ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಗ್ರಾಹ ಕರನ್ನು ಆಕರ್ಷಿಕಬೇಕು ಎಂಬ ಉದ್ದೇಶ ದಿಂದ ವಿಭಿನ್ನ ರೀತಿಯಲ್ಲಿ ಸಿದ್ಧತೆ ನಡೆಸಿದ್ದ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರದ ನೈಟ್ ಕರ್ಫ್ಯೂ ಆದೇಶ ಆಘಾತ ಉಂಟುಮಾಡಿದೆ.
ಕೊರೊನಾ ಆರಂಭವಾದಾಗಿನಿಂದ ಈ ವರೆಗೆ ಹೋಟೆಲ್, ರೆಸ್ಟೋರೆಂಟ್, ಆಟೋ- ಟ್ಯಾಕ್ಸಿ, ಪ್ರವಾಸೋದ್ಯಮ, ಸಾರಿಗೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಆರ್ಥಿಕವಾಗಿ ಸಾಕಷ್ಟು ನಷ್ಟ ಮಾಡುವುದರ ಜೊತೆಗೆ ಜೀವಹಾನಿಗೂ ಕಾರಣವಾಗಿದೆ.
ಇದೀಗ ಹೊಸ ವರ್ಷದ ಹೆಸರಿನಲ್ಲಿ ಒಂದಿಷ್ಟು ವಹಿವಾಟು ನಡೆಸಲು ಸಿದ್ಧತೆ ಮಾಡಿಕೊಂಡಿದ್ದವರಿಗೆ ನೈಟ್ ಕರ್ಫ್ಯೂ ಆದೇಶ ಮತ್ತೂಮ್ಮೆ ಆತಂಕ ಸೃಷ್ಟಿಸಿದೆ. ಒಮಿಕ್ರಾನ್ ಸೋಂಕು ನಿಯಂತ್ರಿಸುವುದಕ್ಕಾಗಿ ಡಿ.28ರಿಂದ ಜ.7ರ ವರೆಗೆ ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ “ನೈಟ್ ಕರ್ಫ್ಯೂ’ ಜಾರಿಗೊಳಿಸಿದೆ.
ಇದಕ್ಕೆ ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಪಬ್, ಹೋಟೆಲ್ ಮಾಲೀಕರು, ಓಲಾ/ಊಬರ್, ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೊಸ ಆಚರಣೆಗಾಗಿ ಹೋಟೆಲ್ ಉದ್ಯಮ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೀಗ ಸರ್ಕಾರದ ನೈಟ್ ಕರ್ಫ್ಯೂ ಆದೇಶ ನಮ್ಮೆಲ್ಲರನ್ನು ಚಿಂತೆಗೀಡುಮಾಡಿದೆ.
ಗಾಯದ ಮೇಲೆ ಬರೆ ಎಳೆದಂತಾಗಿದೆ. ಡಿ.24ರ ಆದೇಶದಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ಕೇವಲ ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದು ಹೇಳಿದ್ದ ಸರ್ಕಾರ, ಇದೀಗ ನೈಟ್ ಕರ್ಫ್ಯೂ ಜಾರಿಗೊಳಿಸಿ ವಹಿವಾಟು ಸಂಪೂರ್ಣವಾಗಿ ಹಾಳಾಗುವಂತೆ ಮಾಡಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸರ್ಕಾರ ಮಾರ್ಗಸೂಚಿ ಹೊರಡಿಸುವ ಮೊದಲು ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರ ಕ್ಷೇತ್ರಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಸಿನಿಮಾ ಥಿಯೇಟರ್‌ಗಳಿಗೆ ಶೇ.50 ನೀಡಿದ್ದ ಆದೇಶವನ್ನು ಕೇವಲ ಅರ್ಧಗಂಟೆಯಲ್ಲಿ ರಂದ್ದುಗೊಳಿಸಿ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿವೆ ಎಂದು ಆರೋಪ ಮಾಡಿದರು.