Advertisement

ಸರಿದಾರಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ

06:10 PM Aug 12, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಒಂದು ಟ್ರ್ಯಾಕ್ ಗೆ ಬಂದಿದೆ. ಕೇಂದ್ರ ಸಚಿವರ ಗಮನಕ್ಕೆ ತಂದಿದ್ದು, ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ಕಳೆದ ಎರಡು ವರ್ಷಗಳಿಂದಲೂ ಕೂಡ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೊನ್ನೆ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ
ನಡೆಸಿದ್ದೇನೆ ಎಂದರು.

ಕ್ರಮಕ್ಕೆ ಸೂಚನೆ: ಕೇಂದ್ರ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಧ್ವನಿ ಎತ್ತಿದಾಗ ಹಲವು ಕಡೆಯಿಂದ ವಿರೋಧ ವ್ಯಕ್ತವಾಗಿದೆ. ವಿರೋಧ ಮಾಡಿದರೂ
ಅಂಥ ನಾನು ಭಯಪಟ್ಟು ಹಿಂದೆ ಸರಿಯಲ್ಲ. ನಾನು ಏನೋ ತಪ್ಪು ಮಾಡಿದ್ದೇನೆ ಎಂದು ಬಿಂಬಿಸಲು ಹೊರಟವರಿಗೆ ನನ್ನ ಹೋರಾಟದ ಮೂಲಕ ಉತ್ತರಕೊಟ್ಟಿದ್ದೇನೆ ಎಂದರು.

ಸಕ್ರಮಕ್ಕೂ ಮುಂಚೆ ಅಕ್ರಮ ಎಂದು ಒಪ್ಪಿಕೊಳ್ಳಲಿ:
ಸಕ್ರಮ ಮಾಡಬೇಕು ಎಂದು ಹೇಳುತ್ತಿರುವವರು ಮೊದಲು ಅಕ್ರಮ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಬೇಕು. ಈಗ ಅಕ್ರಮ ಮಾಡಿದ್ದೇವೆ. ಸಕ್ರಮ ಮಾಡಿಕೊಡಿ ಎಂದು ಹೇಳಿದರೆ ಅದಕ್ಕೆ ಒಂದು ಪ್ರೊಸೆಸ್‌ ಇರುತ್ತೆ. ಆದರೆ ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಮಾಡಿಕೊಡಿ ಅಂದರೆ ಅದು ಆಗಲ್ಲ ಎಂದು ಹೇಳಿದರು.

ಎಚ್ಚೆತ್ತುಕೊಳ್ಳುವ ಅಗತ್ಯವಿದೆ: ಕೆಆರ್‌ಎಸ್‌ ಡ್ಯಾಂ ಹಾಗೂ ನಮ್ಮ ಪರಿಸರ ನಮಗೆ ಮುಖ್ಯ. ಪ್ರವಾಹ ಬಂದರೆ 5
ಸಾವಿರ ಕೋಟಿ ರೂ. ಕೊಡಿ, 10 ಸಾವಿರ ಕೋಟಿ ರೂ. ಕೊಡಿ ಅಂದರೆ ಸರ್ಕಾರ ಕೊಡಬಹುದು. ಆದರೆ ಮತ್ತೆ
ಮತ್ತೆ ಪ್ರವಾಹ ಬಂದರೆ ಏನು ಮಾಡುವುದು. ಮೊದಲು ಎಚ್ಚೆತ್ತುಕೊಳ್ಳವುದು ನಮ್ಮ ಜವಾಬ್ದಾರಿ. ನಾವು ಪರಿಸರವನ್ನು ನಾಶ ಮಾಡಿದರೆ, ಪರಿಸರ ನಮ್ಮನ್ನು ನಾಶ ಮಾಡುತ್ತೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

Advertisement

ಇದನ್ನೂ ಓದಿ:ಪ್ರವಾಸಿಗರನ್ನು ಸ್ವಾಗತಿಸುತ್ತಿದೆ ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

ಹಾನಿ ಆಗುವರೆಗೂ ಕಾಯಬೇಕಾ?
ನಾನು ಬೇಬಿ ಬೆಟ್ಟಕ್ಕೆ ಹೋದಾಗ ನಾಲ್ಕು ವರ್ಷವಾಯ್ತು ಬ್ಲಾಸ್ಟಿಂಗ್‌ ನಿಲ್ಲಿಸಿ ಎಂದರು. ಈಗ ಪ್ರತಿದಿನ ಸ್ಫೋಟಕ ವಸ್ತು ಸಿಗುತ್ತಿವೆ. ಅವು 10 ವರ್ಷದ ಹಿಂದಿನವು ಸಿಕ್ಕಿದೆ. ಇದಕ್ಕೆಲ್ಲ ಯಾರು ಹೊಣೆ ಅಂತಾ ಮೊದಲು ಹುಡುಕಬೇಕು. ಈಗ ಸಕ್ರಮ ಮಾಡಿ ಅಂದರೆ ಅದನ್ನು ಒಪ್ಪಿಕೊಳ್ಳಲು ಆಗಲ್ಲ ಎಂದು ಸಂಸದೆ ಸುಮಲತಾ ಹೇಳಿದರು. ಕೆಆರ್‌ಎಸ್‌ ಗೆ ಹಾನಿ ಆಗುವವರೆಗೆ ಕಾಯಬೇಕಾ?. ಅವರ ಮಾತುಗಳು ಏನು ಎನ್ನುವುದು ಅರ್ಥ ಆಗ್ತಿಲ್ಲ. ಈಗಾಗಲೇ ಉತ್ತರ ಖಂಡದಲ್ಲಿ ಮತ್ತು ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಏನೇನು ಆಗಿದೆ ಅನ್ನೋದು ಗೊತ್ತು. ಆ ರೀತಿ ಅವಘಡಗಳು ಆಗುವವರೆಗೂ ಕಾದು, ಆ ಮೇಲೆ ಪರಿಹಾರಕ್ಕಾಗಿ ಹುಡುಕಬೇಕಾ? ಮೊದಲು ನಾವು ಮುನ್ನೆಚ್ಚರಿಕೆಕ್ರಮಕೈಗೊಳ್ಳಬೇಕು ಎಂದರು.

ಸ್ಕೋಪ್‌ ಫೌಂಡೇಷನ್‌
ವೈದ್ಯಕೀಯ ಸಲಕರಣೆ ಹಸ್ತಾಂತರ ಅಮೆರಿಕಾದ ಸರ್ಜನ್‌ ಜನರಲ್‌ ಡಾ.ವಿವೇಕ ಮೂರ್ತಿ ಅವರ ಸ್ಕೋಪ್‌ ಫೌಂಡೇಷನ್‌ ವತಿಯಿಂದ ಎರಡನೇ ಬಾರಿಗೆ ನೀಡಿರುವ ಕೋವಿಡ್‌ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಡಳಿತಕ್ಕೆ ಸಂಸದೆ ಸುಮಲತಾ ಅಂಬರೀಷ್‌ ಹಸ್ತಾಂತರಿಸಿದರು.

ನಂತರ ಮಾತನಾಡಿ, ಅಮೆರಿಕಾದಲ್ಲಿ ಕೋವಿಡ್‌ ನಿರ್ಮೂಲನೆಯ ಸರ್ಜನ್‌ ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಡ್ಯ ಮೂಲದ ಡಾ.ವಿವೇಕ್‌ಮೂರ್ತಿಯವರು, ಮಂಡ್ಯದ ಮೇಲಿನ ವಿಶೇಷ ಕಾಳಜಿ, ಪ್ರೀತಿ, ಅಭಿಮಾನದಿಂದ ಕೋವಿಡ್‌ 3ನೇ ನಿಯಂತ್ರಣಕ್ಕೆ ಸುಮಾರು 3.5 ಕೋಟಿ ರೂ. ಮೊತ್ತದ ಮೆಡಿಕಲ್‌ ಸಲಕರಣೆ, ಆಕ್ಸಿಜನ್‌ ಸರಬರಾಜು, ಎನ್‌ 95 ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಸೌಲಭ್ಯಗಳನ್ನು ಸ್ಕೋಪ್‌ ಫೌಂಡೇಷನ್‌ ಆಫ್‌ ಇಂಡಿಯಾ ಸಹಕಾರದಲ್ಲಿ
ನೀಡಿದ್ದಾರೆ. ಅವರ ಉದಾರತೆಗೆ ಅಭಿನಂದನೆ ಸಲ್ಲಿಸಿದ ಅವರು, ಸುಮಾರು 40 ವರ್ಷಗಳಿಂದ ಅಮೆರಿಕದಲ್ಲಿ
ನೆಲೆಸಿದ್ದು, ಮಂಡ್ಯದ ಜನತೆಯ ಉದ್ಧಾರ, ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿ ಎಸ್‌.
ಅಶ್ವಥಿ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್‌.ಧನಂಜಯ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next