Advertisement

‘ಅಪ್ಪ-ಅಮ್ಮ ಒಂದೇ ಪಕ್ಷಕ್ಕೇ ಓಟು ಹಾಕುತ್ತಿದ್ದರು;ನಾನು ಹಾಗೆ ಮಾಡಲ್ಲ

12:20 PM May 05, 2018 | Team Udayavani |

ಮಂಗಳೂರು: ‘ಹಲವು ವರ್ಷಗಳಿಂದ ಒಂದೇ ಪಕ್ಷಕ್ಕೆ ಮತ ಹಾಕುತ್ತಿದ್ದೇನೆ. ಅವರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದಲ್ಲ. ಆದರೆ ಹೊಸ ಪಕ್ಷಗಳಿಗೆ ಅವಕಾಶ ನೀಡಬೇಕು. ಅವರ ಅಭಿವೃದ್ಧಿ ಬಗೆಗಿನ ಆಲೋಚನೆಗಳಿಗೆ ಸೂಕ್ತ ವೇದಿಕೆ ನೀಡಬೇಕು ಎನ್ನುವ ಕಾರಣಕ್ಕೆ ಈ ಬಾರಿ ಪಕ್ಷ ಬದಲಿಸುತ್ತಿದ್ದೇನೆ’.

Advertisement

ಹೀಗಂತ, ಬೈಕಂಪಾಡಿ ಜಂಕ್ಷನ್‌ನಲ್ಲಿ ಚಪ್ಪಲಿ ಹೊಲಿಯುವ ಕಾಯಕದಲ್ಲಿ ನಿರತರಾಗಿದ್ದ ಸುಧಾಕರ್‌ ಹೇಳಿದರು. ‘ನಾನು ಕೋಡಿಕಲ್‌ ನಿವಾಸಿ. ಜೀವನೋಪಾಯಕ್ಕಾಗಿ ಚಪ್ಪಲಿ ಹೊಲಿ ಯುವ ಕಾಯಕದಲ್ಲಿ ತೊಡಗಿದ್ದೇನೆ. ನನ್ನ ಅಪ್ಪ, ಅಮ್ಮ ಯಾವ ಪಕ್ಷಕ್ಕೆ ಮತ ಹಾಕುತ್ತಿದ್ದರೂ ಅದೇ ಪಕ್ಷಕ್ಕೆ ನಾನು ಮತ ಹಾಕುತ್ತಿದ್ದೆ. ಆದರೆ ಈಗ ನನಗೆ ಮತದಾನದ ಮಹತ್ವ ಅರಿವಾಗಿದೆ. ಅದಕ್ಕಾಗಿ ಅರ್ಹರಿಗೆ ಮತದಾನ ಮಾಡುತ್ತೇನೆ’ ಎಂದರು ಸುಧಾಕರ್‌.

ಮಂಗಳೂರು ಉತ್ತರ ಕ್ಷೇತ್ರದ ಪಣಂಬೂರು, ಹೊಸಬೆಟ್ಟು, ಸುರತ್ಕಲ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಟ ನಡೆಸಿ ಮತದಾರರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದಾಗ ‘ಉದಯವಾಣಿ’ಗೆ ಲಭಿಸಿದ ಒಂದು ಆಯಾಮದ ನೋಟ ಇದು.

ಸುಧಾಕರ್‌ ಜತೆ ಮಾತು ಮುಗಿಸಿ ಮುಂದೆ ಸಾಗುತ್ತಿದ್ದಂತೆ ರಿಕ್ಷಾ ಸ್ಟ್ಯಾಂಡ್  ಬಳಿ ರಿಕ್ಷಾ ಚಾಲಕರ ತಂಡವೊಂದು ಪೇಪರ್‌ ಓದುತಿತ್ತು. ಅವರೊಂದಿಗೆ ಮಾತಿಗಿಳಿದಾಗ ‘ಜನರು ಪಕ್ಷ, ಅಭ್ಯರ್ಥಿ, ಅಭಿವೃದ್ಧಿ ಕಾರ್ಯಗಳನ್ನು ನೋಡಿ ಹಾಕುತ್ತಾರೆ ನಿಜ. ಆದರೆ ಒಂದು ಪಕ್ಷದಿಂದ ಒಬ್ಬ ಅಭ್ಯರ್ಥಿ ಕಣಕ್ಕಿಳಿಯುವುದಾದರೆ ಆ ವ್ಯಕ್ತಿ ಜನ ರ ಕಷ್ಟಗಳಿಗೆ ಕಿವಿಯಾಗಿರಬೇಕು. ಕ್ಷೇತ್ರದ ಸಮಸ್ಯೆ ಬಗ್ಗೆ ಅರಿತಿರಬೇಕು. ಕೆಲವು ಪಕ್ಷಗಳು ಚುನಾವಣೆ ವೇಳೆ ಯಾವುದೋ ಹೊಸಬರನ್ನು ತಂದು ನಿಲ್ಲಿಸುತ್ತಾರೆ. ಅವರ ಬಗ್ಗೆ ಜನಗಳಿಗೆ ತಿಳಿದಿರುವುದಿಲ್ಲ. ಇದರಿಂದ ಜನ ಗೊಂದಲಕ್ಕೊಳಗಾಗುತ್ತಾರೆ’ ಎಂದರು.

ಭಾವನೆ ಹಂಚಿಕೊಳ್ಳುವಂತಿಲ್ಲ
ನಮ್ಮ ತಂಡ ಮುಂದೆ ಸಾಗಿದಾಗ ಎನ್‌ಎಂಪಿಟಿ ಕಾಲೊನಿ ಎದುರಾಯಿತು. ಅತ್ತ ಹೋಗಿ ಅಲ್ಲಿನ ಜನರಲ್ಲಿ ಮಾತನಾಡೋಣ ಎಂದು ಸಾಗುತ್ತಿದ್ದಂತೆ ಅಲ್ಲಿ ಒಂದು ತಂಡ ಕುಳಿತು ಚಾ ಕುಡಿಯುತ್ತಿತ್ತು. ಅಲ್ಲಿ ತೆರಳಿ ಮುಂದಿನ ಸರಕಾರದಿಂದ ಯಾವ ರೀತಿ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದೀರಿ ಎಂದು ಕೇಳಿದರೆ ‘ನಾವೆಲ್ಲ ಸರಕಾರಿ ನೌಕರರು. ನಾವು ಯಾವುದೇ ಪಕ್ಷ, ಸರಕಾರದ ಬಗ್ಗೆ ಮಾತನಾಡುವಂತಿಲ್ಲ. ನಮ್ಮ ಅನಿಸಿಕೆ ನೀವು ಬರೆದರೆ ನಮ್ಮ ಕೆಲಸಕ್ಕೆ ತೊಂದರೆಯಾದೀತು’ ಎನ್ನುತ್ತ ದೂರ ಹೋದರು.

Advertisement

ನೀರಲ್ಲಿ ನಿಂತು ಟೀ ಕುಡೀಬೇಕಾ?
ಹೊಸಬೆಟ್ಟು ಫಿಶರೀಸ್‌ ರಸ್ತೆಯ ಹೊಟೇಲ್‌ ಒಂದಕ್ಕೆ ನಮ್ಮ ತಂಡ ತೆರಳಿದಾಗ ಅಲ್ಲಿ ಚಾ ಸವಿಯುತ್ತಾ ಒಂದು ತಂಡ ಕುಳಿತಿತ್ತು. ‘ನಮ್ಮ ಊರಿಗೆ ಉತ್ತಮ ರಸ್ತೆ ಒದಗಿಸಲಾಗಿದೆ. ಆದರೆ ಚರಂಡಿಯನ್ನೇ ಮಾಡಲಾಗಿಲ್ಲ. ಇದರಿಂದ ಮಳೆಗಾಲದಲ್ಲಿ ಮಳೆ ನೀರು ಈ ಹೋಟೆಲ್‌ ಒಳಭಾಗಕ್ಕೆ ಬರಲಿದೆ. ಆಗ ನಾವು ನೀರಲ್ಲೇ ನಿಂತು ಚಾ ಕುಡಿಯಬೇಕಾಗುತ್ತದೆ. ಯಾವುದೇ ಪಕ್ಷದ ಆಭ್ಯರ್ಥಿಗಳು ಜಯ ಗಳಿಸಿದರೂ ಪರವಾಗಿಲ್ಲ. ಇಲ್ಲಿ ಚರಂಡಿ ವ್ಯವಸ್ಥೆಯಾಗಬೇಕು’ ಎಂದವರು ಒಕ್ಕೊರಲಿನ ಅಭಿಪ್ರಾಯ ಸೂಚಿಸಿದರು.

ಅದೇ ರಸ್ತೆಯಲ್ಲೇ ಮುಂದೆ ಸಾಗುತ್ತಿದ್ದಂತೆ ಮನೆಯ ಮುಂಭಾಗದಲ್ಲಿ ಒಬ್ಬ ಮಹಿಳೆ ನಿಂತಿದ್ದರು. ಸುಂದರ ಮುಗುಳ್ನಗೆಯೊಂದಿಗೆ ಸ್ವಾಗತಿಸಿದ ಅವರಲ್ಲಿ ‘ನಿಮ್ಮ ಭಾಗದ ಸಮಸ್ಯೆ ಏನು? ಈ ಮತದಾನದಲ್ಲಿ ನಿಮ್ಮ ನಿರೀಕ್ಷೆ ಏನು’ ಎಂದು ಕೇಳಿದೆವು. ‘ಇತ್ತೆ ಇಲ್ಲಡ್‌ ಅಂಜೊವ್‌ನಕ್ಲ್  ಏರ್ಲಾ ಇಜ್ಜೆರ್‌. ಎಂಕ್‌ ಅವು ಗೊತ್ತಾಪುಜಿ’ (ಮನೆಯಲ್ಲಿ ಯಾರೂ ಗಂಡಸರು ಇಲ್ಲ… ನನಗೆ ಅದೆಲ್ಲಾ ಗೊತ್ತಾಗುವುದಿಲ್ಲ) ಎಂದು ಹೇಳಿ ಒಳನಡೆದರು!

ಓಟಿಗಾಗಿ ಅಲ್ಲಿಯ ವರೆಗೆ ಹೋಗಬೇಕಲ್ಲ…
ಈ ಬಾರಿಯ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ಎಷ್ಟು ಅರಿವು ಇದೆ ಎಂದು ತಿಳಿಯಲು ಪಣಂಬೂರು ರಸ್ತೆ ಬದಿ
ನಿಂತಿದ್ದ ಸಿದ್ದಣ್ಣ ಅವರಲ್ಲಿ ಕೇಳಿದಾಗ, ‘ನಾನು ಮೂಲತಃ ಧಾರವಾಡದವನು. ಇಲ್ಲಿಯ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡಲು ಬಂದಿದ್ದೇವೆ. ಮತದಾನ ಮಾಡಲಿಕ್ಕಾಗಿಯೇ ಅಲ್ಲಿಯವರೆಗೆ ಹೋಗಬೇಕಲ್ಲಾ? ಬಸ್ಸಿಗೆ, ಹೋಗಿ ಬರುವ ಖರ್ಚು ಎಲ್ಲ ನೆನೆಸಿಕೊಂಡರೆ ಮತದಾನವೇ ಬೇಡ ಎಂದೆನಿಸುತ್ತದೆ’ ಎಂದು ಹೇಳಿ ಜಾಗ ಖಾಲಿ ಮಾಡಿದರು. ಬೇರೆ ಊರುಗಳಿಂದ ನಗರಕ್ಕೆ ಬಂದು ಕೂಲಿ ಕೆಲಸ ಮಾಡುತ್ತ ಖರ್ಚುವೆಚ್ಚಗಳಿಂದಾಗಿ ಮತದಾನದ ಬಗ್ಗೆ ನಿರುತ್ಸಾಹ ಹೊಂದಿರುವ ಇನ್ನೂ ಹಲವರು ಎದುರಾದರು.

ಇತ್ತೀಚೆಗೆ ಕೆಲವು ಪಕ್ಷಗಳು ಚುನಾವಣೆ ಸಮಯದಲ್ಲಿ ಯಾವುದೋ ಹೊಸ ಮುಖಗಳನ್ನು ತಂದು ನಿಲ್ಲಿಸುತ್ತಾರೆ. ಅವರ ಬಗ್ಗೆ ಜನಗಳಿಗೆ ತಿಳಿದಿರುವುದಿಲ್ಲ. ಇದರಿಂದ ಜನ ಗೊಂದಲಕ್ಕೊಳಗಾಗುತ್ತಾರೆ.
 -ರಿಕ್ಷಾ ಚಾಲಕರು, ಬೈಕಂಪಾಡಿ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next