Advertisement
ತೂಗು ಸೇತುವೆ ಹೋರಾಟ ಸಮಿತಿಯ ರಚಿಸಿ ಹೋರಾ ಟಕ್ಕಿಳಿಯಲು ಪೆರಾಬೆ, ಚಾರ್ವಾಕ ಗ್ರಾಮಸ್ಥರು ನಿರ್ಣಯಿಸಿದ್ದಾರೆ. ಐರಾಳ ಕಡವಿಗೆ ಹದಿನೈದು ವರ್ಷದಲ್ಲಿ 15 ಜೀವ ಬಲಿ ಯಾಗಿವೆ ಎಂಬ ಮಾಹಿತಿ ಇದರ ಇತಿಹಾಸ ಕೆದಕಿದಾಗ ಸಿಕ್ಕಿದೆ.
ಚಾರ್ವಾಕ ಗ್ರಾಮದ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ದೇವರ ಅವಭೃಥ ಸ್ಥಳವಾದ ಐರಾಳ ಎನ್ನುವ ಹೆಸರಿಗೆ ಒಂದು ಇತಿಹಾಸವಿದೆ. ಈ ಕಡವಿನಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ನಾಡ ದೋಣಿ ವ್ಯವಸ್ಥೆ ಇರಲಿಲ್ಲ. ಆಗ ಐವರು ಒಬ್ಬನ್ನೊಬ್ಬರು ಕೈ ಕೈ ಹಿಡಿದುಕೊಂಡು ನದಿ ದಾಟುತ್ತಿದ್ದಾಗ ನೀರು ಪಾಲಾಗಿದ್ದರು. ಐವರು ಇಲ್ಲವಾದ ಸ್ಥಳಕ್ಕೆ ಐರಾಳ ಎನ್ನುವ ನಾಮಕರಣವಾಯಿತು ಎನ್ನುತ್ತಾರೆ ಹಿರಿಯರು. ಅದೇ ಹೆಸರು ಈಗಲೂ ಪ್ರಚಲಿತ. ಇಲ್ಲಿ ಹಲವು ವರ್ಷಗಳಿಂದ ನಾಡ ದೋಣಿ ವ್ಯವಸ್ಥೆಯಿದ್ದರೂ ಹಲವರು ನದಿ ದಾಟುವ ದುಸ್ಸಾಹಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ. ದೋಣಿಯಲ್ಲಿ ನದಿ ದಾಟಿಸುವ ವ್ಯವಸ್ಥೆ ಇತ್ತೀಚಿನ ಐದಾರು ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು. ದೋಣಿ ಮಾಲಕರು ನಿಲ್ಲಿಸಿದರು. ಬಳಿಕ ಜನ ಆಲಂಕಾರು ಮುಖಾಂತರ ಶಾಂತಿಮೊಗರು ಅಥವಾ ಏಮಯ ದೋಣಿ ಕಡವಿನಲ್ಲಿ ಅತ್ತಿಂದ ಇತ್ತ ನದಿ ದಾಟಿ ತಮ್ಮ ವ್ಯವಹಾರಕ್ಕೆ ಹೋಗುತ್ತಿದ್ದರು. ಆದರೆ ಕುಂತೂರು, ಕುಂಟ್ಯಾನ ಭಾಗದಿಂದ ಚಾರ್ವಾಕ ಗ್ರಾಮದ ಅಂಬುಲ, ಖಂಡಿಗಾ, ಚಾರ್ವಾಕ, ಕುಂಬ್ಲಾಡಿ ಮುಂತಾದ ಪ್ರದೇಶಗಳಿಗೆ ಸುಲಭ ಸಂಪರ್ಕಕ್ಕೆ ಇರುವುದು ಐರಾಳ ಕಡವು. ನದಿ ನೀರು ಕಡಿಮೆಯಾದಾಗ ಅಥವಾ ಬೇಸಿಗೆ ಕಾಲದಲ್ಲಿ ಇಲ್ಲಿ ಜನರಿಗೆ ಸಮಸ್ಯೆ ಇಲ್ಲ. ಆದರೆ ಮಳೆ ನೀರು ಅಧಿಕವಾದಾಗ ಕಡವು ಅಪಾಯದ ಮಟ್ಟದಲ್ಲಿದ್ದಾಗ ಏನೂ ಮಾಡದ ಸ್ಥಿತಿ ಇದೆ.
Related Articles
ಐರಾಳದಿಂದ ಅರ್ಧ ಕಿ.ಮೀ. ದೂರದಲ್ಲಿ ನವೆಂಬರ್ ತಿಂಗಳಲ್ಲಿ ಬಾರ್ಕುಲಿ ಗುಜ್ಜರ್ಮೆ ಎಂಬಲ್ಲಿ ತೆಪ್ಪ ಮುಳುಗಿ ಇಬ್ಬರು ಮೃತಪಟ್ಟಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡ ಸಿ.ಪಿ. ಜಯರಾಮ ಗೌಡರ ಪುತ್ರ ವಿಶ್ವಾಸ್ ಅರುವ ಹಾಗೂ ಅವರ ಸಂಬಂಧಿಯೋರ್ವರು ಇದೇ ಜಾಗದಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳೀಯರಾದ ಸಂಕಪ್ಪ ಗೌಡ ಮತ್ತು ಮತ್ತೂಬ್ಬರು ಇಲ್ಲೇ ಸಾವನ್ನಪ್ಪಿದ್ದರು. ಎರಡು ಜನ ಮಹಿಳೆಯರು ಬಟ್ಟೆ ತೊಳೆ ಯಲು ಬಂದವರು ಕಾಲು ಜಾರಿ ನೀರು ಪಾಲಾಗಿದ್ದರು. ಆ ಬಳಿಕ ಮತ್ತೂಬ್ಬ ರೂ ನದಿಪಾಲಾಗಿದ್ದರು. ಕುಂತೂರಿನ ವ್ಯಕ್ತಿ ಯೊಬ್ಬರು ಅಂಬುಲಕ್ಕೆ ಮಳೆಗಾಲದಲ್ಲಿ ನದಿ ದಾಟಲು ಹೋಗಿ ನೀರು ಪಾಲಾಗಿ ಶವ ಸಿಕ್ಕಿರಲಿಲ್ಲ. ಚಾರ್ವಾಕ ಅರ್ವದ ಯುವಕ ಹಾಗೂ ಅವರ ಸಂಬಂಧಿಕ ಯುವಕರಿಬ್ಬರು ಒಂದೇ ದಿನ ಇಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಕುಂತೂರಿನ ಪಲ್ಲತಡ್ಕ ನಿವಾಸಿಯೊಬ್ಬರು ಇಲ್ಲಿಯೇ ನೀರು ಪಾಲಾಗಿದ್ದರು.
Advertisement
ಇಪ್ಪತ್ತೇಳು ವರ್ಷಗಳ ಬೇಡಿಕೆಕುಂತೂರು, ಪೆರಾಬೆ, ಚಾರ್ವಾಕ, ಕುದ್ಮಾರು, ಕಾಣಿಯೂರು ಗ್ರಾಮದ ಸಂಪರ್ಕಕ್ಕೆ ಐರಾಳ ಮುಖ್ಯ ಸ್ಥಳ. ಮಳೆಗಾಲದಲ್ಲಿ ಸುಮಾರು 9ಕಿ.ಮೀ ಸುತ್ತು ಬಳಸಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸಾಗಬೇಕಿದೆ. ಇದನ್ನು ತಪ್ಪಿಸಲು ನದಿ ದಾಟಲು ಯತ್ನಿಸಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಸರ್ವಋತು ತೂಗುಸೇತುವೆ ನಿರ್ಮಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳಿಗೆ 1990ರಲ್ಲಿ ಮನವಿ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೋರಾಟ ನಡೆಸಿಯೇ ಸಿದ್ಧ
ಐರಾಳದಲ್ಲಿ ಈವರೆಗೆ ಹಲವು ಜೀವಗಳು ಬಲಿಯಾಗಿವೆ. ಇಂತಹ ಘಟನೆಗಳು ಮುಂದೆ ಮರುಕಳಿಸಬಾರದೆಂದು ಇಲ್ಲಿ ಸರ್ವಋತು ತೂಗುಸೇತುವೆ ನಿರ್ಮಾಣಕ್ಕೆ ನ್ಯಾಯಯುತ ಹೋರಾಟ ಮಾಡಲಾಗುವುದು. ಈ ವಿಚಾರವಾಗಿ ಮುಂದಿನ ಪೆರಾಬೆ ಗಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.
– ಚೆನ್ನಪ್ಪಗೌಡ,
ಪೆರಾಬೆ ಗ್ರಾ.ಪಂ.ಸದಸ್ಯ – ಸದಾನಂದ ಆಲಂಕಾರು