ಅಲ್ ಥುಮಾಮ: ಆತಿಥೇಯ ರಾಷ್ಟ್ರವೆಂಬ ಒಂದೇ ಕಾರಣಕ್ಕಾಗಿ ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಪಡೆದ ಕತಾರ್, ಈ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿದೆ. ಆದರೆ ಅದಿನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿರುವುದೊಂದೇ ಬಾಕಿ. ಶುಕ್ರವಾರದ ದ್ವಿತೀಯ ಪಂದ್ಯದಲ್ಲಿ ಅದು ಸೆನೆಗಲ್ ಕೈಯಲ್ಲಿ 1-3 ಗೋಲುಗಳ ಹೊಡೆತ ಅನುಭವಿಸಿತು. ಕತಾರ್ ತನ್ನ ಮೊದಲ ಪಂದ್ಯದಲ್ಲಿ ಈಕ್ವೆಡಾರ್‌ಗೆ ಶರಣಾಗಿತ್ತು. ಕೊನೆಯ ಪಂದ್ಯದಲ್ಲಿ ಬಲಿಷ್ಠ ನೆದರ್ಲೆಂಡ್ಸ್ ವಿರುದ್ಧ ಸೆಣೆಸಲಿದೆ.
ಆಫ್ರಿಕನ್ ರಾಷ್ಟ್ರವಾದ ಸೆನೆಗಲ್ ಈ ಪಂದ್ಯದ ನೆಚ್ಚಿನ ತಂಡವಾಗಿತ್ತು. ಇದಕ್ಕೆ ತಕ್ಕ ಪ್ರದರ್ಶನ ನೀಡಿತು. 3 ಗೋಲುಗಳನ್ನು ಕ್ರಮವಾಗಿ ಬೌಲಯೆ ದಿಯ (41ನೇ ನಿಮಿಷ), ಫಮಾರ ದೈಧಿಯು (48ನೇ ನಿಮಿಷ) ಹಾಗೂ ಬಂಬ ಡಿಯೆಂಗ್ (84ನೇ ನಿಮಿಷ) ಅವರಿಂದ ದಾಖಲಾಯಿತು. ಕತಾರ್‌ನ ಏಕೈಕ ಗೋಲನ್ನು 78ನೇ ನಿಮಿಷದಲ್ಲಿ ಮೊಹಮ್ಮದ್ ಮುಂಟಾರಿ ಹೊಡೆದರು. ಕತಾರ್‌ಗೆ ತಾನೂ ಒಂದು ಗೋಲು ಹೊಡೆದೆ ಎನ್ನುವುದು ಬಹುಶಃ ಸಂತಸದ ಸಂಗತಿಯಾಗಿರುತ್ತದೆ. ಈ ಕೂಟ ಭವಿಷ್ಯದಲ್ಲಿ ಆ ದೇಶದ ಫುಟ್‌ಬಾಲ್ ಬೆಳವಣಿಗೆಗೆ ಕಾರಣೀಭೂತವಾಗಬಹುದು.
ಆಫ್ರಿಕನ್ ರಾಷ್ಟ್ರವಾದ ಸೆನೆಗಲ್ ಇದರೊಂದಿಗೆ ಗೆಲುವಿನ ಖಾತೆ ತರೆದಂತಾಯಿತು. ಅದೀಗ ‘ಎ’ ವಿಭಾಗದ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅದೃಷ್ಟವಿದ್ದರೆ ನಾಕೌಟ್ ಪ್ರವೇಶಿಸೀತು.
ಫಲಿತಾಂಶ
ಸೆನೆಗಲ್: 03
ಕತಾರ್: 01