Advertisement

ಕಾಯ್ದೆ ತಿದ್ದುಪಡಿ ವಿರೋಧಿಸಿ ಹೋರಾಟ

01:29 PM Sep 07, 2020 | Suhan S |

ಮೈಸೂರು: ರಾಜ್ಯ ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವ್ಯಕ್ತಿ, ಸಂಘಟನೆ ಎಂಬ ಭೇದ ಭಾವ ತೊರೆದು ಐಕ್ಯ ಹೋರಾಟ ಎಂಬ ಹೆಸರಿನಡಿ ಪ್ರತಿಭಟನೆ ನಡೆಸಲು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಕ್ರಿಯಾ ಸಮಿತಿ ನಿರ್ಧರಿಸಿದೆ.

Advertisement

ನಗರದ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ಭಾನುವಾರ ನಡೆದ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಕ್ರಿಯಾ ಸಮಿತಿಯ  ಸಭೆಯಲ್ಲಿ ಸೆ.21ರಿಂದ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಯಿತು. ವಿಧಾನಮಂಡಲದ ಅಧಿವೇಶನ ಸೆ.21ರಿಂದ 30ರ ವರೆಗೆ ನಡೆಯಲಿದ್ದು, ಇದೇ ಅವಧಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿ, ವಿಧಾನಮಂಡಲದ ಅಧಿವೇಶನ ನಡೆಯಲಿರುವ 10 ದಿನ ರಾಜ್ಯದಲ್ಲಿ ನಡೆಯಲಿರುವ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವ್ಯಕ್ತಿ, ಸಂಘಟನೆ ಎಂಬ ಭೇದಭಾವ ತೊರೆದು ಐಕ್ಯ ಹೋರಾಟ ಎಂಬ ಹೆಸರಿನಡಿ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಒಪ್ಪಿಕೊಂಡರು.

13ಕ್ಕೆ ಬೆಂಗಳೂರಿನಲ್ಲಿ ಸಭೆ: ಸಭೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರೈತ, ಕಾರ್ಮಿಕ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಹೋರಾಟಕ್ಕೆ ಅಂತಿಮ ರೂಪ ನೀಡಲು ಸೆ.13 ರಂದು ಬೆಂಗಳೂರಿನಲ್ಲಿ ಇನ್ನೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು.

ಸೆ.21ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಅಹೋರಾತ್ರಿ ಧರಣಿ ನಡೆಯಲಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಜನರು ಪಾಲ್ಗೊಳ್ಳುವರು. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ವಿವಿಧ ರೀತಿಯಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸಭೆಯ ಬಳಿಕ ತಿಳಿಸಿದರು.

ಹೋರಾಟ ಅನಿವಾರ್ಯ: ಕೃಷಿ ವಿಜ್ಞಾನಿ ಡಾ. ಪ್ರಕಾಶ್‌ ಕಮ್ಮರಡಿ ಮಾತನಾಡಿ, ಈ ಸುಗ್ರೀವಾಜ್ಞೆಗಳು ಕೇವಲ ರೈತರು ಮತ್ತು ಕಾರ್ಮಿಕರಿಗೆ ಮಾತ್ರ ಮಾರಕವಾಗಿಲ್ಲ. ಜನಸಾಮಾನ್ಯರ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಭೂ ಸುಧಾರಣೆಗೆ ಸಂಬಂಧಿಸಿದ ಎರಡು ಹಾಗೂ ಎಪಿಎಂಸಿಗೆ ಸಂಬಂಧಿಸಿದ ಒಂದು ಹಾಗೂ ಇದಕ್ಕೆ ಪೂರಕವಾದ ಇತರ ಮೂರು ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಅವುಗಳನ್ನು ವಾಪಸ್‌ ಪಡೆಯಲು ಒಗ್ಗಟ್ಟಿನ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಸಾಹಿತಿ ದೇವನೂರು ಮಹದೇವ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್‌ ಮೇಟಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಹಿಂದ್‌ ಮಜ್ದೂರ್‌ ಕಿಸಾನ್‌ ಸಂಘಟನೆಯ ಕಾಳಪ್ಪ, ಸಿಪಿಎಂ ಮುಖಂಡ ಯಶವಂತ್‌, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಯಶೋಧಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next