಗಾರರ ಸಮಸ್ಯೆ ಕುರಿತಂತೆ ಮಂಗಳವಾರ ಸಿಎಂ ಕುಮಾರಸ್ವಾಮಿ ನಡೆಸಿದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಜರಾಗಿದ್ದಕ್ಕೆ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬೆಳಗಾವಿ ಭಾಗದ ಕಬ್ಬು ಬೆಳೆಗಾರರ ಸಮಸ್ಯೆಗೂ ಸಚಿವ ಡಿ.ಕೆ.ಶಿವಕುಮಾರ್‌ಗೂ ಯಾವುದೇ ಸಂಬಂಧವಿಲ್ಲ. ತಮಗೆ ಸಂಬಂಧವಿಲ್ಲದ ವಿಷಯದಲ್ಲಿ ಮೂಗು ತೂರಿಸುವುದು ಸರಿಯಲ್ಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರೈತರಿಗೆ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಬೆಳಗಾವಿಗೆ ಹೋಗದೆ ದ್ರೋಹ ಬಗೆದಿದ್ದಾರೆ. ಆದರೂ ಧಿಮಾಕು ತೋರುತ್ತಿದ್ದಾರೆ. ಮಾತೆತ್ತಿದರೆ ರಾಜೀನಾಮೆ ಕೊಟ್ಟು ಹೋಗುತ್ತೀನಿ ಎನ್ನುತ್ತೀರಲ್ಲಾ. ರಾಜೀನಾಮೆ ಕೊಟ್ಟು ಹೋಗಿ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಎಫ್‌ಆರ್‌ಪಿ ದರ ನಿಗದಿ ವಿಷಯದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದೇಶದ ರೈತರ ಮೇಲೆ ಬರೆ ಎಳೆದಿದೆ. ಈಗ ಅದೇ ಹಾದಿಯಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತಿದೆ. ಈ ವಿಚಾರದಲ್ಲಿ ರೈತರು ಹೇಳಿದ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು.
– ಕೋಡಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next