ತಿ.ನರಸೀಪುರ: ಕಡಿಮೆ ವೇತನ ನೀಡಿ ಹೆಚ್ಚು ಅವಧಿ ದುಡಿಸಿಕೊಳ್ಳುವ ಕಾರ್ಖಾನೆಗಳ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಕ್ಕೂರು ರಾಜು ಹೇಳಿದರು.
ಪಟ್ಟಣದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ನಿಗದಿತ ವೇತನ ಸಿಗುತ್ತಿಲ್ಲ. ಜತೆಗೆ ಅವಧಿಗಿಂತ ಹೆಚ್ಚು ಸಮಯ ದುಡಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಸಂಘಟಿತರಾಗಿ ಕನಿಷ್ಠ ವೇತನ ಮತ್ತಿತರರ ಸೌಲಭ್ಯಕ್ಕೆ ಹೋರಾಡಬೇಕಿದೆ ಎಂದರು.
ಚೌಹಳ್ಳಿ ಗ್ರಾಮದ ಬಳಿ ಇರುವ ಗಾರ್ಮೆಂಟ್ಸ್‌ನಲ್ಲಿ 4,500 ಸಾವಿರ ಮಹಿಳೆಯರು ದುಡಿಯುತ್ತಿದ್ದಾರೆ. ಕಾರ್ಮಿಕ ಇಲಾಖೆ ಇದ್ದರೂ ಕೂಡ ತಾಲೂಕಿನಲ್ಲಿ ಕಾರ್ಮಿಕರಿಗೆ ಒಳಿತಿಗೆ ಪೂರಕವಾಗಿ ಕೆಲಸ ನಿರ್ವಸುತ್ತಿಲ್ಲ. ಕಾರ್ಮಿಕರಿಗೆ ಇಎಸ್‌ಐ ಚಿಕಿತ್ಸಾ ಸೌಲಭ್ಯ ದೊರಕಿಸಿಲ್ಲ. ಇದು ಕಾರ್ಮಿಕರನ್ನು ಅಸಹಾಯಕರನ್ನಾಗಿ ಮಾಡುತ್ತಿದೆ ಎಂದು ದೂರಿದರು.
ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಎಂ.ಮಾದೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ದುಡಿಯವ ನೌಕರರಿಗೆ ವಸೂಲಾತಿ ಹಣದ ಪೈಕಿ ಶೇ. 40 ರಷ್ಟು ಹಣದಲ್ಲಿ ಸಂಬಳ ಪಡೆಯುವಂತೆ ಸೂಚಿಸಲಾಗಿದೆ. ಅದರೆ, ಗ್ರಾಪಂಗಳಲ್ಲಿ ವಸೂಲಾತಿ ಸರಿಯಾಗಿ ಆಗದ ಕಾರಣ ನೌಕರರು ವರ್ಷಗಟ್ಟಲೆ ಸಂಬಳ ವಿಲ್ಲದೆ ಜೀವನಕ್ಕೆ ಪರದಾಡಬೇಕಿದೆ ಎಂದು ಅವಲತ್ತುಕೊಂಡರು.
ನಂಜನಗೂಡು ರೀಡ್ ಆ್ಯಂಡ್ ಟೈಲರ್ ಜಿಲ್ಲಾ ಕಾರ್ಮಿಕ ಮುಖಂಡ ಶಶಿಕುಮಾರ್, ಆಲಗೂಡು ಸಿ ಪುಟ್ಟಮಲ್ಲಯ್ಯ, ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಶಂಕರದೇವಮ್ಮ, ಮುಖಂಡರಾದ ಉಕ್ಕಲಗೆರೆ ಬಸವರಾಜು, ತಲಕಾಡು ಕೆಂಪರಾಜು, ನಿರಂಜನ್, ಮಹೇಶ್, ಕುಮಾರ್, ಮಹದೇವ, ರಾಜೇಂದ್ರ ಚಾಮಯ್ಯ ಇತರರಿದ್ದರು.