Advertisement
ನವನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರವೇ, ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ, ಜನ ಜಾಗೃತಿ ವೇದಿಕೆ ಸೇರಿದಂತೆ ಸುಮಾರು 10ಕ್ಕೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಉತ್ತರ ಕರ್ನಾಟಕದ 8 ಜಿಲ್ಲೆಗಳ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ 11 ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.
* ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಿ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಬೇಕು. ಪ್ರವಾಹ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜತೆಗೆ ಹರಿದು ಬರುವ ಪ್ರವಾಹದ ಹೆಚ್ಚುವರಿ ನೀರನ್ನು ತಿರುಗಿಸಿ, ಕೃಷಿ ಮತ್ತು ಇತರೆ ಜನ ಬಳಕೆಗೆ ಬಳಸಲು ದೀಘ್ರ ಕಾಲಿಕ ಯೋಜನೆ ಜಾರಿಗೊಳಿಸಬೇಕು.
Related Articles
Advertisement
* ಪ್ರವಾಹದಿಂದ ರೈತರ ಬೆಳೆ ನಾಶವಾಗಿದ್ದು, ವೈಜ್ಞಾನಿಕವಾಗಿ ಪೂರ್ಣ ನಷ್ಟಕ್ಕೆ ಪರಿಹಾರ ಕೊಡಬೇಕು. ಒಂದು ಎಕರೆ ಕಬ್ಬಿಗೆ 1 ಲಕ್ಷ, ದಾಳಿಂಬೆ, ದ್ರಾಕ್ಷಿ, ಬಾಳೆ, ಪೇರಲ, ಅರಿಶಿಣ, ಉಳ್ಳಾಗಡ್ಡಿ, ಸೂರ್ಯಕಾಂತಿ, ಹತ್ತಿ, ಗೋವಿನ ಜೋಳ ಮುಂತಾದ ಬೆಳೆಗೆ ಹಾನಿಗೆ ಎಕರೆಗೆ 50 ಸಾವಿರ, ಕುರಿ-ಮೇಕೆ ಹಾನಿಗೆ 20 ಸಾವಿರ ಪರಿಹಾರ ನೀಡಬೇಕು. ಸರ್ಕಾರ ಸದ್ಯ ನಡೆಸಿರುವ ಸಮೀಕ್ಷೆಯಲ್ಲಿ ಲೋಪಗಳಿದ್ದು, ಪುನರ್ ಸಮೀಕ್ಷೆ ನಡೆಸಬೇಕು.
* ಪ್ರವಾಹ ಪೀಡಿತ ಪ್ರದೇಶದ ರೈತರು ಪಡೆದ ಕೃಷಿ, ಬೆಳೆ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳು, ಸಣ್ಣ-ಪುಟ್ಟ ವ್ಯಾಪಾರಸ್ಥರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹೊಸದಾಗಿ ಶೂನ್ಯ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ನೀಡಬೇಕು.
* ಸಂತ್ರಸ್ತರಿಗೆ ಪರಿಹಾರ ನೀಡಲು ಇರುವ ಕೇಂದ್ರದ ಎನ್‌ಡಿಆರ್‌ಎಫ್ ಮತ್ತು ರಾಜ್ಯದ ಎಸ್‌ಡಿಆರ್‌ಎಫ್ ಮಾರ್ಗ ಸೂಚಿ ಅವೈಜ್ಞಾನಿಕವಾಗಿದ್ದು, ತಿದ್ದುಪಡಿ ಮಾಡಬೇಕು.
* ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮೂಲಭೂತ ಸೌಲಭ್ಯಗಳಿರುವ ಶೆಡ್ ನಿರ್ಮಿಸಬೇಕು. ಶಾಶ್ವತ ವ್ಯವಸ್ಥೆ ಆಗುವವರೆಗೂ ಮನೆ ಬಾಡಿಗೆ ಪಡೆದಿರುವ ಎಲ್ಲರಿಗೂ ಮಾಸಿಕ 10 ಸಾವಿರ ಬಾಡಿಗೆ ಕೊಡಬೇಕು.
* ಪ್ರವಾಹದಿಂದ ರೈತರ ಹೊಲಗಳ ಒಡ್ಡು ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಮೀನು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಅವು ಪುನಃ ಸುಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕು.
* ಸಂತ್ರಸ್ತರಿಗೆ ಕನಿಷ್ಠ 1 ವರ್ಷದವರೆಗೆ ಉಚಿತವಾಗಿ ಪಡಿತರ ನೀಡಬೇಕು. ಜೀವನ ನಿರ್ವಹಣೆಗಾಗಿ ಪ್ರತಿ ಕುಟುಂಬಕ್ಕೆ ಮಾಸಿಕ 15 ಸಾವಿರ ಭತ್ಯೆ ನೀಡಬೇಕು. ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕ, ವಸತಿ ನಿಯಗಳ ಶುಲ್ಕ ಭರಿಸಬೇಕು. ಪ್ರವಾಹ ಪಿಡೀತ ಪ್ರದೇಶಗಳಲ್ಲಿ ಕಾಯಂ ಆಸ್ಪತ್ರೆ ಇಲ್ಲದ ಪ್ರದೇಶಗಳಲ್ಲಿ ಸಂಚಾರಿ ಆಸ್ಪತ್ರೆಗಳನ್ನು 24 ಗಂಟೆ ಕಲ್ಪಿಸಬೇಕು.
* ಸಂತ್ರಸ್ತರ ಮನೆಯಲ್ಲಿ ಮದುವೆ ಕಾರ್ಯ ನಿಶ್ಚಯಿಸಿದಲ್ಲಿ ಕನಿಷ್ಠ ಒಂದು ವರ್ಷದೊಳಗೆ ಸರಳ ಮದುವೆ ವೆಚ್ಚವನ್ನು ಸರ್ಕಾರ ನೀಡಬೇಕು. ವೃದ್ಧಾಪ್ಯ, ವಿಧವಾ ವೇತನ, ಬಾಣಂತಿಯರ ಗೌರವಧನ, ಪ್ರತಿ ತಿಂಗಳು ಕಡ್ಡಾಯವಾಗಿ ನೀಡಬೇಕು. ಪ್ರವಾಹ ಪ್ರದೇಶದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿ ಕೊಡಿಸಬೇಕು.
* ನೆರೆ ಪೀಡಿತ ಗ್ರಾಮಗಳಲ್ಲಿ ಹಾನಿಯಾದ ಮನೆ ಹಾಗೂ ಬೆಳೆಗೆ ಯೋಗ್ಯ ಪರಿಹಾರ ನೀಡಬೇಕು.
* ನೆರೆ ಸಂತ್ರಸ್ತರ ಜ್ವಲಂತ ಸಂಕಷ್ಟಗಳ ಕುರಿತು ಚರ್ಚಿಸಲು ವಿಧಾನಮಂಡಲದ ಅಧಿವೇಶನ ಕರೆಯಬೇಕು.
ಡಿಸಿಎಂ ಗೋವಿಂದ ಕಾರಜೋಳ ಬಾರದ್ದಕ್ಕೆ ಆಕ್ರೋಶ: ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಅವರು ತಮ್ಮ ಪ್ರತಿನಿಧಿಯನ್ನಾಗಿ ಯಾರನ್ನಾದರೂ ಕಳುಹಿಸುವುದಾಗಿ ಹೇಳಿದ್ದರು. ಜಿಲ್ಲೆಗೆ ಆಗಮಿಸಿದ್ದ ಡಿಸಿಎಂ ಗೋವಿಂದ ಕಾರಜೋಳರನ್ನು ಭೇಟಿಯಾದ ಸಂಘಟಕರು, ನೆರೆ ಸಂತ್ರಸ್ತರ ಸಂಕಷ್ಟ ಅರಿಯಲು ಬಹಿರಂಗ ಅಧಿವೇಶನಕ್ಕೆ ಬರಬೇಕು. ನಿಮಗೆ ಹೆಚ್ಚು ಸಮಯ ಕಳೆಯಲು ಆಗದಿದ್ದರೂ ಐದು ನಿಮಿಷದಲ್ಲಿ ಬಂದು ಹೋಗಬೇಕು ಎಂದು ಮನವಿ ಮಾಡಿದ್ದರು. ಆದರೆ, ಕಾರಜೋಳರು ಬರಲಿಲ್ಲ. ಇದಕ್ಕೆ ಇಡೀ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತವಾಯಿತು.